ಶಾಸಕರನ್ನು ಖರೀದಿಸಿ ಬಿಎಸ್‌ವೈ ಕಷ್ಟಬಿದ್ದು ಸರ್ಕಾರ ರಚಿಸಿದ್ರು: ಪರಂ

ಸಿಎಂ ಬದಲಿಸಲು ಹೊರಟಿರುವುದು ದುರಾದೃಷ್ಟಕರ

570

Get real time updates directly on you device, subscribe now.

ತುಮಕೂರು: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾಯಿಸಲು ಅವರ ಪಕ್ಷದವರೇ ಹೊರಟಿರುವುದು ದುರಾದೃಷ್ಟಕರ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದರು.
ಯಡಿಯೂರಪ್ಪನವರು ಶಾಸಕರನ್ನು ಖರೀದಿ ಮಾಡಿ ಕಷ್ಟಬಿದ್ದು ಸರ್ಕಾರ ರಚನೆ ಮಾಡಿದ್ದಾರೆ, ಬಹಳ ಆಸೆ ಇಟ್ಟುಕೊಂಡು ಮುಖ್ಯಮಂತ್ರಿಯಾಗಿದ್ದಾರೆ, ಆದರೆ ಸಂಪುಟದಲ್ಲಿದ್ದುಕೊಂಡು ಸಂಪುಟದ ಮುಖ್ಯಸ್ಥರನ್ನೆ ಬದಲಾಯಿಸಲು ಕೆಲವರು ಹೊರಟಿದ್ದಾರೆ. ಯಡಿಯೂರಪ್ಪನವರು ಶಕ್ತಿಯುತವಾಗಿದ್ದರೆ ಅಂತಹವರನ್ನು ಸಂಪುಟದಿಂದ ಕೈ ಬಿಡಬೇಕು ಎಂದರು.
ನಗರದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಅವರನ್ನು ಬದಲಾಯಿಸಲು ಹೊರಟಿರುವವರು ಶಕ್ತಿಯುತವಾಗಿದ್ದರೆ ಮುಖ್ಯಮಂತ್ರಿಗಳನ್ನು ಬದಲಾಯಿಸಬೇಕು, ಇದ್ಯಾವುದನ್ನೂ ಮಾಡದೆ ವಿನಾ ಕಾರಣ ಕಾಲ ಹರಣ ಮಾಡುತ್ತಿರುವುದರಿಂದ ರಾಜ್ಯದ ಆಡಳಿತ ಮತ್ತು ಜನ ಸಮುದಾಯದ ಮೇಲೆ ಬಾರಿ ಪರಿಣಾಮ ಬೀರುತ್ತಿದೆ ಎಂದರು.
ಸರ್ಕಾರದ ಆಡಳಿತ ಬಿಗಿಯಾಗಿದ್ದರೆ ಚಾಮರಾಜ ನಗರದಲ್ಲಿ ಆಕ್ಸಿಜನ್‌ ಕೊರತೆಯಿಂದ 33 ಜನ ಸಾವನ್ನಪ್ಪುತ್ತಿರಲಿಲ್ಲ, ಸರ್ಕಾರದ ಆಡಳಿತ ವೈಫಲ್ಯದಿಂದಾಗಿ ಜನರ ಜೀವದ ಜತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಇದನ್ನು ಗಮನಿಸಿದರೆ ಸರ್ಕಾರದ ಆಡಳಿತ ಬಿಗಿಯಾಗಿಲ್ಲ ಎಂಬುದು ತಿಳಿಯುತ್ತದೆ ಎಂದರು.
ಸರ್ಕಾರ ಜಿಲ್ಲಾ ಪಂಚಾಯ್ತಿಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ, ಕಾಮಗಾರಿ ಮಾಡಿರುವ 15 ಸಾವಿರ ಕೋಟಿ ಬಿಲ್‌ಗಳು ಬಾಕಿ ಇವೆ, ಪಿಡಬ್ಯ್ಲೂಡಿ ಇಲಾಖೆ ಒಂದರದ್ದೆ 5 ಸಾವಿರ ಕೋಟಿ ಬಾಕಿ ಇದೆ, ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.
