ಚೇತನ್
ಚಿಕ್ಕನಾಯಕನಹಳ್ಳಿ: ಪಟ್ಟಣದ ಜೋಗಿಹಳ್ಳಿಯಲ್ಲಿ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿನ ಕೊಠಡಿಗಳು ಬೀಳುವ ಸ್ಥಿತಿ ತಲುಪಿದ್ದು, ಶಾಲೆಗಳು ಪುನರಾರಂಭಕ್ಕೂ ಮುನ್ನ ಕೊಠಡಿಗಳನ್ನು ನವೀಕರಣಗೊಳಿಸಬೇಕು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಶಾಲೆಯ ಮೂಲ ಸೌಕರ್ಯ ಹೆಚ್ಚಿಸಬೇಕು ಎಂದು ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.
ಕೋವಿಡ್ ಲಾಕ್ ಡೌನ್ ನಿಂದ ಬಹುತೇಕ ಪೋಷಕರ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದ್ದು, ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಸೇರಿಸುವ ಪ್ರಕ್ರಿಯೆ ತಾಲೂಕಿನಲ್ಲಿ ಸಾಮಾನ್ಯವಾಗಿದೆ, ಆದರೆ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ, ಸರ್ಕಾರಿ ಶಾಲೆಗಳಲ್ಲಿ ಪ್ರಮುಖವಾಗಿ ಶಾಲಾ ಕೊಠಡಿಗಳು ಶಿಥಿಲಗೊಂಡಿದ್ದು ವಿದ್ಯಾರ್ಥಿಗಳು ಭಯದಿಂದ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಹಳೆ ಕಟ್ಟಡಗಳನ್ನು ನೆಲಸಮ ಮಾಡಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಶಿಕ್ಷಣ ಇಲಾಖೆ ಮುಂದಾಗಬೇಕಿದೆ, ಇಲ್ಲವಾದರೆ ಅನಾಹುತ ಕಟ್ಟಿಟ್ಟ ಬುತ್ತಿ.
ಶಿಥಿಲವಾದ ಕಟ್ಟಡ: ಪಟ್ಟಣದ ಜೋಗಿಹಳ್ಳಿ ಶಾಲೆ 1952ರಲ್ಲಿ ಪ್ರಾರಂಭವಾಗಿದ್ದು, ಸುಮಾರು 70 ವರ್ಷಗಳ ಹಳೆಯದಾದ ಕೊಠಡಿಗಳಲ್ಲಿ ಮಕ್ಕಳು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ, 1 ರಿಂದ 7 ತರಗತಿಯವರೆಗೆ ಸುಮಾರು 82 ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, 2 ಕೊಠಡಿ ಸಂಪೂರ್ಣ ಶಿಥಿಲಗೊಂಡಿದ್ದು ಇನ್ನೂ ಕೆಲ ಕೊಠಡಿಗಳ ಸೀಲಿಂಗ್ ಬೀಳುವ ಸ್ಥಿತಿಯಲ್ಲಿವೆ, ಸಿಬ್ಬಂದಿಯ ಕಚೇರಿ ಹಾಗೂ ಹೊಸ ಕಟ್ಟಡ ಮಾತ್ರ ಯೋಗ್ಯವಾಗಿದ್ದು ಈ ಶಾಲೆಗೆ ಕಾಯಕಲ್ಪ ಅಗತ್ಯವಾಗಿದೆ.
ಶಾಲೆಗೆ ಈ ಬಾರಿ ಹೆಚ್ಚಿನ ದಾಖಲಾತಿಯಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮನಸ್ಸು ಮಾಡಿದ್ದಾರೆ. ಸರ್ಕಾರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಜೊತೆಗೆ ಶಾಲೆಗೆ ಬೇಕಾಗಿರುವ ಮೂಲಭೂತ ಸೌಕರ್ಯ ನೀಡಬೇಕು ಎಂದು ಜೋಗಿಹಳ್ಳಿ ಮುಖಮಡ ಕಳಸೇಗೌಡ ಒತ್ತಾಯಿಸಿದ್ದಾರೆ.
ಶಿಥಿಲಗೊಂಡ ಕೊಠಡಿಗಳನ್ನು ನೆಲಸಮ ಮಾಡಿಸಲು ಶಾಲೆಯ ಮುಖ್ಯೋಪಾಧ್ಯಾಯರಿಗೆ ಪತ್ರ ನೀಡುವಂತೆ ತಿಳಿಸಿದ್ದೇನೆ, ನಾನೇ ಖುದ್ದಾಗಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ, ಸದ್ಯದ ಪರಿಸ್ಥಿತಿಯಲ್ಲಿ ಈ ಶಾಲೆಗೆ ಕೊಠಡಿಯ ಸಮಸ್ಯೆ ಇಲ್ಲ ಎಂಬ ಮಾಹಿತಿ ಇದೆ ಎಂದು ಬಿಇಓ ಕಾತ್ಯಾಯಿನಿ ತಿಳಿಸಿದ್ದಾರೆ.
Comments are closed.