ಜಾತಿ ಇಲ್ಲದೆ ರಾಜಕೀಯ ಮಾಡಲು ಸಾಧ್ಯವಿಲ್ಲ: ಬಿ.ಕೆ.ಮಂಜುನಾಥ್

ಈಶ್ವರಪ್ಪಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡಲಿ

372

Get real time updates directly on you device, subscribe now.

ತುಮಕೂರು: ರಾಜ್ಯ ರಾಜಕಾರಣ ಕೇಂದ್ರಿತವಾಗಿರುವುದು ಜಾತಿಯಲ್ಲಿಯೇ, ಜಾತಿ ಇಲ್ಲದೇ ರಾಜಕೀಯ ಮಾಡಲು ಸಾಧ್ಯವಿಲ್ಲ ಹಾಗಾಗಿ ಹಿಂದುಳಿದ ವರ್ಗಗಳ ಪರ ಧ್ವನಿ ಎತ್ತದೆ ಅನ್ಯಮಾರ್ಗವಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ನಾರು ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್‌ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ನಾಯಕರಾಗಿರುವ ಕೆ.ಎಸ್‌.ಈಶ್ವರಪ್ಪ ಅವರು 40 ವರ್ಷ ಯಡಿಯೂರಪ್ಪ ಅವರೊಂದಿಗೆ ರಾಜ್ಯ ಸುತ್ತಾಡಿ, ಪಕ್ಷ ಸಂಘಟಿಸಿ ಅಧಿಕಾರಕ್ಕೆ ತಂದಿದ್ದಾರೆ, ಬಿಜೆಪಿ ಅಧಿಕಾರಕ್ಕೆ ಬಂದಾಗ 4 ಮಂದಿ ಲಿಂಗಾಯತರು, ಓರ್ವ ಒಕ್ಕಲಿಗ ಸಮುದಾಯದವರು ಮುಖ್ಯಮಂತ್ರಿಯಾಗಿದ್ದಾರೆ, ಹಿಂದುಳಿದ ಸಮುದಾಯದವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಿ ಒತ್ತಾಯಿಸಲಾಗುವುದು ಎಂದರು.
ಪಕ್ಷ ಸಂಘಟನೆಗೆ 40 ವರ್ಷ ಜೋಡೆತ್ತಿನಂತೆ ಕೆಲಸ ಮಾಡಿರುವ ಕೆ.ಎಸ್‌.ಈಶ್ವರಪ್ಪ ಅವರಿಗೂ ಸಹ ಜಗದೀಶ್‌ ಶೆಟ್ಟರ್‌, ಸದಾನಂದಗೌಡ, ಬೊಮ್ಮಾಯಿ ಅವರಂತೆ ಮುಖ್ಯಮಂತ್ರಿ ಮಾಡಬೇಕು, ಆದರೆ ಪಕ್ಷ ತೆಗೆದುಕೊಂಡಿರುವ ನಿರ್ಧಾರಕ್ಕೆ ಬದ್ಧವಾಗಿದ್ದು ಬೊಮ್ಮಾಯಿ ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಮತ್ತು ಪ್ರಮುಖ ಇಲಾಖೆ ನೀಡುವ ಮೂಲಕ ಗೌರವಿಸುವಂತೆ ಸಮುದಾಯದ ಪರವಾಗಿ ನಿಯೋಗ ಒತ್ತಾಯಿಸಲಿದೆ ಎಂದರು.
ರಾಜ್ಯ ಬಿಜೆಪಿಯಲ್ಲಿರುವ ಹಿಂದುಳಿದ ವರ್ಗಗಳ ಏಕೈಕ ನಾಯಕ ಈಶ್ವರಪ್ಪ ಅವರೊಂದಿಗೆ ಕುರುಬ ಸಮುದಾಯ ಇದ್ದು, ಹಿಂದುಳಿದ ಸಮುದಾಯಕ್ಕೆ ಮನ್ನಣೆ ನೀಡುವ ನಿಟ್ಟಿನಲ್ಲಿ ಮಾಜಿ ಸಿಎಂ ಬಿಎಸ್‌ವೈ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಜೀ, ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ನಡ್ಡ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಆರ್‌.ಸುರೇಶ್‌ ಮಾತನಾಡಿ, ರಾಜ್ಯದ ದೊಡ್ಡ ಸಮುದಾಯದ ನಾಯಕರಾಗಿರುವ ಕೆ.ಎಸ್‌.ಈಶ್ವರಪ್ಪ ಅವರು, ಪಕ್ಷ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಬಿಜೆಪಿ ಪಕ್ಷದ ಹಿಂದುಳಿದ ವರ್ಗದ ನಾಯಕನಿಗೆ ಮುಖ್ಯಮಂತ್ರಿ ಮಾಡಲಿಲ್ಲ, ಕನಿಷ್ಠ ಉಪ ಮುಖ್ಯಮಂತ್ರಿಯಾಗಿ ಮಾಡಲಿ ಎಂದು ಮನವಿ ಮಾಡಿದರು.
