ಸಮರ್ಪಕವಾಗಿ ಜಾಬ್‌ ಕಾರ್ಡ್‌ ವಿತರಿಸುವ ಕೆಲಸ ಮಾಡಿ: ಡಿ.ಕೆ.ಸುರೇಶ್

ನರೇಗಾದಲ್ಲಿ ವೈಯಕ್ತಿಕ ಕಾಮಗಾರಿಗೆ ಆದ್ಯತೆ ಕೊಡಿ

215

Get real time updates directly on you device, subscribe now.

ಕುಣಿಗಲ್‌: ಕೋವಿಡ್‌ ಸಮಸ್ಯೆಯಿಂದ ಬಳಲುತ್ತಿರುವ ಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಿಗೆ ಹೆಚ್ಚು ಆದ್ಯತೆ ನೀಡಬೇಕೆಂದು ಸಂಸದ ಡಿ.ಕೆ.ಸುರೇಶ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶನಿವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಿನ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಂಸದರು, ತಾಲೂಕಿನಲ್ಲಿ ಒಟ್ಟಾರೆ 48,000 ಬಿಪಿಎಲ್‌ ಕಾರ್ಡ್‌ ಇವೆ, ಗ್ರಾಮಾಂತರ ಪ್ರದೇಶದಲ್ಲಿ 38,000 ಜಾಬ್‌ ಕಾರ್ಡ್‌ ನೀಡಲಾಗಿದೆ, ಇನ್ನು 28,000 ಮಂದಿಗೆ ಜಾಬ್‌ ಕಾರ್ಡ್‌ ನೀಡುವುದು ಬಾಕಿ ಇದೆ. ಆದರೆ ಸಮರ್ಪಕವಾಗಿ ಜಾಬ್‌ ಕಾರ್ಡ್‌ ವಿತರಣೆ ಕೆಲಸ ಮಾಡಿಲ್ಲ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಒಟ್ಟು 7,000 ಕುಟುಂಬಗಳಿವೆ ಈ ಪೈಕಿ ಎರಡು ಸಾವಿರ ಕುಟುಂಬಗಳಿಗೆ ಮಾತ್ರ ಜಾಬ್‌ ಕಾರ್ಡ್‌ ನೀಡಲಾಗಿದೆ, ಉಳಿದ 5,000 ಕುಟುಂಬ ಯೋಜನೆಯಿಂದ ವಂಚಿತವಾಗಿದೆ, 38,000 ಜಾಬ್‌ ಕಾರ್ಡ್‌ ದಾರರಿಗೆ 46 ಮಾನವ ದಿನದ ಕೆಲಸ ನೀಡಲಾಗಿದೆ, 180 ಮಂದಿಗೆ ಮಾತ್ರ 100 ದಿನ ಕೆಲಸ ನೀಡಲಾಗಿದೆ, ಯೋಜನೆ ಅನುಷ್ಠಾನ ನಿಟ್ಟಿನಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಕೋವಿಡ್‌ ಸಮಸ್ಯೆಯಿಂದ ಜನ ಆರ್ಥಿಕವಾಗಿ ಬಳಲುವಂತಾಗಿದೆ, ನರೇಗಾ ಯೋಜನೆ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದವರ ಎಲ್ಲಾ ಸಮುದಾಯದ ಜನರನ್ನು ಗುರುತಿಸಿ ಅವರಿಗೆ ಜಾಬ್‌ ಕಾರ್ಡ್‌ ನೀಡಿ 100 ದಿನಗಳ ಕೆಲಸ ನೀಡಿ ಅವರ ಆರ್ಥಿಕ ಸ್ಥಿತಿ ಉತ್ತಮಗೊಳಿಸಲು ಎಲ್ಲ ಅಧಿಕಾರಿಗಳು ಶ್ರಮಿಸಬೇಕು ಎಂದರು.
