ರಸ್ತೆ ಅಧ್ವಾನ- ಗಿಡ ನೆಟ್ಟು ಗ್ರಾಮಸ್ಥರ ಆಕ್ರೋಶ

231

Get real time updates directly on you device, subscribe now.

ಗುಬ್ಬಿ: ಸಂಸದರ ಆದರ್ಶ ಗ್ರಾಮ ಪಂಚಾಯಿತಿ ಮಾರಶೆಟ್ಟಿಹಳ್ಳಿ ವ್ಯಾಪ್ತಿಯಲ್ಲಿ ಬರುವ ಕಡಬ ಹೋಬಳಿ ಬಾಡೇನಹಳ್ಳಿ ಗ್ರಾಮದಲ್ಲಿ ಹಾಗೂ ಗ್ರಾಮವನ್ನು ಸಂಪರ್ಕಿಸುವ ರಸ್ತೆಗಳು ಗುಂಡಿಗಳು ಬಿದ್ದು ಸಂಪೂರ್ಣವಾಗಿ ಹಾಳಾಗಿದ್ದು, ಮಳೆಗಾಲದಲ್ಲಿ ನೀರು ನಿಂತು ಕೆಸರು ಆಗಿರುವುದರಿಂದ ಜನ ಜಾನುವಾರು ತಿರುಗಾಡಲು ಪ್ರಯಾಸ ಪಡುವಂತಾಗಿದ್ದು, ಇದರಿಂದ ಬೇಸತ್ತ ಗ್ರಾಮದ ಜನತೆ ರಸ್ತೆಯಲ್ಲಿ ತೆಂಗು, ಅಡಿಕೆ ಸಸಿ ಹಾಗೂ ಬಾಳೆ ಗಿಡಗಳನ್ನು ನೆಡುವುದರ ಮೂಲಕ ಪ್ರತಿಭಟನೆ ಮಾಡಿದರು.
ಗ್ರಾಮದ ರಸ್ತೆ ಸರಿಪಡಿಸಿಕೊಡುವಂತೆ ಸಂಸದರು, ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೂ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ರಸ್ತೆ ಸರಿಪಡಿಸಿಲ್ಲ. ಇದರಿಂದ ನಮಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ಈ ಗ್ರಾಮವು ಸಂಸದರ ಆದರ್ಶ ಪಂಚಾಯಿತಿ ಮಾರಶೆಟ್ಟಿಹಳ್ಳಿ ವ್ಯಾಪ್ತಿಯಲ್ಲಿದ್ದರೂ ಸಂಸದರು ಯಾವುದೇ ಅನುದಾನ ನೀಡದೆ ನಮ್ಮ ಗ್ರಾಮವನ್ನು ಕಡೆಗಣಿಸಿದ್ದಾರೆ. ಆದರ್ಶ ಗ್ರಾಮ ಪಂಚಾಯಿತಿ ಎನ್ನುವುದು ಕೇವಲ ದಾಖಲೆಗೆ ಅಷ್ಟೇ ಸೀಮಿತವಾಗಿದೆ. ಶಾಸಕರು ಇತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಅಳಿಲುಘಟ್ಟ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯರು ಒಮ್ಮೆಯೂ ಭೇಟಿ ನೀಡಿದ್ದಿಲ್ಲ ಹಾಗೂ ಯಾವುದೇ ಅನುದಾನವನ್ನು ನಮ್ಮ ಗ್ರಾಮಕ್ಕೆ ಬಳಸಿಲ್ಲ ಎಂದು ದೂರಿದರು. ಅನುದಾನದ ಕೊರತೆಯಿಂದ ಈ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಪ್ರಗತಿ ಕಾಣದಂತಾಗಿವೆ. ಗ್ರಾಮದಲ್ಲಿರುವ ಮೂಲಭೂತ ಸಮಸ್ಯೆಗಳ ಬಗ್ಗೆ ಸಾಕಷ್ಟು ಬಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ದಲಿತ ಕೇರಿಗೆ ಸುಮಾರು ನಾಲ್ಕು ತಿಂಗಳಿಂದ ಕುಡಿಯುವ ನೀರು ಸರಬರಾಜು ಇಲ್ಲದೆ ಪರದಾಡುವಂತಾಗಿದೆ. ಅಧಿಕಾರಿಗಳನ್ನು ಕೇಳಿದರೆ ಯಾವುದೇ ಅನುದಾನವಿಲ್ಲ ಎಂದು ಹೇಳುತ್ತಾರೆ, ಹಾಗಾದರೆ ನಾವು ನಮ್ಮ ಸಮಸ್ಯೆಗಳನ್ನು ಯಾರಿಗೆ ಹೇಳಬೇಕಾಗಿದೆ ಎಂದು ಗ್ರಾಮದ ಕುಮಾರ್‌ ಪ್ರಶ್ನಿಸಿದರು.
ಈ ಗ್ರಾಮಕ್ಕೆ ಇದುವರೆಗೂ ಒಂದು ಸರ್ಕಾರಿ ಬಸ್ಸು ಬರುತ್ತಿದ್ದು, ಲಾಕ್ಡೌನ್‌ ನೆಪದಲ್ಲಿ ಅದನ್ನು ನಿಲ್ಲಿಸಿದ್ದಾರೆ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಆಸ್ಪತ್ರೆಗೆ ಹೋಗುವ ರೋಗಿಗಳಿಗೆ ತುಂಬಾ ತೊಂದರೆಯಾಗುತಿದ್ದು, ಗ್ರಾಮಕ್ಕೆ ತಕ್ಷಣವೇ ಬಸ್‌ ವ್ಯವಸ್ಥೆ ಮಾಡಿಕೊಡಬೇಕಾಗಿದೆ ಎಂದು ಗ್ರಾಮದ ಹಿರಿಯ ಜಯಣ್ಣ ಆಗ್ರಹಿಸಿದರು.
ತಾಲೂಕಿನ ಗಡಿಭಾಗದಲ್ಲಿರುವ ನಮ್ಮನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಕಡೆಗಣಿಸುತ್ತಿರುವುದರಿಂದ ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಬಹಿಷ್ಕರಿಸ ಬೇಕೆಂದು ಕೊಂಡಿದ್ದೇವೆ ಎನ್ನುತ್ತಾರೆ ಗ್ರಾಮದ ಯುವಕರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅನುದಾನದ ಕೊರತೆ ನೆಪದಲ್ಲಿ ಗ್ರಾಮದ ಪ್ರಗತಿಯನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಅಕ್ಷಮ್ಯ, ಸಂಸದರನ್ನು ಕೇಳಿದರೆ ಶಾಸಕರ ಮೇಲೆ, ಶಾಸಕರು ಕೇಳಿದರೆ ಸಂಸದರ ಮೇಲೆ ದೂರುತ್ತಾ ನಮ್ಮ ಗ್ರಾಮವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ, ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಗ್ರಾಮಸ್ಥರೊಡನೆ ಸೇರಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎನ್ನುತ್ತಾರೆ ಗ್ರಾಮಸ್ಥರು.

Get real time updates directly on you device, subscribe now.

Comments are closed.

error: Content is protected !!