ತುಮಕೂರಿನಲ್ಲಿ ವೀರಶೈವ ಸಮಾಜದ ಮುಖಂಡರ ಒತ್ತಾಯ

ಯಡಿಯೂರಪ್ಪರನ್ನೇ ಸಿಎಂ ಆಗಿ ಮುಂದುವರೆಸಿ

334

Get real time updates directly on you device, subscribe now.

ತುಮಕೂರು: ತಮ್ಮ ಇಳಿ ವಯಸ್ಸನ್ನು ಲಕ್ಕಿಸದೆ ಕೊರೊನಾ ಸಂದರ್ಭದಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ, ಸಮರ್ಥ ಆಡಳಿತ ನೀಡಿರುವ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಪೂರೈಸಲು ಅವಕಾಶ ನೀಡುವಂತೆ ಬಿಜೆಪಿ ಹೈಕಮಾಂಡ್‌ಗೆ ತುಮಕೂರು ಜಿಲ್ಲಾ ವೀರಶೈವ ಸಮಾಜ ಹಾಗೂ ವೀರಶೈವ ಸಮಾಜದ ವಿವಿಧ ಸಂಘಟನೆಗಳ ಒಕ್ಕೂಟದ ಪರವಾಗಿ ಟಿ.ಬಿ.ಶೇಖರ್‌ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರದೋ ಮಾತು ಕೇಳಿ ಅವರನ್ನು ಪದಚ್ಯುತಿಗೊಳಿಸಲು ಹೊರಟಿರುವುದು ಖಂಡನೀಯ. ಮುಂದಿನ ಎರಡು ವರ್ಷಗಳ ಅವಧಿಗೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯ ಬೇಕೆಂಬುದು ನಾಡಿನ ಹಲವು ಮಠಾಧೀಶರು, ಜನಸಾಮಾನ್ಯರ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ವೀರಶೈವ ಸಮಾಜವೂ ಧ್ವನಿಗೂಡಿಸುತ್ತಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಪಕ್ಷ ವಿಧಾನಸಭೆಯಲ್ಲಿ ಎರಡು ಸ್ಥಾನಗಳನ್ನು ಗಳಿಸಲು ಕಷ್ಟವಾಗಿದ್ದ ಸಂದರ್ಭದಲ್ಲಿ ಅದರ ನಾಯಕತ್ವ ವಹಿಸಿಕೊಂಡ ಬಿ.ಎಸ್‌.ಯಡಿಯೂರಪ್ಪ ಹಗಲಿರುಳೆನ್ನದೆ ಪಕ್ಷ ಸಂಘಟನೆ ಮಾಡಿದ್ದರ ಫಲವಾಗಿ 2008 ರಿಂದ 2013 ಮತ್ತು ಪ್ರಸ್ತುತ ಬಿಜೆಪಿ ಸರಕಾರ ಅಧಿಕಾರದಲ್ಲಿರಲು ಕಾರಣರಾಗಿದ್ದಾರೆ. ವಯಸ್ಸಿನ ನೆಪ ಮಾಡಿಕೊಂಡು ಇಂದು ಅಧಿಕಾರದಿಂದ ಕೆಳಗೆ ಇಳಿಸುವ ಮಾತನಾಡುತ್ತಿರುವ ಹೈಕಮಾಂಡ್‌, ಅವರು 75 ವರ್ಷ ತುಂಬಿದ ಸಂದರ್ಭದಲ್ಲಿಯೇ ಅವರನ್ನು ಮುಖ್ಯಮಂತ್ರಿ ಮಾಡಿದ್ದಾದ್ದರೂ ಏಕೆ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಉದ್ಬವವಾಗಿದೆ. ಹಾಗಾಗಿ ಪಕ್ಷಕ್ಕಾಗಿ ತನ್ನ ತನು, ಮನ, ಧನವನ್ನು ಧಾರೆ ಎರೆದ ಯಡಿಯೂರಪ್ಪ ನೋವಿನ ವಿದಾಯ ಹೇಳುವಂತೆ ಮಾಡುವುದು ಬಿಜೆಪಿ ಪಕ್ಷಕ್ಕೆ ಶೋಭೆ ತರುವಂತಹದ್ದಲ್ಲ ಎಂದು ಟಿ.ಬಿ.ಶೇಖರ್‌ ನುಡಿದರು.
