ತುಮಕೂರು: ನಗರದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಜಿಲ್ಲಾ ವಿಕಲಚೇತನರ ಸ್ಪೋರ್ಟ್ಸ್ ಅಕಾಡೆಮಿಯ ವಿಕಲಚೇತನ ಕ್ರೀಡಾಪಟುಗಳಿಗೆ ಸ್ಪೋರ್ಟ್ಸ್ ವ್ಹೀಲ್ ಚೇರ್ ಹಾಗೂ ಸಾಧನ ಸಲಕರಣೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ವಿತರಿಸಿದರು.
ಇಲ್ಲಿನ ಜಿಪಂ ಕಚೇರಿ ಆವರಣದಲ್ಲಿ ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ನೀಡಲಾದ ಈ ಸ್ಪೋರ್ಟ್ಸ್ ವ್ಹೀಲ್ ಚೇರ್ ಮತ್ತು ಸಾಧನ ಸಲಕರಣೆ ವಿತರಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ವಿಕಲಚೇತನರು ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ತುಂಬಾ ಸಂತಸದ ಸಂಗತಿ, ಹಾಗಾಗಿ ಈ ಕ್ರೀಡಾಪಟುಗಳಿಗೆ ಅಗತ್ಯ ಇರುವ ಸಾಧನ, ಸಲಕರಣೆ ಒದಗಿಸಬೇಕಾದ್ದು ಸರ್ಕಾರದ ಕರ್ತವ್ಯ ಎಂದರು.
ವಿಕಲಚೇತನ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸ್ಪೋರ್ಟ್ಸ್ ವ್ಹೀಲ್ ಚೇರ್ ಮತ್ತು ಸಾಧನ ಸಲಕರಣೆಗಳನ್ನು ವಿತರಿಸಲಾಗಿದೆ. ಇದನ್ನು ವಿಕಲಚೇತನ ಕ್ರೀಡಾಪಟುಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇತ್ತೀಚೆಗೆ ನಡೆದ ವಿಕಲಚೇತನರ ದಿನಾಚರಣೆಯಂದು ತುಮಕೂರು ಜಿಲ್ಲಾ ವಿಕಲಚೇತನ ಸ್ಪೋರ್ಟ್ಸ್ ಅಕಾಡೆಮಿಯಿಂದ ಅಗತ್ಯ ಇರುವ ಸ್ಪೋರ್ಟ್ಸ್ ವ್ಹೀಲ್ ಚೇರ್ ಮತ್ತು ಸಾಧನ ಸಲಕರಣೆ ಒದಗಿಸಿ, ವಿಕಲಚೇತನರಲ್ಲಿ ಕ್ರೀಡಾಸಕ್ತಿ ಬೆಳೆಸಿ ಮುಖ್ಯವಾಹಿನಿಗೆ ತರುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.
ಈ ಮನವಿಗೆ ಸ್ಪಂದಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಅವರು ಜಿಲ್ಲಾ ಪಂಚಾಯ್ತಿ ಅನುದಾನದೊಂದಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಕ್ರಿಕೆಟ್ ಸ್ಪೋರ್ಟ್ಸ್ ವ್ಹೀಲ್‌ಚೇರ್ 6, ಸೇಫ್ಟಿ ಚೇರ್ 11, ಸಿಪಿ ಚೇರ್ 20 ಹಾಗೂ 45 ಕಿವಿಯಂತ್ರಗಳನ್ನು ವಿತರಿಸಿದರು.
ಈ ಸ್ಪೋರ್ಟ್ಸ್ ವ್ಹೀಲ್‌ಚೇರ್‌ಗಳು ಕ್ರಿಕೆಟ್, ಬಾಸ್ಕೆಟ್ ಬಾಲ್, ಕಬಡ್ಡಿ, ಟೆನ್ನಿಸ್ ಸೇರಿದಂತೆ ಇತರೆ ಕ್ರೀಡೆಗಳನ್ನು ಆಡಲು ಅನುಕೂಲವಾಗಲಿವೆ ಎಂದು ವಿಕಲಚೇತನ ಸ್ಪೋರ್ಟ್ಸ್ ಅಕಾಡೆಮಿ ತಿಳಿಸಿದೆ.
ತಮ್ಮ ಮನವಿಗೆ ಸ್ಪಂದಿಸಿ ವಿಕಲಚೇತನರಿಗೆ ಸ್ಪೋರ್ಟ್ಸ್ ವ್ಹೀಲ್ ಚೇರ್ ಮತ್ತು ಸಾಧನ ಸಲಕರಣೆಗಳನ್ನು ವಿತರಿಸಿ ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆರೋಗ್ಯ ಇಲಾಖೆಗೆ ಜಿಲ್ಲಾ ವಿಕಲಚೇತನ ಸ್ಪೋರ್ಟ್ಸ್ ಅಕಾಡೆಮಿ ಕೃತಜ್ಞತೆ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಶಾಸಕ ಮಸಾಲೆ ಜಯರಾಮ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಪಂ ಸಿಇಓ ಡಾ.ಕೆ.ವಿದ್ಯಾಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್, ಡಿಹೆಚ್‌ಓ ಡಾ.ನಾಗೇಂದ್ರಪ್ಪ ಮತ್ತಿತರರು ಇದ್ದರು.
ವಿಶೇಷಚೇತನರಿಗೆ ಸ್ಪೋರ್ಟ್ಸ್ ವ್ಹೀಲ್‌ಚೇರ್ ವಿತರಣೆ
Get real time updates directly on you device, subscribe now.
Prev Post
Comments are closed.