ಸೋನೆ ಮಳೆಗೆ ಕೆಸರು ಗದ್ದೆಯಾದ ರಸ್ತೆ- ಜನರ ಪರದಾಟ

512

Get real time updates directly on you device, subscribe now.

ಚೇತನ್
ಚಿಕ್ಕನಾಯಕನಹಳ್ಳಿ:
ಪಟ್ಟಣದಲ್ಲಿ ನಿರಂತರವಾಗಿ ಸುರಿಯುತ್ತಿರುವ ಸೋನೆ ಮಳೆಗೆ ರಸ್ತೆಗಳು ಕೆಸರು ಗದ್ದೆಗಳಾಗಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಪುರಸಭೆ ವ್ಯಾಪ್ತಿಯ ಬಹುತೇಕ ರಸ್ತೆಗಳ ಸ್ಥಿತಿ ಹದಗೆಟ್ಟಿದ್ದು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ 10 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಜಡಿ ಮಳೆಗೆ ಪಟ್ಟಣದ ಪುರಸಭೆಯ 23 ವಾರ್ಡ್‌ಗಳಲ್ಲಿನ ಬಹುತೇಕ ರಸ್ತೆಗಳಲ್ಲಿ ಓಡಾಡಲು ಪ್ರಯಾಸಪಡುವಂತಾಗಿದ್ದು, ರಸ್ತೆಗಳಲ್ಲಿ ಗುಂಡಿಗಳು, ಕೆಸರು, ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡು ಓಡಾಡಲು ಕಷ್ಟವಾಗಿದೆ. ದಬ್ಬೆಘಟ್ಟ , ಕೇದಿಗೆಹಳ್ಳಿ ವಾರ್ಡ್‌ಗಳು ಪುರಸಭೆ ವ್ಯಾಪ್ತಿಗೆ ಸೇರಿಕೊಂಡು ಹಲವಾರು ವರ್ಷಗಳು ಕಳೆದರು ಸಹ ರಸ್ತೆ ಕಾಮಗಾರಿ ಮರೀಚಿಕೆಯಾಗಿದೆ.

ಆರಂಭಗೊಳ್ಳದ ಯುಜಿಡಿ: ಪಟ್ಟಣಕ್ಕೆ ಸುಮಾರು 54 ಕೋಟಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿ ನಡೆಯುವುದರ ಬಗ್ಗೆ ಕಳೆದ ಸುಮಾರು ಎರಡು ವರ್ಷಗಳಿಂದ ಮಾತು ಕೇಳಿ ಬರುತ್ತಿದ್ದು, ಯುಜಿಡಿ ಟೆಂಡರ್‌ ರದ್ದುಗೊಂಡಿರುವ ಬಗ್ಗೆ ಪುರಸಭೆ ಇಂಜಿನಿಯರ್‌ ತಿಳಿಸಿದ್ದು, ಪಟ್ಟಣದ 23 ವಾರ್ಡ್‌ಗಳ ಪೈಕಿ ಸುಮಾರು 74 ಕಿ.ಮೀ ರಸ್ತೆ ಇದ್ದು ಇದರಲ್ಲಿ ಕೇವಲ ಅರ್ಧದಷ್ಟು ರಸ್ತೆಗಳಿಗೆ ಮಾತ್ರ ಡಾಂಬರೀಕರಣ ಮಾಡಲಾಗಿದೆ. ಯುಜಿಡಿ ಕಾಮಗಾರಿ ಮುಗಿಯುವವರೆಗೆ ಪಟ್ಟಣದಲ್ಲಿನ ರಸ್ತೆ ಕಾಮಗಾರಿ ನಡೆಸಲಾಗುವುದಿಲ್ಲ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದು, ಆರಂಭವಾಗದ ಯುಜಿಡಿ ಕಾಮಗಾರಿಯ ನೆಪದಲ್ಲಿ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ದಿನನಿತ್ಯ ದಿನನಿತ್ಯ ತೊಂದರೆ ಅನುಭವಿಸುವಂತಾಗಿದೆ.

ತಾತ್ಕಾಲಿಕವಾಗಿ ರಸ್ತೆ ಅಭಿವೃದ್ಧಿಗೊಳಿಸಿ: ಪಟ್ಟಣದಲ್ಲಿನ ಮಹಾಲಕ್ಷ್ಮೀ ಬಡಾವಣೆ ಗೆ ಸೇರಿಕೊಂಡಿರುವ ವಾರ್ಡ್‌ ನಂ. 5, 8 ,9 ಹಾಗೂ ಕೇದಿಗೆಹಳ್ಳಿ, ದಬ್ಬೆಘಟ್ಟ ವಾರ್ಡ್‌ಗಳಲ್ಲಿನ ರಸ್ತೆಗಳು ತೀರ ಹದಗೆಟ್ಟಿದ್ದು ಪುರಸಭೆಯಿಂದ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ಮಳೆ ಬಂದರೆ ಕೆಸರು ಆಗದಂತೆ ತಾತ್ಕಾಲಿಕವಾಗಿ ಕಾಮಗಾರಿ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ದಬ್ಬೆಘಟ್ಟ ನಿವಾಸಿ ಗಿರೀಶ್‌ ಮಾತನಾಡಿ, ದಬ್ಬೆಘಟ್ಟ ವಾರ್ಡ್‌ನಲ್ಲಿ ರಸ್ತೆಗಳು ಮಳೆಯಿಂದ ಕೆಸರು ಗದ್ದೆಗಳಾಗಿದ್ದು, ರಸ್ತೆಗಳಲ್ಲಿ ಓಡಾಡಲು ತೀವ್ರ ತೊಂದರೆಯಾಗಿದೆ, ಇಲ್ಲಿನ ಚರಂಡಿ ಕಾಮಗಾರಿ ಸಹ ಸರಿಯಿಲ್ಲದೆ ಮಳೆಯ ಸಂಪೂರ್ಣ ನೀರು ರಸ್ತೆಗೆ ಬಂದು ನಿಂತುಕೊಳ್ಳುತ್ತಿದೆ, ಪುರಸಭೆ ಸಮಸ್ಯೆ ಮನಗೊಂಡು ರಸ್ತೆ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪುರಸಭೆ ಇಂಜಿನಿಯರ್‌ ಯೋಗನಂದ ಬಾಬು ಪ್ರತಿಕ್ರಿಯಿಸಿ ಪಟ್ಟಣದ 23ನೇ ವಾರ್ಡ್‌ಗಳಲ್ಲಿ ಯುಜಿಡಿ ಕಾಮಗಾರಿ ನಡೆಸಲು 54 ಕೋಟಿ ಬಿಡುಗಡೆಗೊಂಡಿದೆ, ಕಾಮಗಾರಿಯ ಟೆಂಡರ್‌ ಇನ್ನೂ ಆಗಿಲ್ಲ, ಯುಜಿಡಿ ಮುಗಿಯುವ ವರೆಗೆ ರಸ್ತೆ ಕಾಮಗಾರಿ ನಡೆಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!