ಮದಲೂರು ಕೆರೆ ಸಮೀಪದ 11 ಕೆರೆಗಳಿಗೆ ನೀರು ಹರಿಸಿ

438

Get real time updates directly on you device, subscribe now.

ಶಿರಾ: ಹೇಮಾವತಿ ತುಮಕೂರು ನಾಲೆಯಿಂದ ಶಿರಾ ತಾಲ್ಲೂಕಿನ ಮದಲೂರು ಹಾಗೂ ಮಾರ್ಗ ಮಧ್ಯದ 11 ಕೆರೆಗಳಿಗೆ ನೀರು ಹರಿಸಿ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಿ.ಆರ್‌.ಮಂಜುನಾಥ್‌ ಒತ್ತಾಯಿಸಿದ್ದಾರೆ.
ನಗರದ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸರಕಾರದ ಆದೇಶದಂತೆ ಮದಲೂರು ಕೆರೆಗೆ ನೀರು ಹರಿಸಲು ಅಧಿಕಾರಿಗಳಿಗೆ ಸೂಚಿಸುವುದನ್ನು ಬಿಟ್ಟು, ಅನಗತ್ಯವಾಗಿ ಜನರಲ್ಲಿ ಗೊಂದಲ ಮೂಡಿಸುವ ಉದ್ದೇಶದಿಂದ ತುಮಕೂರು ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಮದಲೂರು ಕೆರೆಗೆ ನೀರು ಹರಿಸಿದರೆ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳಿದ್ದಾರೆ. ಈ ಹಿಂದೆಯೇ ಮದಲೂರು ಕೆರೆಗೆ ನೀರು ಹರಿಸುವ ಬಗ್ಗೆ 2009 ರಲ್ಲಿನ ಸರಕಾರಿ ಆದೇಶ ಸಚಿವರ ಗಮನಕ್ಕೆ ಬಂದಿಲ್ಲವೇ? ಸರಕಾರಿ ಆದೇಶದ ಪ್ರತಿಯನ್ನು ಈ ಮೂಲಕ ನಾವು ಕಳುಹಿಸುತ್ತೇವೆ ಸರಿಯಾಗಿ ನೋಡಿ ಓದಿ ಅರ್ಥ ಮಾಡಿಕೊಳ್ಳಲಿ ಎಂದರು.
ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಟರಾಜ್‌ ಬರಗೂರು ಅವರು ಮಾತನಾಡಿ ಶಿರಾ ತಾಲ್ಲೂಕಿನ ನೀರಿನ ಭವಣೆಯನ್ನು ಅರಿತ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರರವರ ಹಲವು ದಶಕದ ಹೋರಾಟದ ಫಲವಾಗಿ ಈ ಮಹತ್ವಕಾಂಕ್ಷೆಯ ಯೋಜನೆಯು ಅನುಷ್ಠಾನಗೊಂಡಿರುತ್ತದೆ. ಆ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಇಲ್ಲ ಸಲ್ಲದ ಅಡೆತಡೆಗಳನ್ನು ತಂದಿದ್ದರು ಎಂಬ ಬಗ್ಗೆ ತಾಲ್ಲೂಕಿನ ಜನರಿಗೆ ತಿಳಿದಿದೆ. ಕಾನೂನಿನ ಹೋರಾಟದಲ್ಲಿ ಉಚ್ಛ ನ್ಯಾಯಾಲಯವು ಈ ಯೋಜನೆಯ ಪರವಾಗಿ ತೀರ್ಪು ನೀಡಿದ್ದರಿಂದ ಯೋಜನೆಯು ಅನುಷ್ಠಾನಗೊಂಡು ನೀರು ಹರಿಸುವಂತಾಯಿತು. ಈಗ ಕೆರೆಗೆ ನೀರು ಹರಿಸದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ. ಆದರೆ ಸಚಿವ ಮಾಧುಸ್ವಾಮಿಯವರು ಅನಗತ್ಯವಾಗಿ ಹೇಳಿಕೆ ನೀಡುತ್ತಿರುವುದು ಔಚಿತ್ಯವೇನು? ಎಂದು ಪ್ರಶ್ನಿಸಿದರು.
ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಬ್ದುಲ್ಲಾ ಖಾನ್‌ ಮಾತನಾಡಿ ಸಚಿವ ಜೆ.ಸಿ.ಮಾಧುಸ್ವಾಮಿಯವರು ಜಿಪಂ ಸಭೆಯಲ್ಲಿ ಹೇಳಿಕೆ ನೀಡುವಾಗ ಸಭೆಯಲ್ಲೇ ಹಾಜರಿದ್ದ ಶಿರಾ ಕ್ಷೇತ್ರದ ಶಾಸಕ ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಏನು ಮಾಡುತ್ತಿದ್ದರು? ಎಂದು ಖಾರವಾಗಿ ಪ್ರಶ್ನಿಸಿದ ಅವರು ಮತವನ್ನು ನೀಡಿ ಗೆಲ್ಲಿಸಿದ ತಾಲ್ಲೂಕಿನ ಜನರಿಗೆ ಏನು ಉತ್ತರ ನೀಡುತ್ತೀರಿ? ನಿಮಗೆ ತಾಲ್ಲೂಕಿನ ಬಗ್ಗೆ ಯಾವುದೇ ನೈತಿಕತೆ ಇಲ್ಲವೆ? ಈಗ ನಾವೇ ಜೈಲಿಗೆ ಹೋಗುತ್ತೇವೆ ಎಂದು ಅನಗತ್ಯ ಹೇಳಿಕೆಗಳನ್ನು ನೀಡುತ್ತಾ ಶಿರಾ ಜನತೆಯ ಕಣ್ಣಿಗೆ ಮಣ್ಣೆರೆಚುವುದು ಬೇಡ, ನೀವುಗಳು ಯಾರು ಜೈಲಿಗೆ ಹೋಗಬೇಕಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ನೀವುಗಳು ಕೊಟ್ಟ ಆಶ್ವಾಸನೆಗಳು ಜನರ ಮನದಲ್ಲಿದೆ. ಸರಕಾರಿ ಆದೇಶದ ಪ್ರಕಾರ ಮದಲೂರು ಕೆರೆಗೆ ನೀರು ಹರಿಸಿ ತಾಲ್ಲೂಕಿನ ಜನರ ಋಣ ತೀರಿಸಿ ಸಾಕು ಎಂದರು.

