ಸಾಮಾಜಿಕ ಜಾಲಾತಾಣದಲ್ಲಿನ ಸುಳ್ಳು ಸುದ್ದಿಗೆ ಕಡಿವಾಣ ಅಗತ್ಯ

ಪತ್ರಕರ್ತರು ಅಧ್ಯಯನಶೀಲರಾಗಲಿ: ಪರಮೇಶ್ವರ್

297

Get real time updates directly on you device, subscribe now.

ತುಮಕೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿ, ಮಾಹಿತಿಗಳು ಬೀರುತ್ತಿರುವ ಪರಿಣಾಮ ಗಂಭೀರವಾಗಿದ್ದು, ಸೂಕ್ತ ನಿಯಂತ್ರಣಕ್ಕೊಳಪಡುವ ಅವಶ್ಯಕತೆ ಇದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು.
ನಗರದ ಬಾಲ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆಯಿಂದ ನಡೆದ ಪತ್ರಿಕಾ ದಿನಾಚರಣೆ ಹೆಲ್ತ್ ಕಾರ್ಡ್ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾಲತಾಣಗಳಲ್ಲಿ ವೈರಲ್‌ ಆಗುವ ಆಡಿಯೋ, ವಿಡಿಯೋ, ಫೋಟೋ ಮಾಹಿತಿಗಳಿಂದ ಸಕಾರಾತ್ಮಕ ಪರಿಣಾಮಗಳಾದರೆ ಅಪಾಯವಿಲ್ಲ, ಆದರೆ ನಕರಾತ್ಮಕತೆ ಹೆಚ್ಚಾಗಿ ಸುಳ್ಳನ್ನೇ ಸತ್ಯವೆಂದು ಬಿಂಬಿಸುತ್ತಿರುವುದು ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ, ಮಾಹಿತಿ ಪ್ರಸಾರವನ್ನು ಸೂಕ್ತ ಕಾನೂನಿನ ಚೌಕಟ್ಟಿಗೊಳಪಡಿಸಬೇಕಿದೆ ಎಂದರು.
ಸಮಾಜದ ಅನ್ಯಾಯ ಪ್ರಶ್ನಿಸುವ ಪತ್ರಕರ್ತರು ಅಧ್ಯಯನಶೀಲರಾಗುವುದು ಮುಖ್ಯ ಎಂದ ಪರಮೇಶ್ವರ್‌ ಆಡಳಿತಗಾರರಿಗೆ ಹಾಕುವ ಪ್ರಶ್ನೆ, ಪಡೆಯುವ ಉತ್ತರ ಇಡೀ ಸಮಾಜಕ್ಕೆ ಒಂದು ಸಂದೇಶ ರವಾನೆಯಾಗುವಂತಾಗಿರಬೇಕು, ಇಂದು ತಂತ್ರಜ್ಞಾನ ಬೆಳೆದಿದೆ, ಮೊದಲು ಪತ್ರಿಕೆಗಳನ್ನು ಮುದ್ರಿಸಿ ಹಂಚುವುದೇ ಸವಾಲಾಗಿತ್ತು, ಈಗ ಮುದ್ರಣ, ವಿದ್ಯುನ್ಮಾನ, ಡಿಜಿಟಲ್‌ ಮಾಧ್ಯಮ ಎಲ್ಲವೂ ತಂತ್ರಜ್ಞಾನಾಧರಿತವಾಗಿ ಅಂಗೈನಲ್ಲೇ ಮಾಹಿತಿ ದೊರೆಯುವಂತಾಗಿದ್ದು, ವಸ್ತುನಿಷ್ಟ, ವಿಶ್ಲೇಷಣಾತ್ಮಕ ವರದಿಗಳು ಸಮಾಜದ ಕಣ್ತೆರೆಸುತ್ತವೆ ಎಂದರು.
