ತುಮಕೂರು: ಜಿಲ್ಲಾಡಳಿತದ ವತಿಯಿಂದ ಬರುವ ಆಗಸ್ಟ್ 15ರ ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಸ್ವಾತಂತ್ರ್ಯ ದಿನಾಚರಣೆಯನ್ನು ಯಶಸ್ವಿಗೊಳಿಸಲು ವಿವಿಧ ಅಧಿಕಾರಿಗಳ ನೇತೃತ್ವದ ಸ್ವಾಗತ ಸಮಿತಿ, ಪೆರೇಡ್ ಸಮಿತಿ, ಸಿಹಿ ತಿಂಡಿ ವಿತರಣೆ ಸಮಿತಿ ರಚಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಕಾರ್ಯ ಹಂಚಿಕೆ ಮಾಡಲಾಯಿತು.
ಆಗಸ್ಟ್ 15ರ ಕಾರ್ಯಕ್ರಮ: ಸ್ವಾತಂತ್ರ್ಯ ದಿನೋತ್ಸವದಂದು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ 8.30ಕ್ಕೆ ಸರ್ಕಾರಿ ನೌಕರರು, ಅಧಿಕಾರಿಗಳು ಕಡ್ಡಾಯವಾಗಿ ಕಾಲೇಜು ಮೈದಾನಕ್ಕೆ ಸೇರಬೇಕು. ನಂತರ 9 ಗಂಟೆಗೆ ಧ್ವಜಾರೋಹಣ, ಗೌರವರಕ್ಷೆ ಸ್ವೀಕಾರ ಮತ್ತು ಸಂದೇಶ ಕಾರ್ಯಕ್ರಮ ಜರುಗಲಿದೆ.
ಈ ವೇಳೆ ಜಿಲ್ಲಾಧಿಕಾರಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಜರುಗುವ ನಗರದ ಜೂನಿಯರ್ ಕಾಲೇಜು ಮೈದಾನವನ್ನು ಸುಣ್ಣಬಣ್ಣದಿಂದ ಸುಂದರಗೊಳಿಸಬೇಕೆಂದರಲ್ಲದೆ, ಎಲ್ಲಾ ಸರ್ಕಾರಿ ಕಚೇರಿ ಹಾಗೂ ನಗರದ ಮುಖ್ಯ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು, ಜೂನಿಯರ್ ಕಾಲೇಜು ಮೈದಾನದಲ್ಲಿ ವೇದಿಕೆ ನಿರ್ಮಾಣ, ಅಲಂಕಾರ, ಬ್ಯಾರಿಕೇಡ್ ಗಳ ನಿರ್ಮಾಣ ಮಾಡುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಸ್ವಾತಂತ್ರ್ಯ ದಿನಾಚರಣೆಯಂದು ಮೈದಾನದಲ್ಲಿ ಕುಡಿಯುವ ನೀರು, ಉಪಹಾರದ ವ್ಯವಸ್ಥೆ ಮಾಡಬೇಕಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಾಧಿಕಾರಿ ಹಾಗೂ ಆ್ಯಂಬುಲೆನ್ಸ್ ನಿಯೋಜಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರಲ್ಲದೆ, ಅಗ್ನಿಶಾಮಕ ವಾಹನದ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಕಾರ್ಯಕ್ರಮ ಜರುಗಲಿರುವ ಮೈದಾನದಲ್ಲಿ ಯಾವುದೇ ತೊಂದರೆಗಳಾಗದಂತೆ ಬ್ಯಾರಿಕೇಡಿಂಗ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು. ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ತಪ್ಪದೇ ಭಾಗವಹಿಸಬೇಕು, ಗೈರು ಹಾಜರಾದವರ ಮೇಲೆ ಸೂಕ್ತ ಕ್ರಮ ವಹಿಸಲಾಗುವುದು, ಎಲ್ಲಾ ಇಲಾಖೆಗಳ ಮುಖ್ಯಸ್ಥರು ವೈಯಕ್ತಿಕ ಆಸಕ್ತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಪೂರ್ವ ಸಿದ್ಧತಾ ಕಾರ್ಯಗಳಿಗೆ ತಮ್ಮ ಅಧೀನ ಸಿಬ್ಬಂದಿ ನಿಯೋಜಿಸದೆ ಯಾವುದೇ ಲೋಪ ದೋಷಗಳುಂಟಾಗದಂತೆ ವ್ಯವಸ್ಥಿತ ಆಚರಣೆಗೆ ಶ್ರಮಿಸಬೇಕು ಎಂದು ಸೂಚನೆ ನೀಡಿದರು.
ಕೋವಿಡ್-19ಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್, ಹಾಗೂ ಕಂದಾಯ ಇಲಾಖೆಯ ತಲಾ ಇಬ್ಬರು ಕೋವಿಡ್ ವಾರಿಯರ್ಸ್ ಗಳಿಗೆ ಗೌರವ ಸನ್ಮಾನ ಮಾಡಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ವಿಭಾಗಾಧಿಕಾರಿ ಅಜಯ್, ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
Comments are closed.