ನೀರಿಗಾಗಿ ಹೋರಾಟ: ಸರಕಾರಿ ಆದೇಶದಂತೆ ಮದಲೂರು ಕೆರೆಗೆ ನೀರು ಹರಿಸಬೇಕು ಇಲ್ಲವಾದಲ್ಲಿ ಜನಪರ ಹೋರಾಟವನ್ನು ನಡೆಸಿಕೊಂಡು ಬರುತ್ತಿರುವ ಕಾಂಗ್ರೇಸ್‌ ಪಕ್ಷವು ಮುಂದಿನ ದಿನಗಳಲ್ಲಿ ತಾಲ್ಲೂಕಿನ ಜನರೊಂದಿಗೆ ಬೀದಿಗಳಿದು ಉಗ್ರ ಹೋರಾಟವನ್ನು ನಡೆಸುತ್ತದೆ ಎಂದು ಕಾಂಗ್ರೆಸ್‌ ಮುಖಂಡರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಜಿ.ಎಸ್‌.ರವಿ, ಕಾಂಗ್ರೆಸ್‌ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಎಚ್‌.ಗುರುಮೂರ್ತಿ, ಶಿರಾ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ರಾಘವೇಂದ್ರ, ಕೋಟೆ ಲೋಕೇಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ಸತ್ಯನಾರಾಯಣ, ನೂರುದ್ದೀನ್‌, ಅಜಯ್‌ಕುಮಾರ್‌, ಧರಣಿಕುಮಾರ್‌ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!