ಎಂಎಲ್‌ಸಿ ನಾರಾಯಣಸ್ವಾಮಿಗೆ ಮಂತ್ರಿ ಸ್ಥಾನಕ್ಕೆ ಒತ್ತಾಯ

211

Get real time updates directly on you device, subscribe now.

ತುಮಕೂರು: ಪ್ರಸಕ್ತ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಾಗ ಬೇಕಿರುವುದರಿಂದ ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಕರ ಸಮಸ್ಯೆಗಳನ್ನು ಸಮಗ್ರವಾಗಿ ಅರಿತಿರುವ ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರನ್ನಾಗಿ ಮಾಡಬೇಕೆಂದು ವೈಎಎನ್‌ ಅಭಿಮಾನಿ ಬಳಗ ಒತ್ತಾಯಿಸಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವೈಎಎನ್‌ ಅಭಿಮಾನಿ ಬಳಗದ ಪೊ.ರೇವಣಸಿದ್ಧಪ್ಪ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳ್ಳಬೇಕಾದರೆ ಶೈಕ್ಷಣಿಕ ಸುಧಾರಣೆಗಳಾಗಬೇಕು, ಇಂದು ಶಿಕ್ಷಣ ಕ್ಷೇತ್ರದಲ್ಲಿ ಆಡಳಿತ ಕುಸಿದಿದೆ, ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ, ಅಧಿಕಾರಿಗಳ ಧೋರಣೆ ಹೆಚ್ಚಾಗಿದ್ದು, ಇದಕ್ಕೆ ಅಂತ್ಯ ಹಾಡಬೇಕಿದೆ. ಈ ನಿಟ್ಟಿನಲ್ಲಿ ವೈ.ಎ.ನಾರಾಯಣ ಸ್ವಾಮಿ ಅವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಲು ಸಾಲು ಸಮಸ್ಯೆಗಳಿವೆ. ಕೆಲವು ಶಾಲಾ ಕಾಲೇಜುಗಳಿಗೆ ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರೇ ಇಲ್ಲ, ಅಧಿಕಾರಿಗಳನ್ನು ಕೇಳಿದರೆ ಇಷ್ಟು ಚಿಕ್ಕ ಶಾಲಾ ಕಾಲೇಜುಗಳಿಗೆ ಪ್ರಾಂಶುಪಾಲರು ಯಾಕೇ ಎಂದು ಉತ್ತರಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಬೇಕು, ಎಲ್ಲಾ ಗೊಂದಲಗಳಿಗೂ ತೆರೆ ಎಳೆಯಬೇಕು, ನೂತನ ಶಿಕ್ಷಣ ನೀತಿ ಅನುಷ್ಠಾನಕ್ಕೆ ಒತ್ತು ನೀಡಬೇಕು. ಈ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವಾಗಬೇಕಾದರೆ ವೈ.ಎ.ನಾರಾಯಣಸ್ವಾಮಿ ಅವರಿಗೆ ಶಿಕ್ಷಣ ಮಂತ್ರಿ ಸ್ಥಾನ ಕೊಡಬೇಕು ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಬಿಜೆಪಿ ವರಿಷ್ಟರಿಗೆ ಒತ್ತಾಯಿಸಿದರು.
2006ರಿಂದಲೂ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಬಹಳಷ್ಟು ಅರ್ಥಮಾಡಿಕೊಂಡು ಪರಿಹಾರಕ್ಕಾಗಿ ಸಮರೋಪಾದಿಯಲ್ಲಿ ವೈ.ಎ.ನಾರಾಯಣ ಸ್ವಾಮಿಯವರು ಕೆಲಸ ನಿರ್ವಹಿಸಿದ್ದಾರೆ. 15 ವರ್ಷಗಳಿಂದಲೂ ಅಸ್ಥಿತ್ವದಲ್ಲಿರುವ ವೈಎಎನ್‌ ಬಳಗದ ಶಿಕ್ಷಕರ ಶ್ರೇಯೋಭಿವೃದ್ಧಿಗೆ ಕೆಲಸ ನಿರ್ವಹಿಸುತ್ತಿದೆ ಎಂದು ಹೇಳಿದರು.
