ಅರಣ್ಯ ಕೃಷಿಗೆ ಪ್ರಾಧಾನ್ಯತೆ ನೀಡಿ ನದಿಗಳ ರಕ್ಷಿಸಿ: ಡೀಸಿ

286

Get real time updates directly on you device, subscribe now.

ತುಮಕೂರು: ಅರಣ್ಯ ಕೃಷಿಗೆ ಪ್ರಾಧಾನ್ಯತೆ ನೀಡುವುದರಿಂದ ಕಾಡಿನ ಸಂಪತ್ತು ಅಭಿವೃದ್ಧಿಗೊಂಡು ನದಿಗಳ ಸಂರಕ್ಷಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದರು.
ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಅರಣ್ಯ ಇಲಾಖೆ ಹಾಗೂ ಇಶಾ ಫೌಂಡೇಶನ್‌ ಹಮ್ಮಿಕೊಳ್ಳಲಾಗಿದ್ದ ಕಾವೇರಿ ಕೂಗು ಮತ್ತು ಮರಮಿತ್ರ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಜಲ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆ ಉದ್ದೇಶದಿಂದ ಇಶಾ ಫೌಂಡೇಶನ್‌ ಕೈಗೆತ್ತಿಕೊಂಡಿರುವ ಕಾವೇರಿ ಕೂಗು ಅಭಿಯಾನ ಶ್ಲಾಘನೀಯವಾದುದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನದಿ ಪಾತ್ರದಲ್ಲಿನ ಭೂಮಿಯಲ್ಲಿ ಅರಣ್ಯ ಬೆಳೆಸುವುದು, ಆ ಬಗ್ಗೆ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ. ಈ ಅಭಿಯಾನದ ಅಂಗವಾಗಿ ಅರಣ್ಯ ಕೃಷಿ ಮಾಡುವುದರಿಂದ ನದಿ ಸಂರಕ್ಷಣೆಯ ಜೊತೆಗೆ ಮಣ್ಣಿನ ಫಲವತ್ತತೆ ಹೆಚ್ಚಲಿದ್ದು, ಅಂತರ್ಜಲ ಅಭಿವೃದ್ಧಿಗೊಳ್ಳಲಿದೆ. ರೈತರು ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಕಾವೇರಿ ಕೂಗು ಅಭಿಯಾನವನ್ನು ಸರ್ಕಾರ ಹಾಗೂ ಇಶಾ ಫೌಂಡೇಶನ್‌ ವತಿಯಿಂದ ನಡೆಸಲಾಗುತ್ತಿದೆ, ಮುಖ್ಯವಾಗಿ ಅರಣ್ಯ ಕೃಷಿಗೆ ಮಹತ್ವ ಕೊಡುವುದು ಈ ಅಭಿಯಾನದ ಉದ್ದೇಶವಾಗಿದ್ದು, ರೈತರೆಲ್ಲಾ ಫಲ ಕೊಡುವಂತ ಮರಗಳನ್ನು ಬೆಳೆಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ಅವರಿಗೆ ಆದಾಯ ಹೆಚ್ಚಾಗಲಿದೆ. ಇದರ ಜೊತೆಗೆ ಕಾವೇರಿ ನದಿಯನ್ನು ಉಳಿಸುವ ಕೆಲಸವಾಗುತ್ತದೆ ಎಂದರು.
ಅರಣ್ಯ ಕೃಷಿಗೆ ಪ್ರಾಧಾನ್ಯತೆ ಕೊಡುವ ಮೂಲಕ ಕಾವೇರಿ ಕೂಗು ಅಭಿಯಾನಕ್ಕೆ ಕೈಜೋಡಿಸಬೇಕು, ರೈತರೆಲ್ಲರೂ ಅರಣ್ಯ ಕೃಷಿ ಅಳವಡಿಸಿಕೊಂಡು ಅಂತರ್ಜಲಮಟ್ಟ ಹೆಚ್ಚಿಸಬೇಕು ಎಂದು ತಿಳಿಸಿದರು.
ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಕಾರ್ಯಕ್ರಮ ಯಶಸ್ವಿಗಾಗಿ ಕೈಜೋಡಿಸಿದ್ದು, ಇಂದು ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಅರಣ್ಯ ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌, ಸಾಮಾಜಿಕ ಅರಣ್ಯ ಉಪವಿಭಾಗದ ಸಂರಕ್ಷಣಾಧಿಕಾರಿ ನಾಗರಾಜ್‌, ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಬಾಲಕೃಷ್ಣ, ಇಶಾ ಫೌಂಡೇಶನ್‌ನ ಸ್ವಾಮಿ ನವಣ, ಜಿಲ್ಲಾ ವ್ಯವಸ್ಥಾಪಕ ಸಂತೋಷ್‌ ಸೇರಿದಂತೆ 15 ಜನ ಸ್ವಯಂ ಸೇವಕರು ಇದ್ದರು.

Get real time updates directly on you device, subscribe now.

Comments are closed.

error: Content is protected !!