ಶಿರಾ: ಗಡಿಯಲ್ಲಿ ದೇಶ ಕಾಯುವ ಯೋಧರ ಪರಿಸ್ಥಿತಿಯನ್ನು ನಾವು ಊಹಿಸಿಕೊಳ್ಳಲು ಸಾಧ್ಯವಿಲ್ಲ, ಜೀವ ಒತ್ತೆ ಇಟ್ಟು ನಮ್ಮನ್ನು ಕಾಪಾಡುವ ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸುಬೇದಾರ್ ಕೃಷ್ಣಪ್ಪ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 22ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಪೀಳಿಗೆ ಭ್ರಷ್ಟಾಚಾರವನ್ನು ನಿಗ್ರಹಿಸುವ ಮೂಲಕ ದೇಶಸೇವೆ ಮಾಡಬೇಕೆಂದು ಕರೆ ನೀಡಿ 1999ರ ಮೇ 3 ರಂದು ಪ್ರಾರಂಭವಾದ ಕಾರ್ಗಿಲ್ ಯುದ್ಧದಲ್ಲಿ ವೀರಯೋಧರು ಎದುರಿಸಿದ ಸವಾಲುಗಳು, ನಿರ್ವಹಿಸಿದ ಕರ್ತವ್ಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಂಶುಪಾಲ ಡಾ.ಎಸ್.ಟಿ.ರಂಗಪ್ಪ ಮಾತನಾಡಿ ಮೂರು ತಿಂಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ವೀರಮರಣವನ್ನಪ್ಪಿದ ಹಾಗೂ ಗಾಯಗೊಂಡ ಸೈನಿಕರ ತ್ಯಾಗ ಮತ್ತು ಬಲಿದಾನಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ನಮ್ಮ ಕರ್ನಾಟಕದಲ್ಲಿ ಸೈನ್ಯಕ್ಕೆ ಹೆಚ್ಚು ಯೋಧರನ್ನು ನೀಡಿರುವ ಜಿಲ್ಲೆ ಕೊಡಗು, ಇದು ಇತರ ಜಿಲ್ಲೆಗಳಿಗೂ ಮಾದರಿಯಾಗಿದೆ, ಉಳಿದ ಜಿಲ್ಲೆಗಳಿಂದಲೂ ಯುವ ಪೀಳಿಗೆ ಸೈನ್ಯಕ್ಕೆ ಸೇರಿ ದೇಶಸೇವೆ ಮಾಡುವ ಮೂಲಕ ದೇಶದ ರಕ್ಷಣೆ ಮತ್ತು ಭದ್ರತೆ ಕಾಪಾಡಬೇಕೆಂದು ಕಿವಿ ಮಾತು ಹೇಳಿದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಶಿವಣ್ಣ.ಆರ್, ಕಾಲೇಜಿನ ಗ್ರಂಥಪಾಲಕರು ಹಾಗೂ ಎನ್ಸಿಸಿ ಅಧಿಕಾರಿ ಬಂಡೀರಂಗನಾಥ್, ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಅಶ್ವಥ್.ಡಿ., ಕಾಲೇಜಿನ ವಿದ್ಯಾರ್ಥಿಗಳಾದ ಭವ್ಯಶ್ರೀ, ಶ್ವೇತಾ, ಮೈತ್ರಿ, ಭೂತೇಶ್ ಹಾಜರಿದ್ದರು.
ಯೋಧರನ್ನು ಗೌರವಿಸುವುದು ಎಲ್ಲರ ಕರ್ತವ್ಯ
Get real time updates directly on you device, subscribe now.
Next Post
Comments are closed.