ಸೇವೆಯಲ್ಲಿರುವ ಶಿಕ್ಷಕರು ನಿಧನರಾದರೆ ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಆರ್ಥಿಕ ಸಹಾಯ ನೀಡುವುದು, ನಿವೃತ್ತರಿಗೆ ಬೀಳ್ಕೊಡುಗೆ ಗೌರವ, ಹೊಸ ಶಿಕ್ಷಕರಿಗೆ ಸ್ವಾಗತ, ತರಬೇತಿ ನೀಡುವುದರ ಜೊತೆಗೆ ಇತ್ತೀಚೆಗೆ ಕೊರೋನದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಅನುದಾನ ರಹಿತ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಜಿಲ್ಲೆಯಾದ್ಯಂತ ಸುಮಾರು 3500ಕ್ಕೂ ಹೆಚ್ಚು ಮಂದಿಗೆ ಆಹಾರದ ಕಿಟ್‌ಗಳ ವೈಎಎನ್‌ ಬಳಗದ ವತಿಯಿಂದ ವಿತರಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಸಾಕಷ್ಟು ಸುಧಾರಣೆ ತರುವ ಅಗತ್ಯವಿದೆ. ಸಮಗ್ರ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶಿಕ್ಷಕ ವರ್ಗಕ್ಕೆ ತರಬೇತಿ ಮತ್ತು ಮಾರ್ಗದರ್ಶನದ ಅವಶ್ಯಕತೆ ಇದೆ. ಆಡಳಿತಾತ್ಮಕವಾಗಿ ಅನೇಕ ಗೊಂದಲಗಳಿಗೆ ಶಿಕ್ಷಕರು ಈಡಾಗಿದ್ದಾರೆ. ಹೀಗಾಗಿ ಶಿಕ್ಷಕರು ಅನಗತ್ಯವಾಗಿ ತೊಂದರೆ ಅನುಭವಿಸುವಂತಾಗಿದೆ. ಈ ಎಲ್ಲಾ ಸಮಸ್ಯೆಗಳ ಅರಿವು ಮತ್ತು ಸೂಕ್ತ ಪರಿಹಾರ ಸಂಬಂಧಪಟ್ಟ ಸಚಿವರಿಗೆ ಇದ್ದಲ್ಲಿ ಅಧಿಕಾರಿಗಳು ಹಾಗೂ ಅಧಿಕಾರ ಶಾಹಿಯ ಸಬೂಬುಗಳಿಗೆ ಆಸ್ಪದ ಕೊಡದೆ ಪರಿಹಾರ ನೀಡುವ ಶಕ್ತಿ ಸಾಮರ್ಥ್ಯ ಸುಲಭವಾಗುತ್ತದೆ ಎಂದರು.
ಈ ಎಲ್ಲಾ ಅಂಶಗಳನ್ನು ಮನಗಂಡು ವಿಧಾನ ಪರಿಷತ್‌ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಅವರನ್ನೇ ಶಿಕ್ಷಣ ಸಚಿವರನ್ನಾಗಿ ಮಾಡಿದರೆ ಅವರಲ್ಲಿ ಪರಿಹಾರ ಸಿದ್ಧವಿದೆ. ಮೂರು ಭಾರಿ ವಿಧಾನ ಪರಿಷತ್‌ ಸದಸ್ಯರಾಗಿ ಒಂದು ಭಾರಿ ಶಾಸಕರಾಗಿ ಆಯ್ಕೆಯಾಗಿ 15 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಆಳವಾದ ಅನುಭವ ಹೊಂದಿದ್ದಾರೆ. ಶಿಕ್ಷಕರ ಬಗ್ಗೆ ಉತ್ತಮ ಒಡನಾಟ ಹೊಂದಿದ್ದು, ಶಿಕ್ಷಣ ಕ್ಷೇತ್ರದ ಪ್ರತಿಯೊಂದು ಸಮಸ್ಯೆಯ ಅರಿವಿದ್ದು, ಅದಕ್ಕೆ ಪರಿಹಾರವೂ ಅವರಲ್ಲಿದೆ. ಆದ ಪ್ರಯುಕ್ತ ಶೈಕ್ಷಣಿಕ ಕ್ಷೇತ್ರ ಭವಿಷ್ಯದ ದೃಷ್ಠಿಯಿಂದ ವೈ.ಎ.ನಾರಾಯಣಸ್ವಾಮಿ ಅವರನ್ನು ಶಿಕ್ಷಣ ಮಂತ್ರಿಯನ್ನಾಗಿ ಮಾಡಬೇಕೆನ್ನುವುದು ಸಹಸ್ರಾರು ಶಿಕ್ಷಕರ ಆಶಯವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೈಎಎನ್‌ ಬಳಗದ ಗೌರವಾಧ್ಯಕ್ಷ ಶಿವಲಿಂಗಯ್ಯ, ಸಂಚಾಲಕ ರವಿಕುಮಾರ್‌, ಎಂ.ಸಿ.ಬಸವರಾಜ್‌, ನಾರಾಯಣಪ್ಪ, ಬಿ.ಆರ್‌. ನಾಗರಾಜ್‌, ಹನುಮಂತಯ್ಯ, ವೆಂಕಟರಮಣಗೌಡ, ಬೂತರಾಜು ಮುಂತಾದವರಿದ್ದರು.

Get real time updates directly on you device, subscribe now.

Comments are closed.

error: Content is protected !!