ದಿ.ಎಚ್‌.ಜಿ.ಗುಂಡುರಾವ್‌ ಅವರಂತಹ ಮೌಲ್ಯಯುತ ಪತ್ರಕರ್ತರನ್ನು ಹೊಂದಿರುವ ಇತಿಹಾಸ ತುಮಕೂರು ಜಿಲ್ಲೆಯ ಪತ್ರಿಕಾರಂಗಕ್ಕಿದೆ, ಜಿಲ್ಲೆಯ ಅನೇಕ ಪತ್ರಕರ್ತರು ಹೊರಗಡೆ ಸಾಧನೆ ಮಾಡಿದ್ದಾರೆ. ಪತ್ರಕರ್ತರ ಜಿಲ್ಲಾ ಸಂಘ ಉತ್ತಮ ಕಾರ್ಯ ಮಾಡುತ್ತಿದ್ದು, ಸಂಘದವರ ಕೋರಿಕೆ ಮೇರೆಗೆ ಜಿಲ್ಲೆಯ ಪತ್ರಕರ್ತರ ಆರೋಗ್ಯ ರಕ್ಷಣೆ ಸಲುವಾಗಿ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಿಂದ ಶೇ. 50 ರಷ್ಟು ರಿಯಾಯಿತಿ ಕಾರ್ಡ್‌ ನೀಡಿದ್ದು, ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದರು.
ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೋದ್ಯಮಕ್ಕೆ ಇಡೀ ಸಮಾಜದ ಅಭಿಪ್ರಾಯ ರೂಪಿಸುವ, ಅಭಿಪ್ರಾಯ ಬದಲಾಯಿಸುವ ಶಕ್ತಿಯಿದೆ. ಆದರೆ ಜಾಲತಾಣಗಳು ಬಂದ ಮೇಲೆ ಫೇಕ್‌ ನ್ಯೂಸ್‌ ಹಾವಳಿ ಹೆಚ್ಚಾಗಿದ್ದು, ಸರಕಾರ ಆದೇಶಗಳನ್ನೇ ನಕಲಿಯಾಗಿ ಸೃಷ್ಟಿಸಿ ಹರಿಬಿಡಲಾಗುತ್ತದೆ. ಇವುಗಳ ನಿಯಂತ್ರಣಕ್ಕೆ ಕ್ರಮಗಳಲ್ಲ, ಕಾನೂನಿನ ಅವಶ್ಯಕತೆ ಇದೆ. ಪಾಸಿಟಿವ್‌, ನೆಗೆಟಿವ್‌ ವರದಿಗಳಿಗಿಂತ ಘಟನೆಯ ಯಥಾವತ್‌ ವರದಿಯ ಅವಶ್ಯಕತೆ ಪ್ರಸ್ತುತ ಹೆಚ್ಚಿದೆ. ಆಡಳಿತದೊಡನೆ ಕೈ ಜೋಡಿಸದೆ, ಎಚ್ಚರಿಸುವ ಚಿಕಿತ್ಸಕ ಮನಸ್ಥಿತಿ ಪತ್ರಕರ್ತರಲ್ಲಿರಬೇಕು, ಈ ಜಿಲ್ಲೆಯಲ್ಲಿ ಅಂತಹ ಪತ್ರಕರ್ತರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಪಂ ಸಿಇಒ ಕೆ.ವಿದ್ಯಾಕುಮಾರಿ ಮಾತನಾಡಿ ಯಾವುದೇ ಇಸಂಗಳಿಗೆ ಒಳಗಾಗದೆ ಸಾಮಾಜಿಕ ನ್ಯಾಯದ ಪರ ಮಾಧ್ಯಮಗಳು ಸದಾ ನಿಲ್ಲಬೇಕು. ಪ್ರಜಾಪ್ರಭುತ್ವದ ಯಶಸ್ಸಿಗೆ ಪತ್ರಿಕೆಗಳು, ಮಾಧ್ಯಮಗಳ ಕೊಡುಗೆ ಹೆಚ್ಚಿದ್ದು, ವ್ಯವಸ್ಥೆಗೆ ತಲೆಭಾಗದೆ ಸ್ವತಂತ್ರ್ಯವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್‌ ಮಾತನಾಡಿ ಡಿವಿಜಿ ಅವರು ಹುಟ್ಟಿದ ಪತ್ರಕರ್ತರ ಸಂಘ 90 ವರ್ಷದಲ್ಲಿ ಸಾಗಿಬಂದ ನಡೆಯನ್ನು ವಿವರಿಸಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್‌ ಪ್ರಾಸ್ತಾವಿಕ ನುಡಿಗಳನ್ನಾಡಿ ಪತ್ರಕರ್ತರ ಸಂಘವು ಕೋವಿಡ್‌ ಸಂದರ್ಭದಲ್ಲಿ ಪತ್ರಕರ್ತರು ಮಾತ್ರವಲ್ಲದೆ ಪತ್ರಿಕಾವಿತರಕರು, ಮುದ್ರಕರು, ಛಾಯಾಗ್ರಾಹಕರು ಹೀಗೆ ಮಾಧ್ಯಮಕ್ಕೆ ಸಂಬಂಧಿಸಿದ ಎಲ್ಲರಿಗೂ ನೆರವಾಗುವ ಕಾರ್ಯ ಮಾಡುತ್ತಾ ಬಂದಿದ್ದು, ಜಿಲ್ಲಾ, ತಾಲೂಕು ಶಾಖೆ ಕ್ರಿಯಾಶೀಲವಾಗಿ ಕಾರ್ಯಕ್ರಮ, ಸಂಘಟನೆ ಮಾಡುತ್ತಿದ್ದಾರೆ. 2012ರಲ್ಲಿ ಡಾ.ಜಿ.ಪರಮೇಶ್ವರ ಅವರ ಸಹಕಾರದಿಂದ ರಾಷ್ಟ್ರೀಯ ಅಧಿವೇಶನ ಯಶಸ್ವಿಯಾಗಿದ್ದು, ಸಂಘದ ಎಲ್ಲಾ ಚಟುವಟಿಕೆಗಳಿಗೂ ಸಹಕಾರ ನೀಡುತ್ತಾ ಬಂದಿದ್ದಾರೆ. ಹೆಲ್ತ್ ಕಾರ್ಡ್‌, ದಿನಸಿ ಕಿಟ್‌ ಸಹ ನೀಡಿ ಜಿಲ್ಲೆಯ ಪತ್ರಕರ್ತರಿಗೆ ಕೋವಿಡ್‌ ಸಂಕಷ್ಟದಲ್ಲಿ ನೆರವಾಗಿದ್ದಾರೆ ಎಂದರು.
ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ದೇವರಾಜು, ರಾಜ್ಯ ಸಮಿತಿ ಸದಸ್ಯ ನಾಗಣ್ಣ, ಕೌಶಲ್ಯ ಅಭಿವೃದ್ಧಿ ಆಯೋಗದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ, ಸಂಘದ ಪ್ರಧಾನ ಕಾರ್ಯದರ್ಶಿ ಎನ್‌.ಡಿ.ರಂಗರಾಜು, ವರದಿಗಾರ ಪ್ರಸನ್ನ ದೊಡ್ಡಗುಣಿ, ಉಪಾಧ್ಯಕ್ಷ ಮಾರುತಿ ಪ್ರಸಾದ್‌, ನಿರ್ದೇಶಕರಾದ ಕೊಂತಿಹಳ್ಳಿ ರಂಗನಾಥ್‌, ಕುಮಾರ್‌, ಸತೀಶ್‌ ಹಾರೋಗೆರೆ, ಈಶ್ವರ್‌, ರಘುರಾಮ್‌, ಗೋವಿಂದಪ್ಪ, ರಂಗಧಾಮಯ್ಯ, ಮಲ್ಲಿಕಾರ್ಜುನ್‌ದುಂಡ, ತಿಪಟೂರು ಕೃಷ್ಣ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!