ಹೋರಾಟದ ಮೂಲಕವೆ ನೀರು ಪಡೆಯಬೇಕಿದೆ: ರಂಗನಾಥ್

ನೀರಿನ ವಿಚಾರದಲ್ಲಿ ಕುಣಿಗಲ್‌ಗೆ ಅನ್ಯಾಯ

491

Get real time updates directly on you device, subscribe now.

ಕುಣಿಗಲ್‌: ತಾಲೂಕಿಗೆ 3.1 ಟಿಎಂಸಿ ಹೇಮೆ ನೀರು ಹರಿಯಬೇಕಿದೆ. ಆದರೆ 0.3 ಟಿಎಂಸಿ ಹರಿಸುತ್ತಿದ್ದಾರೆ. ಕಳೆದ 30 ವರ್ಷಗಳಿಂದ ತಾಲೂಕಿಗೆ ಅನ್ಯಾಯವಾಗುತ್ತಿದ್ದು ಹೋರಾಟದ ಮೂಲಕವೆ ನೀರು ಪಡೆಯಬೇಕಿದೆ ಎಂದು ಶಾಸಕ ಡಾ.ರಂಗನಾಥ ತಿಳಿಸಿದರು.
ಮಂಗಳವಾರ ತಾಲೂಕಿನ ಮೋದೂರು ಗ್ರಾಮದಲ್ಲಿ ಕಂದಾಯ ಇಲಾಖೆ ಹಮ್ಮಿಕೊಂಡಿದ್ದ ಪಿಂಚಣಿ ಹಾಗೂ ಕಂದಾಯ ಅದಾಲತ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಹೇಮಾವತಿ ಮೂಲ ಯೋಜನೆ ಪ್ರಕಾರ ವೈ.ಕೆ.ರಾಮಯ್ಯನವರ ಸತತ ಹೋರಾಟದ ಪರಿಣಾಮ ತುಮಕೂರಿಗೆ ಹೇಮಾವತಿ ಕಾಲುವೆ ನಿರ್ಮಾಣವಾಗಿ ತಾಲೂಕಿಗೆ 3.10 ಟಿಎಂಸಿ ನಿಗದಿಯಾಯಿತು. ಆದರೆ ನಂತರದ ದಿನಗಳಲ್ಲಿ ತಾಲೂಕಿಗೆ ಬರಬೇಕಾದ ನೀರು ಇತರೆಡೆಗೆ ಹರಿದು ಶೇ.10 ರಷ್ಟು ನೀರು ಬರುತ್ತಿಲ್ಲ, ಈ ನಿಟ್ಟಿನಲ್ಲಿ ತಾಲೂಕಿನ ಜನರು ಹೋರಾಟ ಮಾಡಿ ನೀರು ಪಡೆಯಬೇಕಿದೆ. ಬೆಂಗಳೂರಿಗೆ ಪಾದಯಾತ್ರೆ ಹೋರಾಟ ಹಮ್ಮಿಕೊಳ್ಳಲಿದ್ದು, ಎಲ್ಲರೂ ಸಹಕಾರ ನೀಡಿ ನಮ್ಮ ಹಕ್ಕನ್ನು ನಾವು ಪಡೆಯಬೇಕು ಎಂದರು.
ತಾವು ಶಾಸಕರಾದ ನಂತರ 300 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ರಸ್ತೆಗಳ ಡಾಂಬರೀಕರಣ ಮಾಡಿಸಲಾಗಿದ್ದು ಕೋವಿಡ್‌ ಸಮಯದಲ್ಲಿ 20 ಲಕ್ಷ ಕೆಜಿ ತರಕಾರಿ ಸಂಸದ ಡಿ.ಕೆ.ಸುರೇಶ್‌ ಮಾರ್ಗದರ್ಶನದಲ್ಲಿ ರೈತರಿಂದ ಖರೀದಿಸಿ ಜನತೆಗೆ ಉಚಿತವಾಗಿ ವಿತರಿಸಿದ್ದು, ಕೊವಿಡ್‌ ರೋಗದ ವಿರುದ್ಧ ದೈಹಿಕಾರೋಗ್ಯ ವೃದ್ಧಿಗೆ 20 ಲಕ್ಷ ವಿಟಮಿನ್‌ ಮಾತ್ರೆ ದೇಶದಲ್ಲೆ ಮೊದಲ ಬಾರಿಗೆ ಎಲ್ಲರಿಗೆ ನೀಡಲಾಯಿತು. ಎರಡೆ ಅಲೆಯ ಸಮಯದಲ್ಲಿ 75 ಸಾವಿರ ಫುಟ್‌ಕಿಟ್‌ ವಿತರಿಸಿ, ಖಾಸಗಿಯವರ ಸಹಯೋಗದಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನೇಟೆಡ್‌ ಬೆಡ್‌ ವ್ಯವಸ್ಥೆ ಮಾಡಿ ಜನರ ಸಮಸ್ಯೆಗೆ ಸ್ಪಂದಿಸಿದ್ದೇನೆ ಎಂದರು.
