ವಾಹನ ತಡೆದು ಸಾಮಾಜಿಕ ಹೋರಾಟಗಾರರಿಂದ ಧರಣಿ

ಡಿಹೆಚ್‌ಒ ಉಡಾಫೆ ಉತ್ತರಕ್ಕೆ ಆಕ್ರೋಶ

284

Get real time updates directly on you device, subscribe now.

ಗುಬ್ಬಿ: ಕಳೆದ ನಾಲ್ಕು ವರ್ಷದ ಹಿಂದೆ ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ಅಳವಡಿಸಿದ್ದ ಆಧುನಿಕ ಡಿಜಿಟೆಲ್‌ ಎಕ್ಸರೇ ಯಂತ್ರವನ್ನು ಎರಡೇ ದಿನದಲ್ಲಿ ಮರಳಿ ವಾಪಸ್‌ ಪಡೆದ ಆರೋಗ್ಯ ಇಲಾಖೆಯ ಧೋರಣೆ ಪ್ರಶ್ನಿಸಿದ ಸಾಮಾಜಿಕ ಹೋರಾಟಗಾರರಿಗೆ ಉಡಾಫೆ ಉತ್ತರ ನೀಡಿದ ಡಿಎಚ್‌ಓ ಡಾ.ನಾಗೇಂದ್ರಪ್ಪ ಅವರ ಸರ್ಕಾರಿ ವಾಹನ ಅಡ್ಡಗಟ್ಟಿ ಘೇರಾವ್‌ ಹಾಕಿದ ಘಟನೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆಯಿತು.
ಆಸ್ಪತ್ರೆಯಲ್ಲಿ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಡಿಎಚ್‌ಓ ಡಾ.ನಾಗೇಂದ್ರಪ್ಪ ಅವರನ್ನು ಕಾರ್ಯಕ್ರಮ ಮುಗಿದ ಬಳಿ ಈ ಡಿಜಿಟೆಲ್‌ ಎಕ್ಸರೇ ಯಂತ್ರದ ಬಗ್ಗೆ ಪ್ರಶ್ನಿಸಿದರು. ಮೇಲ್ದರ್ಜೆಗೇರಿಸಿ ಗುಬ್ಬಿ ಆಸ್ಪತ್ರೆಯನ್ನು ನೂರು ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯನ್ನಾಗಿಸಲಾಗಿ ಆಧುನಿಕ ಯಂತ್ರಗಳ ಅಳವಡಿಕೆಗೆ ಮುಂದಾದ ಇಲಾಖೆ ಅತ್ಯವಶ್ಯಕವಾಗಿದ್ದ ಡಿಜಿಟೆಲ್‌ ಎಕ್ಸರೇ ಯಂತ್ರವನ್ನು ಅಳವಡಿಸಿತ್ತು. ಆದರೆ ಮತ್ತೊಂದು ಯಂತ್ರ ನೀಡುವ ಮಾತು ಕೊಟ್ಟು ವಚನ ಭ್ರಷ್ಟವಾಗಿದೆ ಇಲಾಖೆ ಎಂದು ಸಾಮಾಜಿಕ ಹೋರಾಟಗಾರರ ತಂಡ ಆಕ್ರೋಶ ಹೊರ ಹಾಕಿತು.
ಕೇವಲ ಮೂರೇ ದಿನದಲ್ಲಿ ಈ ಯಂತ್ರವನ್ನು ಕಳಚಿ ಬೆಂಗಳೂರಿನ ಎಲ್‌ಎಚ್‌ಗೆ ಕೊಂಡೊಯ್ಯಲಾಗುವುದು ಎಂದು ಹೇಳಿ ವಾಪಸ್‌ ಪಡೆದ ಇಲಾಖೆ ಮರಳಿ ಪರ್ಯಾಯ ಮತ್ತೊಂದು ಯಂತ್ರ ಕೊಡುವ ಭರವಸೆ ನೀಡಿ ನಾಲ್ಕು ವರ್ಷವಾದರೂ ಇತ್ತ ಕಡೆ ಗಮನ ನೀಡಿಲ್ಲ ಎಂದು ಕಿಡಿಕಾರಿದ ಹೋರಾಟಗಾರ ನಾಗಸಂದ್ರ ವಿಜಯ್‌ಕುಮಾರ್‌ ಈ ಹಿಂದೆ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ ನೀಡಿದ್ದ 60 ಲಕ್ಷ ರೂ.