ಪ್ರೋತ್ಸಾಹಾಂಕ ನೀಡಿ ಎಸ್‌ಎಸ್‌ಎಲ್‌ಸಿ ರಿಸಲ್ಟ್ ಪ್ರಕಟಿಸಿ

ದಲಿತರು, ಬಡವರು, ರೈತರ ಮಕ್ಕಳಿಗೆ ಪ್ರೋತ್ಸಾಹಾಂಕಕ್ಕೆ ಸಂಘಟನೆಗಳ ಒತ್ತಾಯ

491

Get real time updates directly on you device, subscribe now.

ತುಮಕೂರು: ಕೊರೊನದಿಂದಾಗಿ ಆನ್ ಲೈನ್‌ ಶಿಕ್ಷಣದಿಂದ ವಂಚಿತರಾಗಿರುವ ರೈತರು, ದಲಿತರು, ಬಡವ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ನೀಡುವಾಗ ವಿಶೇಷ ಪ್ರೋತ್ಸಾಹಾಂಕ ನೀಡುವಂತೆ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ವತಿಯಿಂದ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ,ಕೋವಿಡ್‌ನಿಂದ 2019- 20 ಮತ್ತು 2020- 21 ರಲ್ಲಿ ಗ್ರಾಮೀಣ ಭಾಗದ ಅದರಲ್ಲಿಯೂ ದಲಿತರು, ಬಡವರು, ರೈತರ ಮಕ್ಕಳು ಸರಕಾರ ತರಗತಿ ಬೋಧನೆಗೆ ಬದಲಾಗಿ ಆನ್‌ಲೈನ್‌ ಶಿಕ್ಷಣ ಪಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಶೇ.20 ರಷ್ಟು ಮಕ್ಕಳಿಗೂ ಆನ್‌ಲೈನ್‌ ಶಿಕ್ಷಣ ಸಮರ್ಪಕವಾಗಿ ದೊರೆತ್ತಿಲ್ಲ, ಹಾಗಾಗಿ ರಾಜ್ಯ ಸರಕಾರ ನಡೆಸಿದ 10ನೇ ತರಗತಿ ಪರೀಕ್ಷೆಯ ಫಲಿತಾಂಶ ನೀಡುವಾಗ ಈ ಹಿಂದಿನ ಎರಡು ವರ್ಷಗಳ ಸರಾಸರಿ ಅಂಕಗಳ ಜೊತೆಗೆ, ವಿಶೇಷ ಪ್ರೋತ್ಸಾಹಾಂಕವನ್ನು ಈ ವರ್ಗಗಳ ವಿದ್ಯಾರ್ಥಿಗಳಿಗೆ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಕೊರೊನದಿಂದ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದನ್ನು ಗಮನಿಸಿದ ಹಲವು ರಾಜ್ಯಗಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ರದ್ದುಪಡಿಸಿದರೆ, ಕರ್ನಾಟಕ ಸರಕಾರದ ಶಿಕ್ಷಣ ಮಂತ್ರಿಗಳು ಮಾತ್ರ ಹಠಕ್ಕೆ ಬಿದ್ದವರಂತೆ ಪರೀಕ್ಷೆ ನಡೆಸಿದರು, ಭೌತಿಕವಾಗಿ ಪಾಠ, ಪ್ರವಚನ ನಡೆಯದ ಕಾರಣ, ಆನ್‌ಲೈನ್‌ ಕಲಿಕೆಯನ್ನೇ ಮುಂದಿಟ್ಟುಕೊಂಡು ಪರೀಕ್ಷೆ ನಡೆಸಿದ್ದಾರೆ, ಆನ್‌ಲೈನ್‌ ಶಿಕ್ಷಣಕ್ಕೆ ಅಗತ್ಯವಿರುವ ಮೊಬೈಲ್‌, ಲ್ಯಾಪ್ ಟಾಪ್‌ ಇನ್ನಿತರ ಪರಿಕರಗಳನ್ನು ಕೊಳ್ಳಲು ಶಕ್ತಿ ಇಲ್ಲದ ದಲಿತರು, ಬಡವರು, ರೈತರ ಮಕ್ಕಳ ಕಲಿಕೆಗೂ ಎಲ್ಲಾ ವಸ್ತುಗಳನ್ನು ಪಡೆದು ಶಿಕ್ಷಣ ಪಡೆದ ಮಕ್ಕಳು ಪರೀಕ್ಷೆ ಎದುರಿಸಿದ್ದು, ಫಲಿತಾಂಶದಲ್ಲಿ ಅಜಗಜಾಂತರ ವ್ಯತ್ಯಾಸವಾಗಲಿದೆ, ಇದು ಮುಂದಿನ ಶಿಕ್ಷಣ, ಉದ್ಯೋಗದ ಮೇಲೆ ತೀವ್ರ ದುಷ್ಪರಿಣಾಮ ಬೀರುವುದರಿಂದ ಗ್ರಾಮೀಣ ಭಾಗದ ಬಡವರು, ದಲಿತರು, ರೈತರ ಮಕ್ಕಳಿಗೆ ತೀವ್ರ ತೊಂದರೆಯಾಗಲಿದೆ, ಆದ್ದರಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶ ನೀಡುವಾಗ ಈ ಮಕ್ಕಳಿಗೆ ಪ್ರೋತ್ಸಾಹಾಂಕ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಎ.ಗೋವಿಂದರಾಜು ತಿಳಿಸಿದರು.
