ರೈತರ ಬೆಳೆಗೆ ನೀರು ಹರಿಸಲು ಕ್ರಮ: ಡಾ.ರಂಗನಾಥ್

280

Get real time updates directly on you device, subscribe now.

ಕುಣಿಗಲ್‌: ಮಾರ್ಕೋನಹಳ್ಳಿ ಜಲಾಶಯ ಸೇರಿದಂತೆ ಇತರೆ ಅಚ್ಚುಕಟ್ಟು ಪ್ರದೇಶದ ರೈತರ ಸಮಗ್ರ ಅಭಿವೃದ್ಧಿ ಹಾಗೂ ಆರ್ಥಿಕಾಭಿವೃದ್ಧಿ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಂಡು ಬೆಳೆಗೆ ನೀರು ಹರಿಸಲಾಗುವುದು ಎಂದು ಶಾಸಕ ಡಾ.ರಂಗನಾಥ ತಿಳಿಸಿದರು.
ಮಂಗಳವಾರ ತಾಲೂಕಿನ ಎಡೆಯೂರು ಹೋಬಳಿಯ ಮಾರ್ಕೋನಹಳ್ಳಿ ಜಲಾಶಯದ ಬಳಿ ಮಾರ್ಕೋನಹಳ್ಳಿ, ಮಂಗಳ ಜಲಾಶಯ, ಮುತ್ತುರಾಯನ ಕೆರೆ, ಕೆ.ಹೊನ್ನಮಾಚನಹಳ್ಳಿ ಕೆರೆ ವ್ಯಾಪ್ತಿಯ ಅಚ್ಚುಕಟ್ಟುದಾರರಿಗೆ ಮುಂಗಾರು ಬೆಳೆಗೆ ನೀರು ಪೂರೈಕೆಯ ರೈತರ ಸಭೆಯಲ್ಲಿ ಯಾವ ಬೆಳೆಗೆ ನೀರು ಬಿಡಬೇಕೆಂಬ ಚರ್ಚೆ ನಡೆಯುವ ವೇಳೆ, ಕೆಲ ರೈತರು ದೀರ್ಘಾವಧಿ ರಾಗಿ ಬೆಳೆಗೆ ನೀರು ಕೊಡಿ ಎಂದರೆ ಕೆಲವರು 20 ವರ್ಷದಿಂದ ಭತ್ತ ಬೆಳೆದಿಲ್ಲ, ಭತ್ತಕೆ ನೀರು ಕೊಡಿ ಎಂದು ಪರಸ್ಪರ ಚರ್ಚೆಗೆ ಇಳಿದರು. ಉಪ ವಿಭಾಗಾಧಿಕಾರಿ ಅಜಯ್‌ ಮಾತನಾಡಿ, ರೈತರು ಜಲಾಶಯದಲ್ಲಿ ಲಭ್ಯ ಇರುವ ನೀರಿನ ಪ್ರಮಾಣ ಆಧರಿಸಿ ಬೆಳೆ ಕೈಗೊಂಡರೆ ನೆಮ್ಮದಿ, ರಾಗಿ ಬೆಳೆ ಬೆಳೆಯಲು ಇರುವ ನೀರಿನಲ್ಲಿ ಇನ್ನು 346 ಎಂಸಿಎಫ್‌ಟಿ ನೀರು ಉಳಿಯುತ್ತದೆ. ಭತ್ತದ ಬೆಳೆಗಾದರೆ ಹಾಲಿ ಇರುವ 1.8 ಟಿಎಂಸಿ ಜೊತೆ ಇಷ್ಟೆ ನೀರು ಬೇಕಾಗುತ್ತದೆ. ನೀರು ಉತ್ಪಾದನೆ ಮಾಡಲಾಗದು, ಮಳೆಯಾಶ್ರಯ ಸೇರಿದಂತೆ ಇತರೆ ಮೂಲಗಳಿಂದ ನೀರಿನ ಲಭ್ಯತೆ ಭರವಸೆ ಇಡಲಾಗುತ್ತದೆಯೆ ಎಂದು ಪ್ರಶ್ನಿಸಿದರು.
ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರೀ ಮಾತನಾಡಿ, ರಾಗಿ ಬೆಳೆಗಾದರೆ 1.4 ಟಿಎಂಸಿ ನೀರು ಬೇಕು, ಭತ್ತದ ಬೆಳೆಗಾದರೆ 3.6 ಟಿಎಂಸಿ ನೀರುಬೇಕು. ಹಾಲಿ 1.8 ಟಿಎಂಸಿ ನೀರು ಲಭ್ಯ ಇದೆ. ಭತ್ತದ ಬೆಳೆಗೆ ನೀರು ಪೂರೈಕೆ ಕಷ್ಟ, ಆದರೆ ರಾಗಿಬೆಳೆ ಕೈಗೊಳ್ಳ ಹುದು, ರಾಗಿಬೆಳೆ ಅಲ್ಪಾವಧಿ, ಮಧ್ಯಾವಧಿ, ಪೂರ್ಣಾವಧಿ ಕ್ರಮದಲ್ಲಿ ಕೈಗೊಳ್ಳಬಹುದಾಗಿದೆ. ಆಗಸ್ಟ್ ಮಾಹೆಯವರೆಗೂ ರಾಗಿ ಬೆಳೆ ಕೃಷಿ ಮಾಡಬಹುದಾಗಿದೆ ಎಂದರು.
