ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ನಿಧನ

351

Get real time updates directly on you device, subscribe now.

ತುಮಕೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ (68) ಮಂಗಳವಾರ ಮುಂಜಾನೆ ತೀವ್ರ ಹೃದಯಾಘಾತದಿಂದ ನಿಧನರಾದರು.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅನ್ನಪೂರ್ಣ ವೆಂಕಟನಂಜಪ್ಪ ಅವರು ಹೃದಯಾಘಾತಕ್ಕೆ ಒಳಗಾಗಿ ಬೆಳಗಿನ ಜಾವ 5.30 ರಲ್ಲಿ ಕೊನೆಯುಸಿರೆಳೆದಿದ್ದಾರೆ.
ಶ್ರೀಯುತರು ಪತಿ ಹೆಸರಾಂತ ವಕೀಲರಾದ ವೆಂಕಟನಂಜಪ್ಪ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ಅವರು ಹಲವು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ಗುರುತಿಸಿಕೊಂಡಿದ್ದರು, ಈ ಹಿಂದೆ ರೋಟರಿ, ಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
ಜತೆಗೆ ತುಮಕೂರಿನ ಭುವನೇಶ್ವರಿ ವಿವಿಧೋದ್ದೇಶ ಸಹಕಾರ ಸಂಘ ಸೇರಿದಂತೆ ಕೆಲವು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿಯೂ ಸಹ ಸೇವೆ ಸಲ್ಲಿಸಿದ್ದರು.
ಪ್ರಸ್ತುತ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜತೆಗೆ ವರದಕ್ಷಿಣೆ ವಿರೋಧಿ ವೇದಿಕೆಯ ಅಧ್ಯಕ್ಷರಾಗಿಯೂ ಸಹ ಸೇವೆ ಸಲ್ಲಿಸುತ್ತಿದ್ದರು.
ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಯುತರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರ ನಿಧನಕ್ಕೆ ನಗರದ ಸಾಹಿತಿಗಳು, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಹಿರಿಯ ಸಮಾಜ ಸೇವಕಿ, ಸಾಹಿತಿ, ಲೇಖಕಿ ಹಾಗೂ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದ ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಮಾಜಿ ಶಾಸಕ ಡಾ.ರಫಿಕ್‌ಅಹಮದ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಸೊಗಡು ಶಿವಣ್ಣ ಅವರು ಮೃತ ಅನ್ನಪೂರ್ಣ ವೆಂಕಟನಂಜಪ್ಪನವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು, ಇವರ ನಿಧನ ತುಂಬಾ ನೋವು ತಂದಿದೆ ಎಂದರು.
ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ಅವರು ಅನ್ನಪೂರ್ಣ ವೆಂಕಟನಂಜಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ನಂತರ ಮಾತನಾಡಿ, ಇವರ ನಿಧನ ತುಂಬಾ ಆಘಾತ ತಂದಿದೆ. ಸಹಕಾರಿ ರಂಗ ಉನ್ನತ ಪ್ರಶಸ್ತಿಗೂ ಸಹ ಇವರು ಭಾಜನರಾಗಿದ್ದಾರೆ. ಮನೆಯ ಒಬ್ಬ ಸಹೋದರಿಯನ್ನು ಕಳೆದುಕೊಂಡಂತಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.
ಕಳೆದ 10-12 ದಿನಗಳ ಹಿಂದೆಯಷ್ಟೆ ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಯಾವುದೇ ಸಭೆಗೆ ಗೈರಾಗದೆ ಪಾಲ್ಗೊಂಡು ಸಲಹೆಗಳನ್ನು ಕೊಡುತ್ತಿದ್ದರು ಎಂದು ಹೇಳಿದರು.
ಮೃತರ ನಿವಾಸಕ್ಕೆ ಪಾಲಿಕೆ ಸದಸ್ಯೆ ಗಿರಿಜಾ ದನಿಯಕುಮಾರ್‌, ಎಂ.ಬಿ. ನಂದೀಶ್‌, ಟಿ.ಪಿ.ಮಂಜುನಾಥ್‌, ಸಿದ್ದಲಿಂಗಪ್ಪ, ಗಂಗಣ್ಣ, ಕೊಟ್ಟ ಶಂಕರ್‌ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾಹಿತಿಗಳು ತೆರಳಿ ಪಾರ್ಥೀವ ಶರೀರದ ಅಂತಿನ ದರ್ಶನ ಪಡೆದು ತೀವ್ರ ಸಂತಾಪ ವ್ಯಕ್ತಪಡಿಸಿದರು. ಮೃತರ ಅಂತ್ಯಕ್ರಿಯೆಯು ನಗರದ ಗಾರ್ಡನ್‌ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ನೆರವೇರಿತು.

Get real time updates directly on you device, subscribe now.

Comments are closed.

error: Content is protected !!