ಸಿಎಂ ಬದಲಾದರೆ ಸಾಲದು, ಇಡೀ ವ್ಯವಸ್ಥೆ ಬದಲಾಗಬೇಕು: ಸುರ್ಜೇವಾಲ

ಕರ್ನಾಟಕದಲ್ಲಿರೋದು ಭ್ರಷ್ಟ ಸರ್ಕಾರ

569

Get real time updates directly on you device, subscribe now.

ತುಮಕೂರು: ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರಕಾರ ಭ್ರಷ್ಟಾಚಾರ ಮತ್ತು ಜನ ವಿರೋಧಿ ಧೋರಣೆ ಹೊಂದಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್‌ ಸುರ್ಜೇವಾಲ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್‌ ನಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಪಕ್ಷದ ವಿಭಾಗೀಯ ಮಟ್ಟದ ಮುಖಂಡರ ಸಭೆಯ ವೇಳೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಗ್ಧ ಮಕ್ಕಳಿಗೆ ನೀಡುವ ಪೌಷ್ಠಿಕ ಆಹಾರವಾದ ಮೊಟ್ಟೆ ಖರೀದಿಯಲ್ಲಿಯೂ ಲಂಚ ಹೊಡೆಯುವ ಮೂಲಕ ನಮ್ಮದು ಜನವಿರೋಧಿ ಸರಕಾರ ಎಂಬುದನ್ನು ಸಾಬೀತು ಪಡಿಸಿದೆ ಎಂದರು.
ಅತ್ಯಂತ ಜನವಿರೋಧಿ ಸರಕಾರದಲ್ಲಿ ಕೇವಲ ಮುಖ್ಯಮಂತ್ರಿ ಬದಲಾದರೆ ಸಾಲದು, ಇಡೀ ವ್ಯವಸ್ಥೆಯೇ ಬದಲಾಗಬೇಕು. ಕೊರೊನದಿಂದ ಒಂದು ಲಕ್ಷಕ್ಕೂ ಅಧಿಕ ಜನ ರಾಜ್ಯದಲ್ಲಿ ತೀರಿಹೋದರು. ಆದರೆ ಈ ಸರಕಾರ ಜನರ ನೆರವಿಗೆ ಬರಲಿಲ್ಲ. ಕೊರೊನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ಸಂಕಷ್ಟದಲ್ಲಿದ್ದ ಜನರ ನೆರವಿಗೆ ನಿಂತಿದ್ದು ಕಾಂಗ್ರೆಸ್‌ ಪಕ್ಷ, ಪಕ್ಷದ ಕಾರ್ಯಕರ್ತರು, ಮುಖಂಡರು ತಮ್ಮ ಕೈಲಾದ ನೆರವನ್ನು ಕೈಯಿಂದ ಭರಿಸಿ, ಸಂಕಷ್ಟಕ್ಕೆ ಸ್ಪಂದಿಸಿದರು, ಫುಡ್‌ಕಿಟ್‌ ವಿತರಣೆ, ಕೋವಿಡ್‌ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದನ್ನು ಕಾಂಗ್ರೆಸ್‌ ಮುಖಂಡರೇ ಬಯಲಿಗೆಳೆದರು ಎಂದು ಸುರ್ಜೇವಾಲ ತಿಳಿಸಿದರು.
ಕಾಂಗ್ರೆಸ್‌ ಪಕ್ಷ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ವಿಧಾನಪರಿಷತ್‌ ಚುನಾವಣೆಗಳನ್ನು ಅತ್ಯಂತ ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಕಾರ್ಯಕರ್ತರ ಧ್ವನಿಯೇ ಪಕ್ಷದ ಧ್ವನಿಯಾಗಿ ಪ್ರತಿಬಿಂಬಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಈ ರೀತಿ ವಿಭಾಗೀಯ ಸಭೆಗಳನ್ನು ನಡೆಸಿ, ಕಾರ್ಯಕರ್ತರ ಅಭಿಪ್ರಾಯಗಳನ್ನು ಆಲಿಸಿ, ಅವರ ಸಲಹೆ, ಸೂಚನೆಗಳನ್ನು ಪಡೆದು, ಅಗತ್ಯ ಬದಲಾವಣೆ ತರಲಿದೆ. ಕಾಂಗ್ರೆಸ್‌ ಪಕ್ಷವನ್ನು ಕೇಡರ್‌ ಬೇಸ್‌ ಪಕ್ಷವಾಗಿ ರೂಪಿಸಲಾಗುತ್ತಿದೆ ಎಂದರು.
ಬಿಜೆಪಿ ಪಕ್ಷದ ಮೇಲೆ ಹಿಡಿತ ಸಾಧಿಸಿರುವ ಪ್ರಧಾನಿ ನರೇಂದ್ರಮೋದಿ ಮತ್ತು ಅಮಿತ್‌ ಷಾ ಅವರು ಈಗಾಗಲೇ ಹಿರಿಯ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ, ಮುರುಳಿ ಮನೋಹರ ಜೋಷಿ, ಯಶವಂತ ಸಿನ್ಹಾ, ಶತೃಜ್ಞ ಸಿನ್ಹಾ, ಶಾಂತಕುಮಾರ್‌, ಕೇಶವಬಾಯಿ ಪಟೇಲ್‌ ಸೇರಿದಂತೆ ಎಲ್ಲಾ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಇಳಿದ ತಕ್ಷಣ ಯಡಿಯೂರಪ್ಪನವರಿಗೂ ಅದೇ ಸ್ಥಿತಿ ಬರಲಿದೆ, ಇದು ಭವಿಷ್ಯವಲ್ಲ, ವಾಸ್ತವ ಎಂದು ಸುರ್ಜೇವಾಲ ನುಡಿದರು.
ಕಾಂಗ್ರೆಸ್‌ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯನ್ನು ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮಾರ್ಗದರ್ಶನದಂತೆ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದೆ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮುಂದಿರುವ ಗುರಿ, ಆ ನಂತರ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಮುಖ್ಯಮಂತ್ರಿ ಕುರಿತ ಯಾವುದೇ ಚರ್ಚೆಗಳು ಈಗ ಅಪ್ರಸ್ತುತ ಎಂದು ಸ್ಪಷ್ಟಪಡಿಸಿದರು.
ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ವಿಧಾನಪರಿಷತ್‌ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಸಂಕಲ್ಪ ಯಾತ್ರೆಯನ್ನು ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿದೆ. ಬೂತ್‌ ಮಟ್ಟದಲ್ಲಿ, ಗ್ರಾಮ ಮಟ್ಟದಲ್ಲಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಆರಂಭವಾಗಿದೆ. ಕರ್ನಾಟಕ ಜನತೆ ಈ ಹಿಂದಿನ ಕಾಂಗ್ರೆಸ್‌ ಪಕ್ಷದ ಸರಕಾರಕ್ಕು, ಹಾಲಿ ಇರುವ ಬಿಜೆಪಿ ಪಕ್ಷದ ಸರಕಾರವನ್ನು ತುಲನೆ ಮಾಡಿ ನೋಡುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದ್ದನ್ನು ಬಿಟ್ಟರೆ ಜನರಿಗೆ ಒಂದೇ ಒಂದು ಕಾರ್ಯಕ್ರಮ ನೀಡಿಲ್ಲ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವ ಮೂಲಕ ಅವರ ಆಡಳಿತ ಸರಿಯಿಲ್ಲ ಎಂದು ಬಿಜೆಪಿ ಪಕ್ಷದ ಹೈಕಮಾಂಡ್‌ ಒಪ್ಪಿಕೊಂಡಂತಾಗಿದೆ ಎಂದರು.
ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಪಕ್ಷದ ಕಾರ್ಯಕರ್ತರನ್ನು ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಇಂದಿನ ಸಭೆ ಅತ್ಯಂತ ಮಹತ್ವ ಪಡೆದಿದೆ. ಸರಕಾರ ಈ ಚುನಾವಣೆಗಳನ್ನು ಮುಂದೂಡಿದ್ದರೂ ಇದನ್ನು ಚುನಾವಣೆ ಆಯೋಗ ಒಪ್ಪಿಕೊಂಡಿಲ್ಲ. ಯಾವುದೇ ಚುನಾವಣೆ ನಡೆಸುವುದು, ಮುಂದೂಡುವುದು ಸರಕಾರದ ಕೆಲಸವಲ್ಲ, ಚುನಾವಣಾ ಆಯೋಗದ ಕೆಲಸ, ಹಾಗಾಗಿ ಯಾವುದೇ ಸಂದರ್ಭದಲ್ಲಿಯಾದರೂ ಚುನಾವಣೆ ಎದುರಾಗಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಮಾಜಿ ಮುಖ್ಯಮಂತ್ರಿ ವೀರಪ್ಪಮೊಯಿಲಿ, ಮಾಜಿ ಸಂಸದ ಕೆ.ಹೆಚ್‌.ಮುನಿಯಪ್ಪ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ರಮೇಶ್‌ಕುಮಾರ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌, ಈಶ್ವರ ಖಂಡ್ರೆ, ವಿ.ಆರ್‌.ಸುದರ್ಶನ್‌ ಸೇರಿದಂತೆ ಹಲವರು ಇದ್ದರು.

