ತುಮಕೂರು: ಕರ್ನಾಟಕ ಜೀವ ವೈವಿಧ್ಯ ನಿರ್ವಹಣಾ ಸಮಿತಿ, ಜಿಲ್ಲಾಡಳಿತ, ಮಹಾನಗರಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಸ್ಮಾರ್ಟ್‌ಸಿಟಿ ಹಾಗೂ ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಮ್ಮೂರಿನ ಉದ್ಯಾನವನಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಘೋಷವಾಕ್ಯದೊಂದಿಗೆ ಉದ್ಯಾನವನಗಳ ಸಂರಕ್ಷಣೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಉದ್ಯಾನವನಗಳ ಸಂರಕ್ಷಣೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ನಗರದ ಕೆಲವೆಡೆ ಇದುವರೆಗೂ ಒತ್ತುವರಿಯಾಗಿರುವ ಪಾರ್ಕ್ ಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ, ಒತ್ತುವರಿಯಾಗಿರುವ ಪಾರ್ಕ್ ಗಳನ್ನು ತೆರವುಗೊಳಿಸಲಾಗಿಲ್ಲ, ಹಾಗಾಗಿ ಬಡಾವಣೆಗಳಲ್ಲಿ ಈ ಹಿಂದೆ ಇದ್ದು ಈಗ ನಾಪತ್ತೆಯಾಗಿರುವ ಪಾರ್ಕ್ ಗಳ ಪತ್ತೆಹಚ್ಚುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದರು.
ಬಡಾವಣೆಗಳಲ್ಲಿ ಒತ್ತುವರಿಯಾಗಿರುವ ಪಾರ್ಕ್ ಗಳನ್ನು ಉಳಿಸುವುದರೊಂದಿಗೆ ಮರಗಳನ್ನು ಕಡಿಯುತ್ತಿರುವುದು, ರಾಜಕಾಲುವೆ ಮುಚ್ಚುತ್ತಿರುವುದನ್ನು ತಡೆಯುವ ಕೆಲಸ ಮಾಡಬೇಕಾಗಿದೆ. ಉತ್ತಮ ವಾತಾವರಣಕ್ಕಾಗಿ ಪಾರ್ಕ್ ಗಳನ್ನು ಪತ್ತೆಹಚ್ಚಬೇಕು, ಒತ್ತುವರಿಯಾಗಿರುವ ಪಾರ್ಕ್ ಗಳನ್ನು ಬಿಡಿಸಿಕೊಳ್ಳಲು ಯಾರೂ ಪ್ರಯತ್ನಿಸುತ್ತಿಲ್ಲ ಎಂದ ಅವರು, ಪ್ರಸ್ತುತ ಕಠಿಣ ಕಾನೂನು ಜಾರಿಯಲ್ಲಿದ್ದು, ಒತ್ತುವರಿಯಾಗಿರುವ ಪಾರ್ಕ್ ಗಳನ್ನು ಗುರುತಿಸುವ ಕೆಲಸವನ್ನು ಪ್ರತಿಯೊಬ್ಬ ನಾಗರಿಕರು ಮಾಡಬೇಕಾಗಿದೆ ಎಂದರು.
ಪಾರ್ಕ್ ಅಭಿವೃದ್ಧಿಗಾಗಿ ಸ್ಮಾರ್ಟ್‌ಸಿಟಿಯಲ್ಲಿ 25 ಕೋಟಿ ರೂ. ಮೀಸಲಿಡಲಾಗಿದೆ. ಪಾಲಿಕೆಯಿಂದ 50, ಸ್ಮಾರ್ಟ್‌ಸಿಟಿಯಿಂದ 53 ಹಾಗೂ ಸಂಘ ಸಂಸ್ಥೆಗಳಿಂದ 13 ಪಾರ್ಕ್ ಗಳನ್ನು ಸಂರಕ್ಷಣೆ ಮಾಡಲಾಗಿದೆ. ದೊಡ್ಡ ದೊಡ್ಡ ಪಾರ್ಕ್ ಗಳ ಅಭಿವೃದ್ಧಿಗೆ 60 ರಿಂದ 70 ಲಕ್ಷ ರೂ. ವಿನಿಯೋಗಿಸಲಾಗುತ್ತಿದೆ ಎಂದರು.
