ಶಿರಾ: ನಮಗೆ ಕಾನೂನು ಬೇಕಿಲ್ಲ ಕುಡಿಯಲು ನೀರು ಕೊಡಿ, ಮದಲೂರು ಶಿರಾದ ಭಾಗವೇ ಆಗಿದೆ, ಪಾಕಿಸ್ತಾನದಲ್ಲೇನೂ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದಗೌಡ ಒತ್ತಾಯಿಸಿದರು.
ನಗರದ ತಮ್ಮ ಖಾಸಗಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶುಕ್ರವಾರ ತುಮಕೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರು ಹೇಮಾವತಿ ನಾಲೆಯಿಂದ ತುಮಕೂರು ಜಿಲ್ಲೆಗೆ ನೀರು ಹರಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದೇ ಸಭೆಯಲ್ಲಿದ್ದ ನಾನು ಮದಲೂರು ಕೆರೆಗೆ ನೀರು ಹರಿಸುವ ಬಗ್ಗೆ ಪ್ರಸ್ತಾಪ ಮಾಡಿದೆ. ಚಿದಾನಂದ ಗೌಡರು ಹೇಳಿದರು ಎನ್ನುವ ಕಾರಣಕ್ಕೆ ಮೊದಲೂರು ಕೆರೆಗೆ ನೀರು ಬಿಡಲು ಆಗುತ್ತಿದೆಯೇ ಎಂದು ಸಚಿವರು ಪ್ರಶ್ನಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಮಾವತಿ ಹರಿಸಿದರೆ ಅಧಿಕಾರಿಗಳು ಜೈಲಿಗೆ ಹೋಗಬೇಕಾದೀತು ಎನ್ನುವ ಅರ್ಥದಲ್ಲಿ ಮಾತನಾಡಿರುವುದು ಪತ್ರಿಕೆಗಳ ಮುಖಾಂತರ ನನಗೆ ತಿಳಿಯಿತು. ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ಕಾನೂನಿನ ತೊಡಕಿಲ್ಲ, ನಮಗೆ ಯಾವುದೇ ಕಾನೂನು ಬೇಕಿಲ್ಲ, ಕುಡಿಯುವ ನೀರು ಕೊಡಿ ಎಂದು ಅವರು ಒತ್ತಾಯಿಸಿದರು.
ಕೇವಲ 0.4 ಟಿಎಂಸಿ ನೀರಿನಿಂದ ಮೊದಲು ಕೆರೆ ತುಂಬಲಿದೆ, ಅಷ್ಟು ನೀರಿನಿಂದ ಹೇಮಾವತಿ ಬರಿದಾಗುವುದಿಲ್ಲ, ಒಂದು ವೇಳೆ ಜೈಲಿಗೆ ಹಾಕುವ ಪರಿಸ್ಥಿತಿ ಬಂದರೆ ಅಧಿಕಾರಿಗಳಿಗಿಂತ ಮೊದಲು ನನ್ನನ್ನು ಜೈಲಿಗೆ ಹಾಕಿ ಎಂದರು.
ತಮ್ಮ ಅಧಿಕಾರ ಅವಧಿಯಲ್ಲಿ ಚಿಕ್ಕನಾಯಕನಹಳ್ಳಿಯನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದೀರಿ, ಮೊದಲಿನ ವಿಚಾರದಲ್ಲಿ ಭೇದ ಬೇಡ, ಮದಲೂರು ಕೆರೆಗೆ ನೀರು ಹರಿಸಿದರೆ ಗೌಡಗೆರೆ ಮತ್ತು ಹುಲಿಕುಂಟೆ ಹೋಬಳಿಯ ಅಂತರ್ಜಲ ಹೆಚ್ಚಾಗಲಿದೆ. ಈಗಾಗಲೇ ಆ ಭಾಗದ ಜನರು ಫ್ಲೋರೈಡ್ ನೀರು ಕುಡಿದು ಕ್ಯಾನ್ಸರ್ ಫ್ಲೋರೋಸಿಸ್ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾನೂನಿಗಿಂತ ಮಾನವೀಯತೆ ಮುಖ್ಯವಾಗುತ್ತದೆ. ಇದೇ ಮಾತನ್ನು ಹೇಮಾವತಿ ಹರಿದುಬರುವ ಭಾಗದ ಎಲ್ಲಾ ಶಾಸಕರಲ್ಲಿ ಜನಸಾಮಾನ್ಯರಲ್ಲಿ ಮನವಿ ಮಾಡುತ್ತೇನೆ, ನಾವು ನಿಮ್ಮ ಅಣ್ಣ ತಮ್ಮಂದಿರೇ ನಮಗೆ ಕುಡಿಯಲು ನೀರು ಕೊಡಿ. ನೀರು ಕೊಡಲು ಆಗಲಿಲ್ಲ ಎಂದರೆ ವಿಷ ಕೊಡಿ ಎಂದು ಮನವಿ ಮಾಡಿದರು.