ತುಮಕೂರು ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಗರುಡಯ್ಯ ಮಾತನಾಡಿ, ಬಿಎಸ್‌ವೈ, ಈಶ್ವರಪ್ಪ ಜೋಡೆತ್ತುಗಳಾಗಿ ರಾಜ್ಯದಲ್ಲಿ ಪಕ್ಷ ಕಟ್ಟಿದರು, ಅವರ ಶ್ರಮಕ್ಕೆ ತಕ್ಕನಾದ ಸ್ಥಾನಮಾನವನ್ನು ಪಕ್ಷ ಕಲ್ಪಿಸಬೇಕಿದ್ದು, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿರುವ ಹಿಂದುಳಿದ ವರ್ಗಗಳ ನಾಯಕ, ಉಪ ಮುಖ್ಯಮಂತ್ರಿ ಸ್ಥಾನ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಎಪಿಎಂಸಿ ಅಧ್ಯಕ್ಷ ಓಂ ನಮೋ ನಾರಾಯಣ ಮಾತನಾಡಿ, ಯಡಿಯೂರಪ್ಪ ನಂತರ ಈಶ್ವರಪ್ಪ ಅವರಿಗೆ ಈ ಹಿಂದೆಯೂ ಅಧಿಕಾರ ನೀಡಲಿಲ್ಲ, ಪಕ್ಷದಲ್ಲಿ ಹಿರಿಯರಾಗಿರುವ ಈಶ್ವರಪ್ಪ ಅವರಿಗೆ ಸಮುದಾಯದ ಪರವಾಗಿ ಸಿಎಂ ಹುದ್ದೆ ನೀಡಬೇಕಿತ್ತು, ಕುರುಬ ಸಮುದಾಯಕ್ಕೆ ಸಿಎಂ ಸ್ಥಾನ ನೀಡದೆ ಅನ್ಯಾಯ ಮಾಡಿದ್ದು, ಈಶ್ವರಪ್ಪ ಅವರಿಗೆ ಮೂರು ಬಾರಿ ಸಿಎಂ ಹುದ್ದೆ ತಪ್ಪಿದೆ. ಹಿರಿತನವನ್ನು ಆಧರಿಸಿ ಡಿಸಿಎಂ ನೀಡಬೇಕು, ಉತ್ತಮ ಖಾತೆ ನೀಡಬೇಕೆಂದು ಆಗ್ರಹಿಸಿದರು.
ರೇವಣ ಸಿದ್ದೇಶ್ವರ ಮಠದ ಬಿಂದುಶೇಖರ್‌ ಒಡೆಯರ್‌ ಮಾತನಾಡಿ, ಈಶ್ವರಪ್ಪ ಅವರು ಯಡಿಯೂರಪ್ಪ ಅವರೊಂದಿಗೆ ಪಕ್ಷ ಕಟ್ಟಿದ್ದಾರೆ, ಹಿಂದುಳಿದ ವರ್ಗಗಳ ಮುಖಂಡನಿಗೆ ಮನ್ನಣೆ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಆರ್‌ಎಂಸಿ ರಾಜು, ಉಪಾಧ್ಯಕ್ಷ ಕುಮಾರಸ್ವಾಮಿ, ಪಾಲಿಕೆ ಸದಸ್ಯ ಲಕ್ಷ್ಮೀನರಸಿಂಹರಾಜು, ಇಂದ್ರಕುಮಾರ್‌, ನಾಗಭೂಷಣ್‌, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಎಸ್‌.ಶಂಕರ್‌, ಟಿ.ಇ.ರಘುರಾಂ, ಕಾಳಿದಾಸ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಭೀಮರಾಜು, ಗೂಳೂರು ಕೃಷ್ಣಮೂರ್ತಿ, ಯೋಗೀಶ್‌, ಆದಿನಾರಾಯಣ್‌, ರಮೇಶ್‌, ಸಂಘಟನಾ ಕಾರ್ಯದರ್ಶಿ ಮಧುಗಿರಿ ಬಾಬು ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!