ಜನ ಕಷ್ಟದಲ್ಲಿದ್ದಾರೆ, ಕಚೇರಿಗೆ ಬೀಗ ಹಾಕಿದರೂ ಸರಿಯೇ ಜನರ ಮನೆ ಬಾಗಿಲಿಗೆ ತೆರಳಿ ಅವರಿಗೆ ನರೇಗಾ ಯೋಜನೆಯಲ್ಲಿ ಕಾಮಗಾರಿ ಕೈಗೊಳ್ಳಲು ಸಹಕಾರ ನೀಡಿ, ಸರ್ಕಾರದ ಯೋಜನೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು, ವೈಯಕ್ತಿಕ ಕಾಮಗಾರಿಗಳ ಪೈಕಿ ಮೆಟೀರಿಯಲ್‌ ಹಣವನ್ನು ಫಲಾನುಭವಿಯ ಖಾತೆಗೆ ಹಾಕಬೇಕು, ಅದನ್ನು ಬಿಟ್ಟು ಗುತ್ತಿಗೆದಾರರ ಖಾತೆಗೆ ಹಾಕಿದಲ್ಲಿ ಅಧಿಕಾರಿಗಳನ್ನ ಅಮಾನತಿಗೆ ಶಿಫಾರಸ್ಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಯೋಜನೆಯ ಅಡಿಯಲ್ಲಿ ಗ್ರಾಮಾಂತರ ಪ್ರದೇಶದ ಜನರ ಆರ್ಥಿಕ ಸ್ಥಿತಿ ವೃದ್ಧಿಗೊಳಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಮುಂದಿನ ಹದಿನೈದು ದಿನದೊಳಗೆ ಗ್ರಾಮಾಂತರ ಪ್ರದೇಶದಲ್ಲಿ ಬಾಕಿ ಉಳಿದಿರುವ ಎಲ್ಲರಿಗೂ ನೂರು ದಿನಗಳ ಕೆಲಸ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಿಯಾ ಯೋಜನೆ ಸಿದ್ಧಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾಧ್ಯವಾದಷ್ಟು ಸಮುದಾಯ ಕಾಮಗಾರಿಗಳನ್ನು ನಿಲ್ಲಿಸಬೇಕು, ತಾಲೂಕಿನಲ್ಲಿ ನರೇಗಾ ಯೋಜನೆ ಅನುಷ್ಠಾನ ತೃಪ್ತಿಕರವಾಗಿಲ್ಲ, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಜನತೆಗೆ ಯೋಜನೆಯ ಉಪಯೋಗ ಕೊಡಿಸಲು ಶ್ರಮಿಸಬೇಕು, ಅಧಿಕಾರಿಗಳು ಜನಪರ ಕೆಲಸ ಮಾಡಬೇಕೆ ಹೊರತು ರಾಜಕಾರಣದಲ್ಲಿ ತೊಡಗಬಾರದು, ರಾಜಕಾರಣ ಮಾಡುವುದಾದರೆ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕಾರಣಕ್ಕೆ ಧುಮುಕಲು ಸಲಹೆ ನೀಡಿದರು. ಕೃಷಿ ತೋಟಗಾರಿಕೆ ವಿವಿಧ ಇಲಾಖೆ ಅಧಿಕಾರಿಗಳು ಭೂ ರಹಿತರನ್ನು ಗುರುತಿಸಿ ಅವರ ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಿದವರು.
ಶಾಸಕ ಡಾ. ರಂಗನಾಥ್‌, ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ.ವಿದ್ಯಾಕುಮಾರಿ, ತಹಶೀಲ್ದಾರ್‌ ಮಹಾಬಲೇಶ್‌, ಆಡಳಿತಾದಿಕಾರಿ ಅತೀಕ್‌ ಪಾಷಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಜೋಸೆಫ್‌ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಗ್ರಾಮ ಪಂಚಾಯಿತಿ ಪಿಡಿಒಗಳು ಸಭೆಯಲ್ಲಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!