ನಗರದ 1ನೇ ವಾರ್ಡ್ ನಿಂದ 29ನೇ ವಾರ್ಡ್ ನಲ್ಲಿ ಎಷ್ಟೋ ಪಾರ್ಕ್ ಗಳು ಇವೆಯೂ ಅದಕ್ಕಿಂತ 5 ಪಟ್ಟು ಹೆಚ್ಚು ಪಾರ್ಕ್ ಗಳು 30, 31, 32, 34ನೇ ವಾರ್ಡ್‌ಗಳಲ್ಲಿ ಇವೆ. ಈ ವಾರ್ಡ್ ಗಳಲ್ಲಿ ಸುಮಾರು 400 ರಿಂದ 500 ಪಾರ್ಕ್ ಗಳಿದ್ದು, ಇದರಲ್ಲಿ ಬಹುತೇಕ ಪಾರ್ಕ್ ಗಳು ಒತ್ತುವರಿಯಾಗಿ ನಾಪತ್ತೆಯಾಗಿವೆ. ಈ ಪಾರ್ಕ್ ಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕಾಗಿದೆ ಎಂದರು.
ಮಾರುತಿ ನಗರದಲ್ಲಿ ಮನೆ ಎದುರು ಇದ್ದಂತಹ ಪಾರ್ಕ್ ನ್ನು ಪ್ರಹ್ಲಾದ್ ರಾವ್ ಎಂಬುವರು ಸಂರಕ್ಷಣೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಎನ್.ಎಸ್.ಜಯಕುಮಾರ್ ಅವರು ಸಾಕಷ್ಟು ಪಾರ್ಕ್ ಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದಾರೆ,ಯಾರಾದರೂ ಮುಂದೆ ಬಂದರೆ ಅವರಿಗೆ ಪಾರ್ಕ್ ಅಭಿವೃದ್ಧಿಗೊಳಿಸುವ ದತ್ತು ಪತ್ರವನ್ನು ಪಾಲಿಕೆ ವತಿಯಿಂದ ನೀಡಲಾಗುವುದು ಎಂದು ಹೇಳಿದರು
ಹಿಂದಿನ ವಿಧಿ ವಿಧಾನದ ಪ್ರಕಾರವೇ ಪಾರ್ಕ್ ಗಳಲ್ಲಿ ಅರಳಿ ಮರ, ನೇರಳೆ ಮರ ಸೇರಿದಂತೆ ಇನ್ನಿತರೆ ಮರಗಳನ್ನು ಬೆಳೆಸಬೇಕು. ಪಾರ್ಕ್ ಗಳಿಂದ ಮರಗಳನ್ನು ಬೆಳೆಸುವುದರಿಂದ ಅದರ ನಿರ್ವಹಣೆಗೂ ಸುಲಭವಾಗಲಿದೆ, ಜತೆಗೆ ಉತ್ತಮ ಆಮ್ಲಜನಕವೂ ದೊರೆಯಲಿದೆ ಎಂದರು.
ಜಿಪಂ ಸಿಇಓ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ದಿಶಾ ಸಮಿತಿ ಸಭೆಯಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಸಾರ್ವಜನಿಕ ಸ್ವತ್ತುಗಳು ಹಾಗೂ ಎಲ್ಲಾ ಯೋಜನೆಗಳನ್ನು ವೆಬ್ ಪೋರ್ಟಲ್ ನಲ್ಲಿ ಅಳವಡಿಸಿ ಅಗತ್ಯ ಮಾಹಿತಿಗಳು ಪೋರ್ಟಲ್ ನಲ್ಲಿ ಲಭ್ಯವಾಗುವಂತೆ ತೀರ್ಮಾನ ಕೈಗೊಳ್ಳಲಾಗಿದೆ, ಈ ಎಲ್ಲಾ ಕಾರ್ಯಗಳನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿನ ಉದ್ಯಾನವನಗಳು, ಕೆರೆ ಕಟ್ಟೆಗಳು, ಸ್ಮಶಾನಗಳ ಮಾಹಿತಿಯನ್ನು ವೆಬ್‌ಪೋರ್ಟಲ್ ಗೆ ಅಳವಡಿಸಲಾಗುವುದು. ಸ್ವಲ್ಪ ಹಣದ ಕೊರತೆಯಿದೆ, ಎಲ್ಲವನ್ನು ಸರಿದೂಗಿಸಿ ಮಾಡುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೇಯರ್ ಬಿ.ಜಿ.ಕೃಷ್ಣಪ್ಪ ಮಾತನಾಡಿ, ಈ ಹಿಂದೆ ಬಡವರು ಮುದ್ದೆ ಊಟ ಮಾಡುತ್ತಿರು, ಇಂದು ಫೈವ್ ಸ್ಟಾರ್ ಹೋಟೆಲ್ ನಲ್ಲೂ ಮುದ್ದೆ ಊಟ ದೊರೆಯುತ್ತಿರುವುದು ಕಾಲ ಬದಲಾವಣೆಯಾಗುತ್ತಿದೆ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದರು.
