ತುಮಕೂರು: ಭಾರತದ ಒಟ್ಟಾರೆ ಜನಸಂಖ್ಯೆಯ ಶೇ.52 ರಷ್ಟಿರುವ ಹಿಂದುಳಿದ ವರ್ಗದ ಜನರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸದೃಢರನ್ನಾಗಿಸುವ ಗುರುತರ ಜವಾಬ್ದಾರಿ ಭಾಜಪ ಓಬಿಸಿ ಮೋರ್ಚಾ ಮುಖಂಡರು, ಕಾರ್ಯಕರ್ತರ ಮೇಲಿದೆ ಎಂದು ಭಾಜಪ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರಬಾಬು ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಶಂಕರಪ್ಪ ನೇತೃತ್ವದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಒಬಿಸಿ ಮೋರ್ಚಾದ 2ನೇ ತುಮಕೂರು ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ಸಮಾಜದ ಎಲ್ಲಾ ಸ್ತರಗಳನ್ನು ಮುಖ್ಯವಾಹಿನಿಗೆ ತರಬೇಕೆಂಬುದು ಪ್ರಧಾನಿ ನರೇಂದ್ರಮೋದಿ ಅವರ ಕನಸಾಗಿದೆ. ಅವರಿಗೆ ಪೂರಕವಾಗಿ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದರು.
ಬಿಜೆಪಿ ಪಕ್ಷದ ಕಾರ್ಯಕರ್ತರು ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿಲ್ಲ, ಬಂದಿರುವ ಸ್ವಾತಂತ್ರವನ್ನು ಉಳಿಸಿಕೊಳ್ಳಲು ನಾವೆಲ್ಲ ಹೋರಾಟ ಮಾಡಬೇಕಾಗಿದೆ, ಕರ್ನಾಟಕದಲ್ಲಿ 199 ಜಾತಿ ಒಳಗೊಂಡ ಸುಮಾರು 3.75 ಕೋಟಿ ಹಿಂದುಳಿದ ವರ್ಗದ ಜನರಿದ್ದಾರೆ. ಅವರ ಹಕ್ಕುಗಳಿಗಾಗಿ ನಾವೆಲ್ಲರೂ ಹೋರಾಟ ಮಾಡಬೇಕಾಗಿದೆ, ಕೇವಲ ಸಭೆ, ಸಮಾರಂಭಗಳಿಗೆ ಸಿಮೀತವಾಗದೆ, ಅವರಲ್ಲಿ ಜಾಗೃತಿ ಮೂಡಿಸಿ ಶೋಷಣೆ ಮುಕ್ತ ವರ್ಗವನ್ನು ಸೃಷ್ಟಿಸಬೇಕಾಗಿದೆ ಎಂದು ನರೇಂದ್ರಬಾಬು ತಿಳಿಸಿದರು.
ಪ್ರಧಾನಿ ನರೇಂದ್ರಮೋದಿ ಅವರ ಸಚಿವ ಸಂಪುಟದಲ್ಲಿ 28 ಜನರಿಗೆ ಸಚಿವ ಸ್ಥಾನ, ಇಬ್ಬರಿಗೆ ರಾಜ್ಯಪಾಲರ ಹುದ್ದೆ ನೀಡಿದ್ದಾರೆ. ಅಲ್ಲದೆ ನೀಟ್ ಮತ್ತು ಸಿಇಟಿಯಲ್ಲಿ ಶೇ.27 ರಷ್ಟು ಮೀಸಲಾತಿ ಘೋಷಿಸಿದ್ದಾರೆ. ಹಾಗಾಗಿ ನಮ್ಮ ಮಕ್ಕಳು ಮೆಡಿಕಲ್, ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಲು ಹೆಚ್ಚಿನ ಅವಕಾಶ ಕಲ್ಪಿಸಿದಂತಾಗುತ್ತದೆ. ಈ ಹಿಂದೆ ನಮ್ಮ ಜನಾಂಗದ ಅಭಿವೃದ್ಧಿಗೆ ಬುನಾದಿ ಹಾಕಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್, ಜೋತಿ ಬಾಪುಲೆ, ಸಾವಿತ್ರಿ ಬಾಯಿ ಪುಲೆ, ದೇವರಾಜ ಅರಸು ಅವರನ್ನು ನೆನಪು ಮಾಡಿಕೊಂಡು, ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಮುನ್ನೆಡೆಯಬೇಕಿದೆ ಎಂದರು.
ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಶಯಗಳನ್ನು ಪ್ರಧಾನ ಮಂತ್ರಿಗಳಾದ ನರೇಂದ್ರಮೋದಿ ಮತ್ತು ಅಮಿತ್ ಷಾ ಅವರು ಈಡೇರಿಸುತ್ತಿದ್ದಾರೆ. ಸಬ್ ಕ ಸಾಥ್, ಸಬ್ ಕ ವಿಕಾಸ್ ಎಂಬ ಘೋಷ ವಾಕ್ಯದ ಮೂಲಕ ಇಡೀ ದೇಶದ ಎಲ್ಲಾ ವರ್ಗದ ಜನರಿಗೂ ಯೋಜನೆಗಳನ್ನು ನೀಡುತಿದ್ದಾರೆ ಎಂದರು.
ಬಿಜೆಪಿಯಲ್ಲಿ ಸ್ವಾರ್ಥಕ್ಕೆ ಅವಕಾಶವಿಲ್ಲ, ಸ್ವಾರ್ಥ ರಹಿತ ಸೇವೆಗೆ ಎಂದೆಂದಿಗೂ ಬೆಲೆ ಸಿಗಲಿದೆ, ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಒಬಿಸಿ ಮೋರ್ಚಾ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಜೋತಿಗಣೇಶ್ ತಿಳಿಸಿದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರುದ್ರೇಶ್, ಬಿಜೆಪಿಯ ಪ್ರತಿ ಮೋರ್ಚಾದಿಂದ ಮೂರು ತಿಂಗಳಿಗೊಮ್ಮೆ ಈ ಹಿಂದಿನ ಕಾರ್ಯಕ್ರಮಗಳ ಮೆಲುಕು ಮತ್ತು ಮುಂದಿನ ಮೂರು ತಿಂಗಳ ಕಾರ್ಯಕ್ರಮಗಳ ಮಾರ್ಗದರ್ಶನ ಕುರಿತಂತೆ ಕಾರ್ಯಕಾರಿಣಿ ಸಭೆ ನಡೆಯಲಿದೆ, ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿಯಿದೆ, ನಮ್ಮ ಹಿಂದೆ ಬಿಜೆಪಿ ಎಂಬ ರಾಷ್ಟ್ರದ ಅತಿ ದೊಡ್ಡ ಪಕ್ಷದ ಶಕ್ತಿ ಇದೆ, ಹಾಗಾಗಿ ಹಿಂಜರಿಕೆ ಬಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗೋಣ ಎಂದು ಸಲಹೆ ನೀಡಿದರು.
ಕಳೆದ ಮೂರು ತಿಂಗಳ ಅವಧಿಯ ವರದಿ ಮಂಡಿಸಿದ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೇದಮೂರ್ತಿ, ಕೊರೊನ ಸಂದರ್ಭದಲ್ಲಿ ಸಂತ್ರಸ್ಥರಿಗೆ ನೆರವಾಗುವ ಉದ್ದೇಶದಿಂದ 4, 000 ದಿನಸಿ ಕಿಟ್‌ಗಳನ್ನು ಮೋರ್ಚಾದ ವತಿಯಿಂದ ವಿತರಿಸಲಾಗಿದೆ. ಅಲ್ಲದೆ ವೃಕ್ಷಾರೋಹಣ ಕಾರ್ಯಕ್ರಮದಲ್ಲಿ ಒಂದು ಸಾವಿರ ಗಿಡಗಳನ್ನು ನೆಟ್ಟಿದ್ದು, ಸುಮಾರು 5,000 ಸೀಡ್‌ಬಾಲ್ ತಯಾರಿಸಿ ಕಾಡು ಪ್ರದೇಶಗಳಲ್ಲಿ ಬಿತ್ತನೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಸುಮಾರು 10 ಸಾವಿರ ಜನ ಹಿಂದುಳಿದ ವರ್ಗದವರನ್ನು ಸೇರಿಸಿ, ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಬೃಹತ್ ಸಮಾವೇಶ ನಡೆಸಲು ಯೋಜಿಸಲಾಗಿದೆ ಎಂದರು.
ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್‌ಬಾಬು, ಜಿಲ್ಲಾ ಮುಖಂಡರಾದ ಗೋಕುಲ ಮಂಜುನಾಥ್, ಎಲ್ಲಾ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ತಾಲೂಕು ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ನರೇಂದ್ರಬಾಬು ಹೇಳಿಕೆ
ಹಿಂದುಳಿದವರ ಅಭಿವೃದ್ಧಿಗೆ ಬಿಜೆಪಿ ಶ್ರಮಿಸಲಿದೆ
Get real time updates directly on you device, subscribe now.
Prev Post
Next Post
Comments are closed.