ರಾಜ್ಯದಲ್ಲಿ ಇದುವರೆಗೂ ಸುಮಾರು 9 ಜನ ವೀರಶೈವ ಸಮುದಾಯದ ಮುಖಂಡರು ಮುಖ್ಯಮಂತ್ರಿಗಳಾಗಿ ಅಧಿಕಾರ ಮಾಡಿದ್ದು, ಯಾರು ಸಹ ತಮ್ಮ ಐದುವರ್ಷಗಳ ಅವಧಿ ಪೂರೈಸಲು ಅವಕಾಶ ದೊರೆತಿಲ್ಲ. ಬಿ.ಎಸ್‌.ಯಡಿಯೂರಪ್ಪ ಅವರು ಜೈಲು ವಾಸ ಮಾಡಿದ ನಂತರವೂ ಪಕ್ಷನಿಷ್ಠರಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರನ್ನು ಮುಂದಿನ ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವಕಾಶ ನೀಡಬೇಕೆಂಬುದು ಸಮಗ್ರ ವೀರಶೈವ ಸಮಾಜ ಭಾಂದವರ ಒತ್ತಾಯವಾಗಿದೆ ಎಂದರು.
ಚಿಕ್ಕತೊಟ್ಲುಕೆರೆಯ ಅಟವಿ ಸುಕ್ಷೇತ್ರದ ಶ್ರೀಅಟವಿ ಶಿವಲಿಂಗ ಮಹಾ ಸ್ವಾಮೀಜಿಗಳು ಮಾತನಾಡಿ, ವೀರಶೈವ ಸಮಾಜ ಸ್ವಾತಂತ್ರ ಪೂರ್ವದಲ್ಲಿ ಮತ್ತು ಸ್ವಾತಂತ್ರೋತ್ತರದಲ್ಲಿ ಸಮಾಜಕ್ಕೆ ತಮ್ಮದೆಲ್ಲವನ್ನು ಆರ್ಪಿಸಿಕೊಂಡಿದೆ. ಆದರೆ ಗೇಣಿ ಕಾಯ್ದೆಯಿಂದ ಸಾವಿರಾರು ಎಕರೆ ಭೂಮಿಯ ಒಡೆಯರಾಗಿ, ದೇಶಕ್ಕೆ ಅನ್ನ ನೀಡುತ್ತಿದ್ದ ವೀರಶೈವರು ಇಂದು ಸಣ್ಣ ಹಿಡುವಳಿದಾರರಾಗಿ ಬದುಕುತಿದ್ದಾರೆ. ಆದರೆ ವೀರಶೈವ ಸಮಾಜದಲ್ಲಿರುವ 180 ಒಳಪಂಗಡಗಳಲ್ಲಿ ಹೊಂದಾಣಿಕೆಯ ಕೊರತೆಯಿಂದ ಇಂದು ದಕ್ಕಿರುವ ಒಂದು ಮುಖ್ಯಮಂತ್ರಿ ಪದವಿ ಉಳಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದೇವೆ. ಹಾಗಾಗಿ ಯಾವುದೋ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಿ ಅವರ ತೇಜೋವಧೆ ಮಾಡುವುದು ಸರಿಯಲ್ಲ ಎಂದರು.
ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮೋಹನ್ ಪಟೇಲ್‌ ಮಾತನಾಡಿ, ನಮ್ಮ ರಾಷ್ಟ್ರೀಯ ನಾಯಕರಾದ ಶಾಮನೂರು ಶಿವಶಂಕರಪ್ಪ ಅವರು ಈಗಾಗಲೇ ಈ ಕುರಿತು ತಮ್ಮ ಸ್ಪಷ್ಟ ಅಭಿಪ್ರಾಯ ತಿಳಿಸಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸುವುದು ಅನಾವಶ್ಯಕ, ಇದು ಬಿಜೆಪಿ ಪಕ್ಷಕ್ಕೂ ಒಳ್ಳೆಯದಲ್ಲ ಎಂದರು.
ವೀರಶೈವ ಯುವ ಘಟಕದ ಅಧ್ಯಕ್ಷ ನಿಶ್ಚಲ್‌, ವೀರಶೈವ ಸಹಕಾರ ಬ್ಯಾಂಕಿನ ಅಧ್ಯಕ್ಷ ರುದ್ರಪ್ಪ ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ನಗರ ವೀರಶೈವ ಸಮಾಜದ ಕಾರ್ಯದರ್ಶಿ ರೇಣುಕಾನಂದ, ಉದ್ಯಮಿ ಚಂದ್ರಮೌಳಿ, ಮೈತ್ರಿ ಮಹಿಳಾ ಸಮಾಜ ಹಾಗೂ ವಿವಿಧ ವೀರಶೈವ ಸಮಾಜದ ಮುಖಂಡರು ಇತರಿದ್ದರು.

Get real time updates directly on you device, subscribe now.

Comments are closed.

error: Content is protected !!