ಶಾಸಕಿ ಪೂರ್ಣಿಮಾಗೆ ಸಚಿವ ಸ್ಥಾನ ನೀಡಲು ಆಗ್ರಹ

447

Get real time updates directly on you device, subscribe now.

ತುಮಕೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಯಾದವ ಸಮುದಾಯದ ಮುಖಂಡೆ ಹಾಗೂ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಅವರನ್ನು ಸೇರ್ಪಡೆ ಮಾಡಿಕೊಂಡು ಉಪ ಮುಖ್ಯಮಂತ್ರಿ ಮತ್ತು ಸಂಪುಟ ದರ್ಜೆಯ ಸಚಿವ ಸ್ಥಾನ ನೀಡುವಂತೆ ಜಿಲ್ಲಾ ಗೊಲ್ಲ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.
ನಗರದ ಅಶೋಕ ನಗರ ಮೈಲಾರಲಿಂಗೇಶ್ವರ ಬಿಲ್ಡಿಂಗ್ ನಲ್ಲಿ ನಡೆದ ಜಿಲ್ಲಾ ಗೊಲ್ಲ ಸಮುದಾಯದ ಮುಖಂಡರ ಸಭೆಯಲ್ಲಿ ಶಾಸಕಿ ಪೂರ್ಣಿಮಾಗೆ ಉಪಮುಖ್ಯಮಂತ್ರಿ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಬಿಜೆಪಿ ಪಕ್ಷದ ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಲಾಯಿತು.
ರಾಜ್ಯಾದ್ಯಂತ ಸುಮಾರು 40 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಯಾದವ ಸಮುದಾಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದು, ಈ ಸಮುದಾಯ ಸಾಮಾಜಿಕ ಮುನ್ನೆಲೆಗೆ ಬರಲು ಇಂದಿಗೂ ಸಾಧ್ಯವಾಗಿಲ್ಲ, ಕಳೆದ ಚುನಾವಣೆ ವೇಳೆ ಈ ಸಮುದಾಯದ ಜನ ಬಿಜೆಪಿ ಪರ ಒಲವು ತೋರಿದ್ದು, ಸಿರಾ ಉಪ ಚುನಾವಣೆ ವೇಳೆ ಕೂಡ ಬಿಜೆಪಿ ಪರ ನಿಂತಿದ್ದಾರೆ. ಈ ಸಮುದಾಯಕ್ಕೆ ಸೇರಿದ ಹಿರಿಯೂರು ಕ್ಷೇತ್ರದ ಏಕೈಕ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರಿಗೆ ನೂತನವಾಗಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ, ಕ್ಯಾಬಿನೆಟ್‌ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಸಭೆಯಲ್ಲಿ ಮುಖಂಡರು ಆಗ್ರಹಿಸಿದರು.
ಚಿಕ್ಕಣ್ಣಸ್ವಾಮಿ ಧಾರ್ಮಿಕ ಕ್ಷೇತ್ರದ ಧರ್ಮಾಧಿಕಾರಿ ಪಾಪಣ್ಣ ಮಾತನಾಡಿ, ಯಾದವ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ, ನಮ್ಮ ಸಮುದಾಯದಲ್ಲಿ ಒಬ್ಬರೇ ಶಾಸಕರಾಗಿರುವುದು, ಹಾಗಾಗಿ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿಂದಿನಿಂದಲೂ ಪಕ್ಷದ ಬಲವರ್ಧನೆಗಾಗಿ ಶಾಸಕಿ ಪೂರ್ಣಿಮಾ ಅವರು ಶ್ರಮವಹಿಸಿ ಕೆಲಸ ಮಾಡಿದ್ದಾರೆ, ಹಾಗಾಗಿ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಅವರು ಮನವಿ ಮಾಡಿದರು.
ಶಾಸಕಿ ಪೂರ್ಣಿಮಾ ಅವರು ಹಿಂದುಳಿದವರು, ಶೋಷಿತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾ, 4 ಸಾವಿರಕ್ಕೂ ಅಧಿಕ ಮಂದಿ ಬಡವರಿಗೆ ಮನೆಗಳನ್ನು ಒದಗಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಲೋಕಸಭೆ ಹಾಗೂ ಶಿರಾ ಉಪ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಸಭೆಯಲ್ಲಿ ಜಿಲ್ಲಾ ಗೊಲ್ಲ ಸಂಘದ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರಾದ ಜಿಲ್ಲಾ ಯಾದವ ಸಂಘದ ಉಪಾಧ್ಯಕ್ಷ ಡಿ.ಎಂ. ಸತೀಶ್‌, ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ ಬಾಬು, ಶ್ರೀಕೃಷ್ಣ ಗೆಳೆಯರ ಬಳಗದ ಜಿಲ್ಲಾಧ್ಯಕ್ಷ ಕುಣಿಹಳ್ಳಿ ಆರ್‌.ಮಂಜುನಾಥ್‌, ವಕೀಲರಾದ ಡಿ.ಶಿವಣ್ಣ, ಸಮಾಜದ ಮುಖಂಡರಾದ ಜಯಪ್ರಕಾಶ್‌, ಜಯಣ್ಣ, ಟೂಡಾ ಸದಸ್ಯರಾದ ಜಗದೀಶ್‌, ಕೋಮಲ ಮತ್ತಿತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!