ಮತ್ತೊಬ್ಬ ಭ್ರಷ್ಟ ಸಿಎಂ ಬರ್ತಾನೆ
ಒಬ್ಬ ಭ್ರಷ್ಟ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದಾಕ್ಷಣ ಬಿಜೆಪಿ ಪಕ್ಷವೇನು ಸ್ವಚ್ಛವಾಗಲ್ಲ, ಮತ್ತೊಬ್ಬ ಭ್ರಷ್ಟ ಮುಖ್ಯಮಂತ್ರಿ ಬರ್ತಾನೆ, ಇಡೀ ಪಕ್ಷವೇ ಭ್ರಷ್ಟ ಪಕ್ಷ, ಐಎಎಸ್‌ನಂತಹ ಉನ್ನತ ಹುದ್ದೆಗಳನ್ನು ತುಂಬುವಾಗಲು ಹಣ ಪಡೆದು ಹುದ್ದೆ ನೀಡುವಂತಹ ನೀಚತನಕ್ಕೆ ಇಳಿದಿರುವುದು ದುರಂತ, ಕಳೆದ ಎರಡು ವರ್ಷಗಳಲ್ಲಿ ಅಭಿವೃದ್ಧಿ ಎಂಬುದೇ ಇಲ್ಲವಾಗಿದೆ, ಹಾಗಾಗಿ ಜನರ ಒಳಿತಿಗಾಗಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ.
ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Get real time updates directly on you device, subscribe now.

Comments are closed.

error: Content is protected !!