ದೆಹಲಿಯಲ್ಲಿ ಯಡಿಯೂರಪ್ಪನವರು ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಾರೆ, ಆದರೆ ಬೆಂಗಳೂರಿಗೆ ಬರುತ್ತಿದ್ದಂತೆ ಕೆಲವರು ಮುಖ್ಯಮಂತ್ರಿ ಬದಲಾವಣೆ ಎಂದು ಹೇಳುತ್ತಾರೆ, ಯಡಿಯೂರಪ್ಪನವರೆ ಕಷ್ಟ ಬಿದ್ದು ಮುಖ್ಯಮಂತ್ರಿಯಾಗಿದ್ದೀರಾ, ಸರಿಯಾಗಿ ಆಡಳಿತ ಮಾಡಿ ಎಂದು ನಾವೇ ಹೇಳಿದ್ದೇವೆ, ಆದರೆ ಆ ಪಕ್ಷದವರೇ ಕಚ್ಚಾಡಿಕೊಂಡು ಕೆಳಗಿಳಿಸಿದರೆ ನಾವೇನು ಮಾಡೋಕೆ ಆಗುತ್ತದೆ ಎಂದರು.
ಯಡಿಯೂರಪ್ಪನವರು ಪೂರ್ಣ ಅವಧಿ ಪೂರೈಸಬೇಕು ಎಂಬುದು ನಮ್ಮ ಆಸೆ, ಏಕೆಂದರೆ ಅವರ ವೈಫಲ್ಯಗಳನ್ನು ಜನರಿಗೆ ತಿಳಿಸಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಬಿಜೆಪಿಯ ದುರಾಡಳಿತ ಹಾಗೆಯೇ ಮುಚ್ಚಿ ಹೋಗುತ್ತದೆ ಎಂದರು.
ಬಿಜೆಪಿ ದುರಾಡಳಿತ ಮತ್ತು ಕೆಟ್ಟ ಆಡಳಿತ ಮುಂದುವರೆದರೆ ಜನರಿಗೆ ಬಿಜೆಪಿ ವೈಫಲ್ಯ ತಿಳಿಸಲು ಸುಲಭವಾಗುತ್ತದೆ ಎಂಬುದು ನಮ್ಮ ಉದ್ದೇಶ, ಹಾಗಾಗಿ ಕಾಂಗ್ರೆಸ್‌ನವರು ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದು ಹೇಳುತ್ತಿದ್ದೇವೆ ಅಷ್ಟೆ, ಇದನ್ನು ಬೇರೆ ರೀತಿ ಅರ್ಥೈಸುವ ಅಗತ್ಯವಿಲ್ಲ ಎಂದರು.
ದೇಶದಲ್ಲಿ ಜಾತಿ, ಹಣದ ಮೇಲೆ ರಾಜಕಾರಣ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವಂತಹದ್ದು, ಇದನ್ನು ಹೊರತುಪಡಿಸಿ ಕರ್ನಾಟಕದ ರಾಜಕಾರಣ ನಡೆಯಬೇಕು ಎಂಬುದ ನಮ್ಮೆಲ್ಲರ ಬಯಕೆ ಎಂದರು.
ಕಾಂಗ್ರೆಸ್‌ ಚುನಾವಣೆಗೆ ಈಗಾಗಲೇ ಸನ್ನದ್ಧವಾಗಿದೆ, ಡಿಸೆಂಬರ್‌ ಒಳಗೆ ಜಿಲ್ಲಾ ಮತ್ತು ತಾಪಂ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.

Get real time updates directly on you device, subscribe now.

Comments are closed.

error: Content is protected !!