ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಸ್‌- ಅಧಿಕಾರಿಗಳಿಂದ ಪರಿಶೀಲನೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸೆಂಟರ್‌ಗಳು ಸಿದ್ಧ

220

Get real time updates directly on you device, subscribe now.

ತುಮಕೂರು: ಜುಲೈ 19ರಿಂದ ಆರಂಗೊಳ್ಳುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆಗಳು ಭರದಿಂದ ನಡೆದಿದ್ದು, ತುಮಕೂರು ನಗರ ಹಾಗೂ ಗ್ರಾಮಾಂತರ ಕ್ಷೇತ್ರಕ್ಕೆ ಸಂಬಂಧಿಸಿದಂತೆ 53 ಪರೀಕ್ಷಾ ಕೇಂದ್ರಗಳನ್ನು ಸಂಪೂರ್ಣ ಸಿದ್ಧತೆ ಮಾಡಲಾಗಿದೆ. ಮುಂಜಾಗ್ರತೆಯಾಗಿ ನಗರದ ಸರ್ಕಾರಿ ಜೂನಿಯರ್‌ ಕಾಲೇಜು ಹಿಂಭಾಗದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಪರೀಕ್ಷಾ ಕೇಂದ್ರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯ್ಕ್, ಶಾಲೆಯ ಉಪ ಪ್ರಾಚಾರ್ಯರಾದ ನೂರ್‌ ಫಾತಿಮಾ ಮತ್ತು ಮಹಾನಗರ ಪಾಲಿಕೆ 15ನೇ ವಾರ್ಡ್ ನ ಸದಸ್ಯೆ ಗಿರಿಜಾ ಧನಿಯಾಕುಮಾರ್‌ ಅವರ ಸಮ್ಮುಖದಲ್ಲಿ ಪಾಲಿಕೆ ಸಿಬ್ಬಂದಿ ಸ್ಯಾನಿಟೈಸೇಷನ್‌ ಮಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯ್ಕ್ ಮಾತನಾಡಿ, ತುಮಕೂರು ನಗರ ವ್ಯಾಪ್ತಿಯ 24 ಪರೀಕ್ಷಾ ಕೇಂದ್ರಗಳು ಮತ್ತು ಗ್ರಾಮಾಂತರದ 29 ಪರೀಕ್ಷಾ ಕೇಂದ್ರಗಳನ್ನು ಸಿದ್ಧತೆ ಮಾಡಲಾಗಿದ್ದು, ವಿದ್ಯಾರ್ಥಿಗಳು ಭಯ ಪಡದೆ ಪರೀಕ್ಷೆಗೆ ಹಾಜರಾಗಿ ಧೈರ್ಯವಾಗಿ ಪರೀಕ್ಷೆ ಬರೆಯಬೇಕೆಂದು ಮನವಿ ಮಾಡಿದರು.
ಈಗಾಗಲೇ ತುಮಕೂರು ನಗರ ಶಾಸಕರು, ತುಮಕೂರು ಗ್ರಾಮಾಂತರ ಶಾಸಕರು ಮತ್ತು ಕೋರಾ ಹೋಬಳಿ ವ್ಯಾಪ್ತಿಗೆ ಬರುವ ಕೊರಟಗೆರೆ ಶಾಸಕರು ಸೇರಿ ಸಚಿವರೊಂದಿಗೆ ಸಂವಾದ ನಡೆಸಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಮಾರ್ಗದರ್ಶನದ ಮೇರೆಗೆ ತಾಲ್ಲೂಕಿನ 53 ಪರೀಕ್ಷಾ ಕೇಂದ್ರಗಳನ್ನು ಸಂಪೂರ್ಣ ಸಿದ್ಧ ಮಾಡಲಾಗಿದೆ ಎಂದು ತಿಳಿಸಿದರು.
53 ಪರೀಕ್ಷಾ ಕೇಂದ್ರಗಳಿಗೂ ಸ್ಯಾನಿಟೈಸೇಷನ್‌ ಮಾಡಿಸಲಾಗಿದ್ದು, ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಮುಖ್ಯ ಅಧೀಕ್ಷಕರಿಗೆ ತರಬೇತಿಯನ್ನೂ ನೀಡಲಾಗಿದೆ. ರೂಂ ಸೂಪರ್ ವೈಸರ್ ಗಳಿಗೂ ಆದೇಶ ನೀಡಿ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ ಎಂದರು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪರೀಕ್ಷಾ ಸಿಬ್ಬಂದಿಗೆ ಶೇ.100 ರಷ್ಟು ವ್ಯಾಕ್ಸಿನೇಷನ್‌ ಹಾಕಿಸಲಾಗಿದೆ, ವಿದ್ಯಾರ್ಥಿಗಳು ಭಯ ಪಡದೇ ಪರೀಕ್ಷೆ ಬರೆಯಬೇಕು, ಪೋಷಕರು ಆತಂಕ ಪಡದೆ ಮಕ್ಕಳಿಗೆ ಪರೀಕ್ಷೆ ಬರೆಯಲು ಧೈರ್ಯ ತುಂಬಿ ಕಳುಹಿಸಬೇಕು, ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರೆ ಸಾಕು ಉತ್ತೀರ್ಣರಾಗುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಗೈರಾಗದೆ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆಯುವಂತೆ ಸೂಚಿಸಿದರು.
ಮಹಾನಗರಪಾಲಿಕೆ ಆಯುಕ್ತರ ಸಹಕಾರದಿಂದ ಪಾಲಿಕೆ ವ್ಯಾಪ್ತಿಗೆ ಬರುವ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಹಾಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಗ್ರಾಪಂ ಸಹಕಾರದಿಂದ ಸ್ಯಾನಿಟೈಸೇಷನ್ ಮಾಡಲಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯವರು, ರೋಟರಿ ಸಂಸ್ಥೆಯವರು ಎನ್‌-95 ಮಾಸ್ಕ್ ಗಳನ್ನು ನೀಡುತ್ತಿದ್ದಾರೆ. ಜೊತೆಗೆ ಗ್ರಾಮಾಂತರ ಶಾಸಕರು ಸಹ ಮಾಸ್ಕ್ ಮತ್ತು ಅಗತ್ಯ ಪರಿಕರ ನೀಡುತ್ತಿದ್ದಾರೆ. ಆರೋಗ್ಯ ಇಲಾಖೆಯವರೂ ಸಹ ಸಹಕಾರ ನೀಡಿದ್ದಾರೆ ಎಂದರು.
ಮುಖ್ಯವಾಗಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಬರಲು ಕೆಎಸ್‌ಆರ್‌ಟಿಸಿ ಬಸ್ ಗಳಲ್ಲಿ ಪರೀಕ್ಷಾ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು. ಆದ್ದರಿಂದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗದೆ ಧೈರ್ಯವಾಗಿ ಪರೀಕ್ಷೆ ಬರೆಯಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ 15ನೇ ವಾರ್ಡ್‌ ಸದಸ್ಯೆ ಗಿರಿಜಾ ಧನಿಯಾಕುಮಾರ್‌, ಶಾಲೆಯ ಉಪಪ್ರಾಚಾರ್ಯರಾದ ನೂರ್‌ ಫಾತಿಮಾ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!