ಗಳ ಅತ್ಯಾಧುನಿಕ ಪರಿಕರಗಳನ್ನು ಅಳವಡಿಸಿಕೊಳ್ಳುವಲ್ಲಿ ಸಹ ಈ ಆಸ್ಪತ್ರೆ ವೈಫಲ್ಯ ಕಂಡಿತ್ತು. ಅಭಿವೃದ್ಧಿಗೆ ಬಂದ ಈ ಅನುದಾನ ಹಣ ವಾಪಸ್‌ ಆಗಿದ್ದು ಸಾರ್ವಜನಿಕರು ತಿಳಿದಿದ್ದಾರೆ. ಈ ಬಗ್ಗೆ ಕೆಲದಿನಗಳ ಹಿಂದೆ ಡಿಎಚ್‌ಓ ಅವರಿಗೆ ಕರೆ ಮಾಡಿದ್ದರೆ ಸಮಂಜಸ ಉತ್ತರ ನೀಡದೆ ಆಲಸ್ಯದ ನುಡಿಗಳಾಗಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.
ಸೌಜನ್ಯವಾಗಿಯೇ ಪ್ರಶ್ನಿಸಿದ ಹೋರಾಟಗಾರರ ತಂಡಕ್ಕೆ ಬೇಜವಾಬ್ದಾರಿ ಉತ್ತರ ನೀಡಿದ ಡಿಎಚ್‌ಓ ಅವರು ಯಂತ್ರವನ್ನು ಕೊಡೋಣ ಬಿಡಿ ಎಂದು ಹಾರಿಕೆ ಉತ್ತರ ನೀಡಿದ್ದರು. ನಾಲ್ಕು ವರ್ಷದಿಂದ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಕೇಳಿದರೆ ಬೇಕಾಬಿಟ್ಟಿ ಉತ್ತರ ನೀಡಿ ಹೋರಾಟಗಾರರನ್ನು ತಾತ್ಸರವಾಗಿ ಕಂಡು ಹೊರಟಿದ್ದು ಕಂಡು ಸಿಟ್ಟಿಗೆದ್ದು ಅವರ ವಾಹನಕ್ಕೆ ಅಡ್ಡಲಾಗಿ ಕುಳಿತು ಸಮಂಜಸ ಉತ್ತರಕ್ಕೆ ಒತ್ತಾಯಿಸಿ ಕ್ಷಮಾಪಣೆ ಕೇಳುವಂತೆ ಆಗ್ರಹಿಸಿದರು.
ನಂತರ ಸ್ಥಳಕ್ಕೆ ಧಾವಿಸಿದ ಆಡಳಿತ ವೈದ್ಯಾಧಿಕಾರಿ ಡಾ.ದಿವಾಕರ್‌ ಮತ್ತು ಟಿಎಚ್‌ಓ ಡಾ.ಬಿಂದುಮಾಧವ ಧರಣಿ ನಿರತರರೊಂದಿಗೆ ಚರ್ಚಿಸಿ ಕೋವಿಡ್‌ ಹಿನ್ನಲೆ ಪತ್ರ ವ್ಯವಹಾರ ತಡವಾಗಿದೆ ಎಂದರು. ನಂತರ ಮನವೊಲಿಸಿದ ಡಿಎಚ್‌ಓ ಡಾ.ನಾಗೇಂದ್ರಪ್ಪ ಇನ್ನೆರಡು ತಿಂಗಳಲ್ಲಿ ಡಿಜಟೆಲ್‌ ಎಕ್ಸರೇ ಯಂತ್ರ ಅಳವಡಿಸುವ ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.
ಈ ಸಂದರ್ಭದಲ್ಲಿ ಜಿ.ಆರ್‌.ರಮೇಶ್‌, ಡಾ.ರಾಜೇಶ್‌ಗುಬ್ಬಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!