ತುಮಕೂರು: 2ನೇ ಅಲೆ ಕೊರೊನಾತಂಕದ ನಡುವೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ, ಎಕ್ಸಾಂ ಬರೆದ ವಿದ್ಯಾರ್ಥಿಗಳು ನಾವು ತುಂಬಾ ಚೆನ್ನಾಗಿ ಬರೆದಿದ್ದೇವೆ ಎಂಬ ಖುಷಿ ವ್ಯಕ್ತಪಡಿಸಿದರು, ತುಮಕೂರಿನ ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದು ಹೊರ ಬಂದ ವಿದ್ಯಾರ್ಥಿಗಳು ವಿಕ್ಟರಿ ಸಿಂಬಲ್ ತೋರಿಸುತ್ತಾ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಸಂಭ್ರಮ ತೋರಿಸುತ್ತಿದ್ದರು.
ಶಿಕ್ಷಣ ಸಚಿವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿಯೇ ಸಿದ್ಧ ಎಂದು ಹೊರಟಾಗ ರಾಜ್ಯದಾದ್ಯಂತ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು, ಪೋಷಕರು ಸಹ ನಮ್ಮ ಮಕ್ಕಳಿಗೆ ಪರೀಕ್ಷೆ ಬೇಡ, ನಮ್ಮ ಮಕ್ಕಳಿಗೆ ಸಮಸ್ಯೆ ತಂದೊಡ್ಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಂಥ ವಿರೋಧದ ಮಧ್ಯೆಯೂ ಎಸ್‌ಎಸ್‌ಎಲ್‌ಸಿ ಎಕ್ಸಾಂ ಸುಸೂತ್ರವಾಗಿ ನಡೆದಿದೆ. ಪರೀಕ್ಷೆ ಬರೆದು ಬಂದ ವಿದ್ಯಾರ್ಥಿಗಳ ಮೊಗದಲ್ಲಿ ಸಂತಸ ಕಾಣುತ್ತಿತ್ತು.
ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಜುಲೈ 19 ಹಾಗೂ 22 ರಂದು 130 ಪರೀಕ್ಷಾ ಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಸುಗಮವಾಗಿ ನಡೆಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ನಂಜಯ್ಯ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 21,729 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು, ಈ ಪೈಕಿ 21,672 ವಿದ್ಯಾರ್ಥಿಗಳು ಹಾಜರಾಗಿದ್ದು, 57 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಖಾಸಗಿಯಾಗಿ 326 ಮತ್ತು 1,469 ಪುನಾರವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಕೋವಿಡ್ ಮಾರ್ಗಸೂಚಿ ಅನ್ವಯ ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಿ, ಪ್ರತಿ ವಿದ್ಯಾರ್ಥಿಯನ್ನು ತಪಾಸಣೆಗೆ ಒಳಪಡಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು, ಎಲ್ಲಾ ವಿದ್ಯಾರ್ಥಿಗಳಿಗೂ ಪರೀಕ್ಷೆಗೆ ಹಾಜರಾಗುವಂತೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಇಲಾಖಾಧಿಕಾರಿಗಳು ಪೋಷಕರನ್ನು ಸಂಪರ್ಕಿಸಿ ಗರಿಷ್ಠ ಹಾಜರಾತಿಗೆ ಕ್ರಮ ವಹಿಸಿದ್ದರು.
ಗುಬ್ಬಿ ತಾಲೂಕಿನಲ್ಲಿ ಜುಲೈ 19 ರಂದು ಪರೀಕ್ಷೆಗೆ ಗೈರು ಹಾಜರಾಗಿದ್ದ ನಾಗಸಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಲ್ಮಾನ್ ಹಾಗೂ ಕಡಬಾ ಕೆಪಿಎಸ್ ಶಾಲೆಯ ವಿದ್ಯಾರ್ಥಿ ಹರ್ಷವರ್ಧನ ಇ ಆಚಾರಿಯನ್ನು ಪ್ರೇರೇಪಿಸಿ ಜುಲೈ 22ರ ಪರೀಕ್ಷೆಗೆ ಹಾಜರಾಗುವಂತೆ ಮಾಡಿದ ಶಿಕ್ಷಣ ಇಲಾಖೆ ಹಾಗೂ ತಾಲೂಕು ಆಡಳಿತ ಕ್ರಮ ವಹಿಸಿದ್ದನ್ನು ಶ್ಲಾಘಿಸಿದ್ದಾರೆ.
ನಿಮಾನ್ಸ್ ಆಸ್ಪತ್ರೆಯಲ್ಲಿ ಇದ್ದ ಚಿಕ್ಕನಾಯಕನಹಳ್ಳಿ ತಾಲೂಕು ಸರ್ಕಾರಿ ಪ್ರೌಢಶಾಲೆಯ ಬಸವರಾಜು ಎಂಬ ವಿದ್ಯಾರ್ಥಿಯು ಕಾತ್ರಿಕೆಹಾಳ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕೆಂದು ಆಕಾಂಕ್ಷೆ ವ್ಯಕ್ತಪಡಿಸಿದ್ದರಿಂದ ವೈದ್ಯರ ಸಲಹೆ ಮೇರೆಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು.
ಸುಗಮವಾಗಿ ಪರೀಕ್ಷೆ ನಡೆಸಲು ಸಹಕರಿಸಿದ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಮತ್ತು ಅಧಿಕಾರಿಗಳಿಗೂ ಅಭಿನಂದನೆ ಸಲ್ಲಿಸಿದ್ದಾರೆ.
Get real time updates directly on you device, subscribe now.
Prev Post
Comments are closed.