ಉಪವಿಭಾಗಾಧಿಕಾರಿ ಅಜಯ್‌ ಮಾತನಾಡಿ, ಕಂದಾಯ ಅದಾಲತ್‌ ಗ್ರಾಮಸ್ಥರ ಮನೆ ಬಾಗಿಲಿಗೆ ಕಂದಾಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯವರು ಬಂದು ಸರ್ಕಾರದ ಸೇವೆ ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮಸ್ಥರು ಸರ್ಕಾರದ ಯೋಜನೆಗಳ ಮಾಹಿತಿ ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತಹಶೀಲ್ದಾರ್‌ ಮಹಾಬಲೇಶ್ವರ್‌ ಮಾತನಾಡಿ, ಈ ಬಾರಿ ಕಂದಾಯ ಅದಾಲತ್‌ನಲ್ಲಿ ಆಧಾರ್‌ ತಿದ್ದುಪಡಿ ಕೇಂದ್ರಸ್ಥಾಪಿಸಿ ಗ್ರಾಮಸ್ಥರ ಆಧಾರ್‌ ನ್ಯೂನ್ಯತೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಾರ್ಯಕ್ರಮದ ಮುನ್ನದಿನ ಸೋಮವಾರ ರಾತ್ರಿ ಶಾಸಕ ಡಾ.ರಂಗನಾಥ್‌, ಗ್ರಾಮದ ತಿಮ್ಮಯ್ಯ ಎಂಬ ದಲಿತನ ಮನೆಯಲ್ಲಿ ವಾಸ್ತವ್ಯಮಾಡಿದರಲ್ಲದೆ ಅವರ ಮನೆಯಲ್ಲಿ ಅವರೊಂದಿಗೆ ಊಟ ಮಾಡಿ, ಕುಟುಂಬದ ಸಮಸ್ಯೆ ಆಲಿಸಿ, ರಾತ್ರಿ ನಿದ್ದೆ ಮಾಡಿ, ತಡರಾತ್ರಿವರೆಗೂ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು. ಬುಧವಾರ ಶಾಸಕರ ಹುಟ್ಟುಹಬ್ಬ ಇರುವ ಕಾರಣ ಅಭಿಮಾನಿಗಳು ಮುಖಂಡರು ಮಂಗಳವಾರವೆ ಮೊದೂರು ಗ್ರಾಮಕ್ಕೆ ಆಗಮಿಸಿ ಶುಭಕೋರಿದರು. ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದು ಡಿಕೆಎಸ್‌ ಟ್ರಸ್ಟ್ ವತಿಯಿಂದ ಗ್ರಾಮಸ್ಥರಿಗೆ ಕೊವಿಡ್‌ ಲಸಿಕೆ ವಿತರಣೆ ಕಾರ್ಯಕ್ರಮ ಆಯೋಜಿಸಿ, ಕೇಕ್‌ ಕತ್ತರಿಸಿ ಸಂಭ್ರಮಿಸಿದರು.
ಸಂತೇಮಾವತ್ತೂರು ಗ್ರಾಪಂ ಅಧ್ಯಕ್ಷ ಮಂಜುನಾಥ, ಸದಸ್ಯರಾದ ಬೋರೇಗೌಡ, ದೀಪಕ್‌, ಸುರೇಶ, ಜಿಪಂ ಮಾಜಿ ಸದಸ್ಯ ಮಾಗಡಯ್ಯ, ತಾಪಂ ಮಾಜಿ ಸದಸ್ಯ ಎಸ್‌.ಆರ್‌.ಚಿಕ್ಕಣ್ಣ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದು ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷ ಗಂಗಾಧರ್‌ ಈ ಭಾಗದ ರೈತರ ಜಮೀನು ಹೇಮಾವತಿ ನಾಲೆಗೆ ಸ್ವಾಧೀನಪಡಿಸಿಕೊಂಡು ದಶಕಗಳೆ ಕಳೆದರು ಪರಿಹಾರ ನೀಡಿಲ್ಲ ಪರಿಹಾರ ಕೊಡಿಸುವಂತೆ, ಬಗರ್ ಹುಕುಂ ಜಮೀನಿಗೆ ಹೋಗದಂತೆ ಅರಣ್ಯಾಧಿಕಾರಿಗಳು ತಡೆಯೊಡ್ಡುತ್ತಿದ್ದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.

Get real time updates directly on you device, subscribe now.

Comments are closed.

error: Content is protected !!