ಬಿಎಸ್‌ವೈ ಒಳ್ಳೆ ಕೆಲಸ ಮಾಡಿದ್ದಾರೆ, ಅವರೇ ಸಿಎಂ ಆಗಿರಬೇಕು

ಯಡಿಯೂರಪ್ಪ ಪರ ಸ್ವಾಮೀಜಿಗಳ ಬ್ಯಾಟಿಂಗ್

181

Get real time updates directly on you device, subscribe now.

ಗುಬ್ಬಿ: ರಾಷ್ಟ್ರ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಒಮ್ಮೆ ಮುಖ್ಯಮಂತ್ರಿ ಮಾಡಿದ ಮೇಲೆ ಮತ್ತೆ ಮತ್ತೆ ಅದರ ಬದಲಾವಣೆ ಬಗ್ಗೆ ಯಾರು ಮಾತನಾಡಬಾರದು ಎಂದು ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹೇರೂರು ಗ್ರಾಮದ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿ ಯಾವುದೇ ಜಾತಿ ಮತದ ಪರವಾಗಿ ಮಾತನಾಡುತ್ತಿಲ್ಲ, ಬಿಎಸ್‌ವೈ ಮಾಡಿರುವ ಒಳ್ಳೆಯ ಕೆಲಸಗಳನ್ನು ಇಟ್ಟುಕೊಂಡು ಅವರ ಅಧಿಕಾರ ಮುಗಿಯುವವರೆಗೂ ಆಡಳಿತ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಮಾಧ್ಯಮಗಳು ಮನಸು ಮಾಡಿದರೆ ಈ ದೇಶವನ್ನು ಬದಲಾಯಿಸಬಹುದು, ಸ್ವಾಮೀಜಿಗಳು ಯಾವತ್ತೂ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂದ ಅವರು ಕೇವಲ ಮಾರ್ಗದರ್ಶನ ಮಾಡಬಹುದು ಎಂದು ತಿಳಿಸಿದರು.
ಕೊರೊನಾ ಸಮಯದಲ್ಲಿ ಸಾಕಷ್ಟು ಆರ್ಥಿಕ ಸಮಸ್ಯೆ ನಡುವೆಯು ಜನರ ಕಲ್ಯಾಣಕ್ಕೆ ಶ್ರಮಿಸಿದ್ದು, ಅಂಥವರು ಅಧಿಕಾರದಲ್ಲಿ ಮುಂದುವರಿಯಲಿ ಎಂದು ಬಿಜೆಪಿ ವರಿಷ್ಠರನ್ನು ಒತ್ತಾಯಿಸಿದರು.
ದೊಡ್ಡಗುಣಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರೆ ಆದು ಯಡಿಯೂರಪ್ಪನವರ ಅವಿರತ ಪರಿಶ್ರಮದಿಂದ ಮಾತ್ರ, ಇಲ್ಲಿ ಕೇವಲ ಒಂದು ಜಾತಿ ಸಮುದಾಯಕ್ಕಾಗಿ ಅವರು ಕೆಲಸ ಮಾಡಿಲ್ಲ, ಪ್ರತಿಯೊಂದು ಸಮುದಾಯಕ್ಕೂ ಸಹಕಾರ ಮಾಡಿದ್ದಾರೆ ಎಂದು ತಿಳಿಸಿದರು.
ಗುಬ್ಬಿ ತಾಲೂಕಿನ ನೂರಾರು ಕೆರೆಗಳಿಗೆ ನೀರು ಹರಿಸುವಲ್ಲಿ ಪ್ರಮುಖ ಪಾತ್ರವಹಿಸಿ ಲಕ್ಷಾಂತರ ರೈತರಿಗೆ ಅನುಕೂಲ ಮಾಡಿದ್ದಾರೆ, ಬಿಜೆಪಿ ಪಕ್ಷ ಅವರನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆಯುವ ಕೆಲಸ ಮಾಡಿದರೆ ಬಿಜೆಪಿ ಪಕ್ಷ ಅಧೋಗತಿಗೆ ಇಳಿಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ, ಹಾಗಾಗಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಇಟ್ಟುಕೊಂಡು ಅವರನ್ನ ಮುಂದುವರಿಸಬೇಕು, ಪ್ರತಿ ಬಾರಿಯೂ ವೀರಶೈವ ಲಿಂಗಾಯತ ಸಮುದಾಯದವರು ಅಧಿಕಾರಕ್ಕೆ ಬಂದಾಗ ಇಂತಹ ಸ್ಥಿತಿ ಬರುವುದು ಬೇಸರದಂತಿದೆ ಎಂದು ವಿಷಾಧಿಸಿದರು.
ಕೋಡಿಹಳ್ಳಿ ಮಠದ ಬಸವ ಭೃಂಗೇಶ್ವರ ಮಹಾ ಸ್ವಾಮೀಜಿ ಮಾತನಾಡಿ, ಪರಿಪೂರ್ಣ ಬಹುಮತ ಪಡೆದು ಅವರು ಅಧಿಕಾರ ಪಡೆದಿದ್ದು ಅವರ ಅಧಿಕಾರ ಅವಧಿ ಮುಗಿದ ನಂತರವೇ ಅವರನ್ನು ಬದಲಾವಣೆ ಮಾಡಬೇಕೆ ಹೊರತು ಮಧ್ಯದಲ್ಲಿ ಕೆಳಗಿಳಿಸುವುದು ತರವಲ್ಲ, ಕೇವಲ ಒಂದು ಸಮುದಾಯಕ್ಕೆ ಮಾತ್ರವಲ್ಲದೆ ಎಲ್ಲಾ ಸಮುದಾಯಗಳಿಗೂ ಅಭಿವೃದ್ಧಿ ಕೆಲಸಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ, ತಳಮಟ್ಟದ ನಮ್ಮ ಸಮುದಾಯಕ್ಕೂ ಕೂಡ ಅನುದಾನ ನೀಡುವ ಮೂಲಕ ಮಠ ಹಾಗೂ ನಮ್ಮ ಸಮುದಾಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ತೆವಡೇಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ ಮಾತನಾಡಿ ದೀಪ ಭಕ್ತಿ ತನ್ನನ್ನು ಸುಟ್ಟುಕೊಂಡು ಇನ್ನಿತರರಿಗೆ ಬೆಳಕು ನೀಡುತ್ತದೆ, ಹಾಗೆಯೇ ಸಂದೇಶವು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಬಿಜೆಪಿ ಪಕ್ಷವನ್ನು ಕಟ್ಟುವ ಸಂದರ್ಭದಲ್ಲಿ ಸಾಕಷ್ಟು ಹೋರಾಟದ ಹಾದಿ ತುಳಿದು ಕಳಶಪ್ರಾಯವಾಗಿ ನಿಂತಿದ್ದಾರೆ ಎಂದು ತಿಳಿಸಿದರು.
ಅಧಿಕಾರ ನಡೆಸುವ ಇಂತಹ ಸಂದರ್ಭದಲ್ಲಿ ಕಾಣದ ಕೈಗಳ ಕಿತಾಪತಿಯಿಂದ ಅವರು ಅಧಿಕಾರ ಬಿಡುವುದು ಯಾರೂ ಸಹ ಒಪ್ಪುವುದಿಲ್ಲ, ಇಂತಹ ಸಂಕಷ್ಟದ ಸಮಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪನವರೇ ಮುಂದುವರೆಯಬೇಕು, ಇದರ ಬಗ್ಗೆ ಬಿಜೆಪಿಯ ವರಿಷ್ಠರು ಮನಗಾಣಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುಬ್ಬಿ ತಾಲ್ಲೂಕಿನ ಎಲ್ಲಾ ಲಿಂಗಾಯತ ಮುಖಂಡರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!