ಕಟ್ಟಡ ಕಾರ್ಮಿಕರಿಗೆ ಆಹಾರ ಧಾನ್ಯ ಕಿಟ್‌ ವಿತರಣೆ

206

Get real time updates directly on you device, subscribe now.

ಮಧುಗಿರಿ: ಸರಕಾರ ನೋವಿನಲ್ಲಿರುವ ಕಟ್ಟಡ ಕಾರ್ಮಿಕರು ಸಶಕ್ತರನ್ನಾಗಿಸಲು ಆಹಾರ ಧಾನ್ಯ ಮತ್ತು ಸುರಕ್ಷತಾ ಕಿಟ್‌ಗಳನ್ನು ನೀಡಿದೆ ಎಂದು ನಾಲ್ಕನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ತಾರಕೇಶ್ವರ ಗೌಡ ಪಾಟೀಲ್‌ ತಿಳಿಸಿದರು.
ಗುರುವಾರ ಪಟ್ಟಣದ ತುಮಕೂರು ರಸ್ತೆಯಲ್ಲಿರುವ ತಾಲ್ಲೂಕು ನ್ಯಾಯಾಲಯ ಸಂಕಿರ್ಣದ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಕಾರ್ಮಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಕೋವಿಡ್‌-19 ಲಾಕ್‌ಡೌನ್‌ ಪ್ರಯುಕ್ತ ಸಂಕಷ್ಟಕ್ಕೆ ಈಡಾದ ಕಟ್ಟಡ ನಿರ್ಮಾಣ ಅಸಂಘಟಿತ ವಲಯ ಮತ್ತು ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯ ಮತ್ತು ಸುರಕ್ಷತಾ ಕಿಟ್‌ಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೋವಿಡ್‌ ಕಾರಣದಿಂದಾಗಿ ಸಮಾಜದಲ್ಲಿ ಆರ್ಥಿಕ ಚಟುವಟಿಕೆಗಳು ಕಡಿಮೆಯಾಗಿದೆ, ಕಟ್ಟಡ ಕಾರ್ಮಿಕರ ಶ್ರಮ ನಿರಂತರವಾಗಿದ್ದು ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲಸಗಳಿಲ್ಲದ ಕಾರಣ ಸರ್ಕಾರ ಸಹಾಯಕ್ಕೆ ಬಂದಿದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣರೆಡ್ಡಿ ಮಾತನಾಡಿ, ದೇಶ ಸಂವಿಧಾನದ ಚೌಕಟ್ಟಿನಲ್ಲಿ ನಡೆಯುತ್ತಿದೆ, ಅದಕ್ಕೆ ಅಪಚಾರ ಉಂಟಾದಲ್ಲಿ ಸರ್ಕಾರ ನಡೆ ಹಿನ್ನಡೆಯಾದಾಗ ನ್ಯಾಯಾಲಯಗಳು ಮಧ್ಯ ಪ್ರವೇಶಿಸುತ್ತದೆ. ಈ ನಿಟ್ಟಿನಲ್ಲಿ ಸುಪ್ರಿಂಕೋರ್ಟ್‌ ಸೊಮೋಟೋ ಪ್ರಕರಣ ದಾಖಲಿಸಿಕೊಂಡು ಪ್ರತಿಯೊಬ್ಬ ಕಾರ್ಮಿಕರಿಗೂ ಸಹಾಯಹಸ್ತ ಸೂಚಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಮೂಲಕ ಆಹಾರದ ಕಿಟ್‌ ವಿತರಿಸಲಾಗುತ್ತಿದೆ ಎಂದರು.
ಪ್ರಧಾನ ಸಿವಿಲ್ ಜೆಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಎಚ್‌.ಎ.ಶಿಲ್ಪಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಟ್ಟಡ ಕಾರ್ಮಿಕರು ಶ್ರಮಿಕರಾಗಿದ್ದು, ಅವರ ಮಕ್ಕಳನ್ನು ಉತ್ತಮ ವಿದ್ಯಾಭ್ಯಾಸ ಕೊಡಿಸುವುದರ ಜೊತೆಗೆ ಸರ್ಕಾರದ ಸವಲತ್ತು ಪಡೆಯಬೇಕು. ಮೊದಲು ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಿ, ನಂತರ ಎಲ್ಲಾ ರೀತಿಯ ಸೌಲಭ್ಯ ಪಡೆಯುವಂತೆ ಕರೆ ನೀಡಿದರು.
ನ್ಯಾಯಾಧೀಶರಾದ ಸಾಗರ್ ಗುರುಗೌಡ ಪಾಟೀಲ, ಹವಳದ ಸೌಮ್ಯಶ್ರೀ, ಎಂ.ಕಾವ್ಯಶ್ರೀ, ವಕೀಲರ ಸಂಘದ ಕಾರ್ಯದರ್ಶಿ ದಯಾನಂದ್‌ ಸಾಗರ್‌, ಕಾರ್ಮಿಕ ಇಲಾಖೆ ನಿರೀಕ್ಷಕ ಎಂ.ಎಲ್‌.ಶ್ರೀಕಾಂತ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!