ಕುಣಿಗಲ್: ಬೇರೆ ಪಿಡಿಒಗಳು ಕರ್ತವ್ಯ ಸ್ವೀಕರಿಸುವ ತನಕ ಹಾಲಿ ಕೆಲಸ ಮಾಡುವ ಯಾವುದೇ ಪಿಡಿಒಗಳನ್ನು ವರ್ಗಾವಣೆ ಮಾಡದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಯುವ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಜಗದೀಶ್ ನೇತೃತ್ವದಲ್ಲಿ ತಾಲೂಕು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.
ಗುರುವಾರ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಜಮಾವಣೆಗೊಂಡ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಹಾಗೂ ಬಿಜೆಪಿ ಧೋರಣೆ ಖಂಡಿಸಿ ಘೋಷಣೆ ಕೂಗಿದರು. ಮುಖಂಡ ಜಗದೀಶ್ ಮಾತನಾಡಿ, ತಾಲೂಕಿನ 36 ಗ್ರಾಮ ಪಂಚಾಯಿತಿಗಳಲ್ಲಿ ಕೆಲವೇ ಮಂದಿ ಪಿಡಿಒಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಶಾಸಕರು ಮತ್ತು ಬಿಜೆಪಿ ಮುಖಂಡರು ಪಿಡಿಓಗಳ ಮೇಲೆ ಒತ್ತಡ ಹಾಕಿ ಇವರಿಗೆ ಮಾನಸಿಕ ಹಿಂಸೆ ನೀಡಿ ಇವರನ್ನು ವರ್ಗ ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ, ಈಗಾಗಲೇ ಒತ್ತಡಕ್ಕೆ ಮಣಿದು ಕೆಲ ಪಿಡಿಒಗಳು ವರ್ಗಾವಣೆ ಆಗುತ್ತಿದ್ದಾರೆ, ಅವರ ಜಾಗಕ್ಕೆ ಬೇರೆಯವರು ಬರಲು ನಿರಾಕರಿಸುತ್ತಿದ್ದಾರೆ, ಇದಕ್ಕೆ ಕಾರಣ ಶಾಸಕರು ಹಾಗೂ ಬಿಜೆಪಿ ಮುಖಂಡರ ಒತ್ತಡಗಳ ನಡುವೆ ಕೆಲಸ ಮಾಡಲಾಗುತ್ತಿಲ್ಲ ಎಂಬುದು, ಶಾಸಕರ ಅಸಮರ್ಪಕ ಕಾರ್ಯವೈಖರಿ, ಅವರ ಟ್ರಸ್ಟ್ ಖಾಸಗಿ ಕಾರ್ಯಕ್ರಮಕ್ಕೆ ಪಿಡಿಒ ಬಿಲ್ ನೀಡಬೇಕು, ಇಂತಹ ಒತ್ತಡ ನೀಡುತ್ತಾರೆ ಎಂದು ದೂರಿದರು.
ಮೂರು ವರ್ಷದಿಂದ ಅಭಿವೃದ್ಧಿ ಪರ ಕೆಲಸ ಮಾಡದೆ ಈಗ ಕಸಬಾ ಹೋಬಳಿ ಪ.ಜಾತಿ ಅಭ್ಯರ್ಥಿ ಗೆಲ್ಲಿಸಲು ದಲಿತರ ಮನೆಯಲ್ಲಿ ಮಲಗುವ ನಾಟಕವಾಡಿದ್ದಾರೆ. ಇವರಿಗೆ ನಿಜವಾಗಿ ದಲಿತರ ಮೇಲೆ ಪ್ರೀತಿ ಈಗ ಬಂದಿದೆ, ಮೂರು ವರ್ಷದಿಂದ ದಲಿತ ಫಲಾನುಭವಿಗಳ ಆಯ್ಕೆ ಪಟ್ಟಿ ಮಾಡದೆ ದಲಿತ ವಿರೋಧಿ ಧೋರಣೆ ಹೊಂದಿದ್ದಾರೆ. ತಾಲೂಕಿನ ಅಧಿಕಾರಿಗಳು ಶಾಸಕರ ಗುಲಾಮರಂತೆ ಕೆಲಸ ಮಾಡುತ್ತಿರುವುದು ಖೇದಕರ ಎಂದರು.
ಗ್ರಾಪಂ ಸದಸ್ಯ ಪ್ರಕಾಶ್ ಮಾತನಾಡಿ, ಪಿಡಿಒ ವರ್ಗಾವಣೆ ಸಹಜ ಪ್ರಕ್ರಿಯೆ, ಆದರೆ ಬದಲಿ ಪಿಡಿಒ ಬರದೆ ಎಲ್ಲರೂ ವರ್ಗಾವಣೆಯಾದರೆ ಗ್ರಾಪಂ ಕೆಲಸ ನಡೆಯದೆ ತೊಂದರೆ ಆಗುತ್ತದೆ. ಈ ನಿಟ್ಟಿನಲ್ಲಿ ಸಮಸ್ಯೆ ಏನೆಂಬುದು ಪತ್ತೆ ಹಚ್ಚಿ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದರು.
ಮುಖಂಡ ಶೇಷಣ್ಣ, ತಾಪಂ ಮಾಜಿ ಅಧ್ಯಕ್ಷ ಹರೀಶನಾಯಕ ಮಾತನಾಡಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಹರೀಶ್, ಪ್ರಮುಖರಾದ ವರದರಾಜು, ವೈ.ಎಚ್.ರಂಗಸ್ವಾಮಿ, ದೀಪಕ್, ರಂಗಸ್ವಾಮಿ ಇತರರು ಇದ್ದರು. ತಾಪಂ ಇಒ ಜೋಸೆಫ್ ಅವರಿಗೆ ಮನವಿ ಸಲ್ಲಿಸಿದರು.
ಪಿಡಿಒಗಳನ್ನು ವರ್ಗಾವಣೆ ಮಾಡದಂತೆ ಜೆಡಿಎಸ್ ಪ್ರತಿಭಟನೆ
Get real time updates directly on you device, subscribe now.
Comments are closed.