ಈ ಹಿಂದೆ ಚುನಾವಣೆ ವೇಳೆ ನಾವು ನಿಯೋಗವೊಂದನ್ನು ತೆಗೆದುಕೊಂಡು ಹೋಗಿ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿ ಮದಲೂರು ಕೆರೆಗೆ ನೀರು ಹರಿಸಿದ್ದವು. ಹಿಂದೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿದ್ದಾಗ ಮೊದಲೂರು ಚಾನಲ್ ನಿರ್ಮಾಣಗೊಂಡಿದೆ. ನಾವು ಈಗಲೂ ಸರ್ಕಾರದ ಮೇಲೆ ಒತ್ತಡ ತಂದು ನೀರು ಹರಿಸಲು ಬದ್ಧರಾಗಿದ್ದೇವೆ. ನಾವು ಪರಿಸ್ಥಿತಿ ನಿಭಾಯಿಸಲಿದ್ದೇವೆ. ಯಾವುದೇ ಅಧಿಕಾರಿಗಳನ್ನು ಜೈಲಿಗೆ ಹೋಗಲು ಬಿಡುವುದಿಲ್ಲ ಎಂದರು.
ಮಾಧುಸ್ವಾಮಿ ಅಧಿಕಾರಿಗಳನ್ನು ಜೈಲಿಗೆ ಕಳಿಸುವ ಕುರಿತು ನೀಡಿದ್ದಾರೆ ಎನ್ನುವ ಹೇಳಿಕೆ ಕುರಿತಂತೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಉಲ್ಲೇಖವಾಗಿರುವ ಕೆಲವು ಹೇಳಿಕೆಗಳ ಬಗ್ಗೆ ಮಾತನಾಡಿದ ಚಿದಾನಂದಗೌಡ ಜೆಡಿಎಸ್ ಮತ್ತು ಕಾಂಗ್ರೆಸ್ 70 ವರ್ಷಗಳಲ್ಲಿ ಆಡಳಿತ ನಡೆಸಿದೆ. ಆಗ ನೀವು ನೀರು ತರಲಿಲ್ಲ, ಈಗ ವಿಚಾರವನ್ನು ಯಾವುದೇ ವಿವಾದಕ್ಕೊಳಪಡಿಸುವ, ರಾಜಕೀಯಕ್ಕೆ ಬಳಸುವ ಹಕ್ಕಿಲ್ಲ ಎಂದರು.
ಕುಡಿವ ನೀರಿಗಾಗಿ ಜೈಲಿಗೆ ಹೋಗಲು ಸಿದ್ಧ: ರಾಜೇಶ್ ಗೌಡ
ಶಿರಾ: ಕುಡಿಯುವ ನೀರು ಹರಿಸುವ ಉದ್ದೇಶಕ್ಕೆ ಮದಲೂರು ಕೆರೆಗೆ ನೀರು ಹರಿಸಿದರೆ ಅಧಿಕಾರಿಗಳನ್ನು ಜೈಲಿಗೆ ಕಳಿಸುವುದಾದರೆ ಮೊದಲು ನಾನೇ ಜೈಲಿಗೆ ಹೋಗುತ್ತೇನೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕೆಗೆ ಹೇಳಿಕೆ ನೀಡಿರುವ ಅವರು ಶಿರಾ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಿದರೆ ಅಧಿಕಾರಿಗಳನ್ನು ಜೈಲಿಗೆ ಕಳಿಸುತ್ತೇನೆ ಎಂದು ಶುಕ್ರವಾರ ತುಮಕೂರು ಕೆಡಿಪಿ ಸಭೆಯಲ್ಲಿ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಪತ್ರಿಕೆಗಳಲ್ಲಿ ಬಂದಿದ್ದು, ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ಯಾವ ಉದ್ದೇಶಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ, ಮದಲೂರು ಕೆರೆಗೆ ಈ ಬಾರಿಯೂ ಹೆಮಾವತಿ ನೀರು ಹರಿಸುವಂತೆ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾನವಿ ಮಾಡಿದ್ದೇನೆ, ಮುಖ್ಯಮಂತ್ರಿಗಳು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೇಮಾವತಿ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಸ್ಪಂದಿಸಿದ್ದಾರೆ. ಆದರೂ ಸಚಿವರ ಹೇಳಿಕೆ ಆಶ್ಚರ್ಯಕರವಾಗಿದೆ, ಕುಡಿಯುವ ನೀರು ಹರಿಸದಿದ್ದರೆ ಹೋರಾಟಕ್ಕೂ ಮುಂದಾಗುವುದಾಗಿ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ತಿಳಿಸಿದ್ದಾರೆ.
Comments are closed.