ರೈತರು ಆಕ್ಷೇಪಿಸಿ ಕೆಲವರು ರಾಗಿ ಬೆಳೆ ಎಂದರೆ ಮತ್ತೆ ಕೆಲವರು ಭತ್ತ ಬೆಳೆದು 20 ವರ್ಷವಾಗಿದೆ, ಈಗ ಅನ್ನಭಾಗ್ಯದಡಿ ಪ್ರಧಾನಮಂತ್ರಿ ಯೋಜನೆಯಡಿ ಅಕ್ಕಿ ಸಿಗುತ್ತಿದೆ, ಯೋಜನೆ ನಿಂತರೆ ನಾವೇನು ಮಾಡಬೇಕು, ಅಂಗಡಿಯಲ್ಲಿ ಅಕ್ಕಿ ದರ ಕೆಜಿ 70 ರೂ. ಇದೆ. ಜಮೀನಿದ್ದರೂ ಅನ್ನ ತಿನ್ನುವ ಹಾಗಿಲ್ಲವೆ ಎಂದರು.
ಪಲ್ಲೆರಾಯನಹಳ್ಳಿ ಭಾಗದ ರೈತರು ಸಣಬ, ಕೊಡಹಳ್ಳಿ, ಕೀಲಾರ, ಪಲ್ಲೆರಾಯನಹಳ್ಳಿ, ಪುರ ಕಡೆಗೆ ನೀರು ಹರಿದು 20 ವರ್ಷವಾಗಿದೆ. ಅಧಿಕಾರಿಗಳು ನಾಲೆಯ ಮೇಲೆ ಬರೋಲ್ಲ, ನೀರು ಹರಿದಿಲ್ಲ, ವಾರ್ಷಿಕ ಕಂದಾಯ ಮಾತ್ರ ಜಲಾಶಯದ ಅಚ್ಚುಕಟ್ಟುದಾರರು ಎಂದು ವಸೂಲು ಮಾಡಿ ಅನ್ಯಾಯ ಮಾಡುತ್ತಿದ್ದಾರೆ. ಈಬಾರಿ ನೀರು ಬೇಕೇ ಬೇಕು ಎಂದರು.
ಚಂದನಹಳ್ಳಿಯ ರೈತ ನಂಜೇಗೌಡ ಮಾತನಾಡಿ, ಗ್ರಾಮದ ಕೆಲ ಜಮೀನುಗಳಲ್ಲಿ ಜೌಗು ಇರುವ ಕಾರಣ ರಾಗಿ ಬೆಳೆಯಲಾಗದು, ಭತ್ತಕ್ಕೆ ಅವಕಾಶ ನೀಡಿ ಎಂದರು.
ಈ ವೇಳೆ ಇತರೆ ರೈತರು ಆಕ್ಷೇಪಿಸಿದಾಗ ಸಭೆಯಲ್ಲಿ ಗೊಂದಲ ಉಂಟಾಯಿತು. ಶಾಸಕರು ಮಧ್ಯಪ್ರವೇಶಿಸಿ ಸಮಾಧಾನಗೊಳಿಸಿ ರಾಗಿ ಬೆಳೆದರೆ ಸರ್ಕಾರ ಖರೀದಿ ಮಾಡಿ ಉತ್ತಮ ದರ ನೀಡುತ್ತಿದೆ, ಕಳೆದ ಸಾಲಿನಲ್ಲಿ ತಾಲೂಕಿನ 10,250 ರೈತರ ರಾಗಿ ಖರೀದಿ ಮಾಡಿ 8,000 ಸಾವಿರ ಮಂದಿಗೆ ಹಣ ನೀಡಿತ್ತು, ಬಾಕಿ 2,250 ರೈತರಿಗೆ ಸತತ ಒತ್ತಡ ಹಾಕಿದ ಪರಿಣಾಮ ಹಣ ನೀಡಿದೆ. ಆದ್ದರಿಂದ ರಾಗಿ ಬೆಳೆಯುವುದರಿಂದ ರೈತರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿ ಸಭೆ ಮುಕ್ತಾಯ ಮಾಡಿದರು.
ತಹಶೀಲ್ದಾರ್‌ ಮಹಾಬಲೇಶ್ವರ್‌, ತೋಟಗಾರಿಕೆ ಸಹಾಯಕ ನಿರ್ದೇಶಕ ನಾಗರಾಜಯ್ಯ, ಹೇಮಾವತಿ ನಾಲಾ ವಲಯದ ಇಇ ಜಯರಾಮಯ್ಯ, ಎಇಇಗಳಾದ ಜಯರಾಜ್‌, ಆನಂದ್‌, ಗೋವಿಂದೇಗೌಡ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!