ತುಮಕೂರು: ನಗರದ ಸಿದ್ಧಗಂಗಾ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ರಾಜ್ಯ ಯುವ ಘಟಕದ ವತಿಯಿಂದ ಶ್ರೀಸಿದ್ದಗಂಗಾ ಅರಣ್ಯ ದಟ್ಟ ಕಾಡು ನಿರ್ಮಾಣ 5,000 ಗಿಡ ನೆಡುವ ಕಾರ್ಯಕ್ರಮ ಮತ್ತು ರಕ್ತದಾನ ಶಿಬಿರಕ್ಕೆ ಬುಧವಾರ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಚಾಲನೆ ನೀಡಿದರು.
ಈ ಸಂದರ್ಭಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ, ಇಂದು ಸಸಿ ಬೆಳೆಸಿ ನಾಡು ಉಳಿಸುವ ಅನಿವಾರ್ಯತೆ ಇದೆ, ಯಾರು ಪರಿಸರ ಸಂರಕ್ಷಿಸುತ್ತಾರೋ ಪರಿಸರ ಅವರನ್ನು ರಕ್ಷಿಸುತ್ತದೆ ಎಂದರು.
ಇಡೀ ಜಗತ್ತಿನಲ್ಲಿ ಎಲ್ಲಾ ಕಡೆ ಮಾಲಿನ್ಯ ಹೆಚ್ಚಾಗಿದೆ. ಪರಿಸರ ಮಾಲಿನ್ಯದಿಂದ ಎಂತಹ ಅನಾಹುತಗಳಾಗುತ್ತಿವೆ ಎಂದರೆ ನಾವು ಪ್ರತಿನಿತ್ಯ ಸೇವಿಸುವ ಆಹಾರ, ಗಾಳಿ, ಕುಡಿಯುವ ನೀರು, ವಾಹನಗಳ ಮಾಲಿನ್ಯ, ಕಾರ್ಖಾನೆಗಳ ಮಾಲಿನ್ಯಗಳಿಂದ ಇಡೀ ಮನುಕುಲದ ಅಸ್ಥಿತ್ವ ನಾಶವಾಗುವಂತಹ ಪರಿಸ್ಥಿತಿ ಕಾಣುತ್ತಿದ್ದೇವೆ. ಇದೆಲ್ಲದಕ್ಕೂ ಪರಿಸರ ನಾಶವಾಗುತ್ತಿರುವುದೇ ಕಾರಣ ಎಂದರು.
ಹವಾಮಾನ ವೈಪರೀತ್ಯದಿಂದ ಜಾಗತೀಕ ಮಟ್ಟದಲ್ಲಿ ತಾಪಮಾನ ಹೆಚ್ಚುತ್ತಿದ್ದು, ಈಗಾಗಲೇ ದೆಹಲಿ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಪ್ರವಾಹ ಬಂದಿದ್ದು ನೋಡಿದ್ದೇವೆ. ನೈಸರ್ಗಿಕ ಸಂಪತ್ತು ಪರಿಸರ ಸಂರಕ್ಷಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಸಿದ್ಧಗಂಗಾ ಮಠದ ಆವರಣದಲ್ಲಿ ಶ್ರೀಗಳು ಸಾಕಷ್ಟು ಅರಣ್ಯ ಸಂಪತ್ತನ್ನು ಬೆಳೆಸಿದ್ದಾರೆ. ಇನ್ನೂ ಹೆಚ್ಚಿನ ಗಿಡಮರ ಬೆಳೆಸುವ ಉದ್ಧೇಶದಿಂದ ಸಿದ್ಧಗಂಗಾ ಕ್ಷೇತ್ರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ವತಿಯಿಂದ 5000 ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಸಿ ನೆಟ್ಟಿ ನಿರ್ವಹಣೆ ಮಾಡುವ ಜವಾಬ್ದಾರಿಯನ್ನೂ ಈ ಯುವಘಟಕ ವಹಿಸಿಕೊಂಡಿದೆ ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕ ಮತ್ತು ಲಯನ್ಸ್ ಕ್ಲಬ್ ಸಹಯೋಗದಲ್ಲಿ ಸಿದ್ಧಗಂಗಾ ಮಠದಲ್ಲಿ ರಕ್ತದಾನ ಶಿಬಿರವೂ ನಡೆದಿದ್ದು, ರಕ್ತದಾನದಿಂದ ಅನೇಕ ಮಂದಿ ಜೀವ ಉಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ನೂತನ ಸಿಎಂಗೆ ಅಭಿನಂದನೆ: ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶುಭಾಶಯ ತಿಳಿಸುತ್ತಾ ಈ ನಾಡಿನ ನೆಲ, ಜಲ, ಜನರ ರಕ್ಷಣೆ ಮಾಡಬೇಕು, ಉತ್ತಮ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿ, ಜನರ ಪರ ಕೈಗೊಳ್ಳುವ ತೀರ್ಮಾನಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.
ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಇಂದು ಮಠದ ಜಮೀನಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಮನೋಹರ್ ನೇತೃತ್ವದಲ್ಲಿ ಗಿಡಗಳನ್ನು ನೆಟ್ಟು ಅದನ್ನು ಬೆಳೆಸುವಂತಹ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಪರಿಸರ ಉಳಿದರೆ ನಾವು ಉಳಿಯುತ್ತೇವೆ, ಉತ್ತಮ ವಾತಾವರಣವಿದ್ದರೆ ಮಾತ್ರ ನಾವು ಬದುಕಲು ಸಾಧ್ಯ, ಮನುಷ್ಯನ ಬದುಕಿಗೆ ಮರಗಿಡಗಳು, ಪ್ರಕೃತಿ ಬೇಕೇ ಹೊರತು, ಪ್ರಕೃತಿಗೆ ಮನುಷ್ಯ ಬೇಕಾಗಿಲ್ಲ, ಇಂದು ಮನುಷ್ಯ ಚೆನ್ನಾಗಿ ಆರೋಗ್ಯಪೂರ್ಣವಾಗಿ ಬದುಕಬೇಕೆಂದರೆ ಉತ್ತಮ ಜೀವನ ನಡೆಸಬೇಕೆಂದರೆ ಇಂತಹ ವಾತಾವರಣ ಅತ್ಯಂತ ಅವಶ್ಯಕ. ಅದಕ್ಕಾಗಿ ಇಲ್ಲಿ ಸಿದ್ಧಗಂಗಾ ಅರಣ್ಯ ಎಂಬ ಹೆಸರನ್ನಿಟ್ಟು ವಿವಿಧ ಬಗೆಯ ಗಿಡಮರಗಳನ್ನು ನೆಟ್ಟು ಅದನ್ನು ಕಾಪಾಡಿ ಬೆಳೆಸುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನಮ್ಮ ಸಮಾಜದ ಸಂಪತ್ತು ಯುವಕರು, ನಮ್ಮ ದೇಶದ ಸಂಪತ್ತು ಯುವಶಕ್ತಿ, ವೀರಶೈವ ಸಮಾಜದ ಯುವ ಸಂಪತ್ತು ಇಂದು ರಚನಾತ್ಮಕವಾದ, ಸಾಮಾಜಿಕವಾದಂತಹ, ಅತಿ ಉಪಯುಕ್ತ, ಅತಿ ಅವಶ್ಯಕವಾಗಿರುವಂತಹ ಸಸಿ ನೆಡುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ, ಸಾಮಾಜಿಕವಾಗಿ ಈ ಕಾರ್ಯ ಮಾಡುವುದರ ಜೊತೆಗೆ ಧಾರ್ಮಿಕವಾಗಿಯೂ ನಮ್ಮ ಧರ್ಮದ ಆಚರಣೆಗಳನ್ನು ಕಾಪಾಡಿಕೊಳ್ಳುವ ಮೂಲಕ ಧರ್ಮದ ಅಂತಃಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು, ಬಾಹ್ಯವಾಗಿ ಇಂತಹ ಕಾರ್ಯಗಳನ್ನು ಮಾಡುವ ಮುಖೇನ ಸಮಾಜದ ಸೇವಾ ಕಾರ್ಯಗಳನ್ನು ವಿಸ್ತರಿಸಬೇಕು ಎಂದು ಸಲಹೆ ನೀಡಿದರು.
ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೆರೆ ಮಾತನಾಡಿ, ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮಿಗಳ ಜನ್ಮದಿನದ ಪ್ರಯುಕ್ತ ಸಿದ್ಧಗಂಗಾ ಕ್ಷೇತ್ರದಲ್ಲಿ ಸುಮಾರು 5,000 ಗಿಡಗಳನ್ನು ನೆಡುವ ಸಿದ್ಧಗಂಗಾ ಅರಣ್ಯ ಎಂಬ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ. ಈ ಕಾರ್ಯಕ್ಕೆ ವೀರಶೈವ ಸಮಾಜದ ಎಲ್ಲಾ ಘಟಕಗಳು ಸಹಕರಿಸುತ್ತಿವೆ. ಮುಂದಿನ ದಿನಗಳಲ್ಲಿ ರಾಜ್ಯ ಘಟಕದಿಂದ ನಾವೇ ನಿರ್ವಹಣೆಯ ಜವಾಬ್ದಾರಿ ಮಾಡುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಯುವಘಟಕದ ರಾಜ್ಯಾಧ್ಯಕ್ಷ ಮನೋಹರ್ ಅಬ್ಬಿಗೆರೆ, ಜಿಲ್ಲಾಧ್ಯಕ್ಷ ಮೋಹನ್‌ಕುಮಾರ್ ಪಟೇಲ್, ಬೆಂಗಳೂರು ಮಹಾ ನಗರಪಾಲಿಕೆ ಮಾಜಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್, ತುಮಕೂರು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಬಿ.ಕುಮಾರ್, ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ಮಧುರಾ ಅಶೋಕ್, ಸಾಗರನಹಳ್ಳಿ ನಟರಾಜ್, ಅಖಿಲ ಭಾರತ ವೀರಶೈವ ಮಹಾಸಭಾ ಯುವಘಟಕದ ರಾಷ್ಟ್ರೀಯ ಅಧ್ಯಕ್ಷ ಮಹಂತೇಶ್ ಪಾಟೀಲ್, ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಪದಾಧಿಕಾರಿಗಳು ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು ಹಾಜರಿದ್ದರು.
Comments are closed.