ಈ ಮೊದಲು ಪಾರ್ಕ್ ಗಳಲ್ಲಿ ಅಲಂಕಾರಿಕ ಗಿಡಗಳನ್ನು ಹಾಕುತ್ತಿದ್ದೆವು, ಈಗ ಆಯುರ್ವೇದ ಔಷಧಿ ಗಿಡಗಳನ್ನು ನೆಡುತ್ತಿದ್ದೇವೆ. ಈಗ ಕಾಫಿ ಆಯ್ತಾ ಎಂದರೆ ಕಾಫಿ ಕುಡಿಯಲ್ಲ, ಕಷಾಯ ಕುಡಿಯುತ್ತೇವೆ ಎಂದು ಜನ ಹೇಳುತ್ತಿದ್ದಾರೆ, ಅಷ್ಟರ ಮಟ್ಟಿಗೆ ಕಾಲ ಬದಲಾವಣೆಯಾಗಿದೆ ಎಂದು ಹೇಳಿದರು.
ಪ್ರತಿಯೊಂದು ಉದ್ಯಾನವನದಲ್ಲೂ ಕೂಡ ಅಲಂಕಾರಿಕ ಗಿಡಗಳ ಜತೆಗೆ ಔಷಧಿ ಗುಣವುಳ್ಳ ಸಸಿಗಳನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ತಮ್ಮ ಅಕ್ಕಪಕ್ಕದ ಉದ್ಯಾನವನಗಳಲ್ಲಿ ಔಷಧೀಯ ಗಿಡಗಳನ್ನು ನೆಡಲು ಮುಂದಾಗಬೇಕು, ಪಾರ್ಕ್ ಗಳನ್ನು ಗಿಡ ನೆಡುವ ಕಾರ್ಯಕ್ಕಾಗಿ ಸಾಮಾಜಿಕ ಅರಣ್ಯ ಇಲಾಖೆಗೆ 9 ಲಕ್ಷ ರೂ. ನೀಡಲಾಗಿದೆ ಎಂದ ಅವರು ನಗರ ಸುಂದರವಾಗಲು ಉದ್ಯಾನವನ, ರಸ್ತೆ, ಚರಂಡಿಗಳು ಅಭಿವೃದ್ಧಿಯಾಗಬೇಕು ಎಂದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ನಗರದ 35 ವಾರ್ಡ್ ಗಳಲ್ಲೂ ಸರ್ವೆ ಮಾಡಲಾಗಿದ್ದು, ಈಗ 361 ಪಾರ್ಕ್ ಗಳು ಪತ್ತೆಯಾಗಿವೆ. ಜಿಇಎಸ್ ಲೇಯರ್ ನಲ್ಲಿ ಪಾರ್ಕ್ ಗಳ ಮಾಹಿತಿ ಅಳವಡಿಸಲಾಗುತ್ತಿದೆ. ದಿಶಾ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಪತ್ತೆಯಾಗದೆ ಇರುವ ಪಾರ್ಕ್ ಗಳನ್ನು ಕ್ಷೇಮಾಭಿವೃದ್ಧಿ ಸಂಘಗಳ ಬೆಂಬಲ ಪಡೆದು ಜಿಇಎಸ್ ಲೇಯರ್ ಮಾಡುವಂತೆ ತಿಳಿಸಿದ್ದಾರೆ. ಈ ಕಾರ್ಯಕ್ಕೆ ಎಲ್ಲ ಪಾಲಿಕೆ ಸದಸ್ಯರು, ಸಂಘ ಸಂಸ್ಥೆಗಳು, ಎನ್‌ಜಿಓಗಳು ಸಹಕಾರ ನೀಡಬೇಕು ಎಂದು ಕೋರಿದರು.
ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ ಮಾತನಾಡಿ, ಪಾಲಿಕೆ ಸದಸ್ಯರಾದ ನಯಾಜ್, ರಮೇಶ್, ನರಸಿಂಹಮೂರ್ತಿ, ಮಲ್ಲಿಕಾರ್ಜುನ್, ಧರಣೇಂದ್ರಕುಮಾರ್, ಗಿರಿಜಾ ಧನಿಯಾಕುಮಾರ್, ಮಂಜುಳ, ನವೀನ ಅರುಣ, ದೀಪಶ್ರೀ ಮಹೇಶ್‌ಬಾಬು, ಮುಜಿದಾ ಖಾನಂ, ನಾಮಿನಿ ಸದಸ್ಯರಾದ ಮೋಹನ್, ತ್ಯಾಗರಾಜ ಸ್ವಾಮಿ, ಟೂಡಾ ಆಯುಕ್ತ ಯೋಗಾನಂದ ಕುಮಾರ್, ಆರೋಗ್ಯಾಧಿಕಾರಿ ಡಾ.ರಕ್ಷಿತ್ ಮತ್ತಿತರರು ಇದ್ದರು.
Get real time updates directly on you device, subscribe now.
Prev Post
Comments are closed.