ಕೇಂದ್ರ ಸರಕಾರ ಜಾರಿಗೆ ತಂದಿರುವ ಜನವಿರೋಧಿ, ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ಕಳೆದ ಎಂಟು ತಿಂಗಳಿನಿಂದ ನಿರಂತರ ಹೋರಾಟ ನಡೆಯುತ್ತಿದ್ದು, ಇದುವರೆಗೂ ಪ್ರತಿಭಟನಾನಿರತ 534 ಜನರು ಅಸುನೀಗಿದ್ದಾರೆ. ಕನಿಷ್ಠ ಸೌಜನ್ಯಕ್ಕೂ ಪ್ರಧಾನಿ ಮೋದಿ ಅವರು ಪ್ರತಿಭಟನಾನಿರತ ರೈತರಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ, ಬದಲಾಗಿ ಜನಸಾಮಾನ್ಯರು, ಬಳಕೆದಾರರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ವಿದ್ಯುತ್‌ ತಿದ್ದುಪಡಿ ಕಾಯ್ದೆ ತಂದು ವಿದ್ಯುತ್‌ ಸರಬರಾಜನ್ನು ಖಾಸಗಿಯವರಿಗೆ ವಹಿಸಲು ಹುನ್ನಾರ ನಡೆಸುತ್ತಿದೆ. ಒಂದು ವೇಳೆ ವಿದ್ಯುತ್‌ ತಿದ್ದುಪಡಿ ಕಾಯ್ದೆ ಜಾರಿಗೆ ಬಂದರೆ ಇದುವರೆಗು ಉಚಿತ ವಿದ್ಯುತ್‌ ಪಡೆಯುತ್ತಿರುವ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್‌ ಮೀಟರ್‌ ಅಳವಡಿಕೆಯಾಗಲಿದೆ, ಅಲ್ಲದೆ ಮನೆ ಬಳಕೆಯ ವಿದ್ಯುತ್‌ ದರವು 2-3 ಪಟ್ಟು ಹೆಚ್ಚಾಗಲಿದೆ, ಹಾಗಾಗಿ ಸಂಸತ್ತಿನಲ್ಲಿ ವಿದ್ಯುತ್‌ ತಿದ್ದುಪಡಿ ಕಾಯ್ದೆ ಅಂಗೀಕಾರ ಮಾಡಬಾರದೆಂಬುದು ರೈತ ಸಂಘ, ಹಸಿರು ಸೇನೆ ಮತ್ತು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಒತ್ತಾಯವಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್‌.ರಾಮಯ್ಯ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷದ ಸರಕಾರ ಅಧಿಕಾರಕ್ಕೆ ಬಂದ ನಂತರ ದಲಿತರು, ಮಹಿಳೆಯರು, ಅಸಹಾಯಕರ ಮೇಲಿನ ದೌರ್ಜನ್ಯ ಹೆಚ್ಚಾಗಿವೆ, ಒಂದೆಡೆ ಜನ ಕೋವಿಡ್‌ನಿಂದ ಬಳಲುತಿದ್ದರೆ, ಬಿಜೆಪಿ ವರಿಷ್ಠರು ಮಂತ್ರಿ ಮಂಡಲ ರಚನೆಯಲ್ಲಿ ಬ್ಯುಸಿಯಾಗಿದ್ದಾರೆ. ಜನರ ಸಂಕಷ್ಟಕ್ಕಿಂತ ಅಧಿಕಾರ ಹಿಡಿಯುವುದೇ ಮುಖ್ಯವಾಗಿದೆ. ಕೆರೆಗಳ ಹೂಳೆತ್ತಿ, ಕೆರೆ ತುಂಬಿಸುವ ಕಾರ್ಯ ನೆನೆಗುದಿಗೆ ಬಿದ್ದಿವೆ, ನೀರಾವರಿ ಯೋಜನೆಗಳು ಸಂಪೂರ್ಣ ಸ್ಥಗಿತವಾಗಿವೆ, ಗ್ರಾಮೀಣ ಭಾಗದಲ್ಲಿ ಸ್ಮಶಾನಗಳಿಲ್ಲದೆ ನೆಮ್ಮದಿಯ ಶವಸಂಸ್ಕಾರಕ್ಕೂ ಜಾಗವಿಲ್ಲ ದಂತಾಗಿದೆ, ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಕಂದೂರು ತಿಮ್ಮಯ್ಯ, ಪ್ರಾಂತ ರೈತ ಸಂಘದ ಅಜ್ಜಪ್ಪ, ರೈತ ಸಂಘ ಮತ್ತು ಹಸಿರು ಸೇನೆಯ ಯುವ ಘಟಕದ ಅಧ್ಯಕ್ಷ ಚಿರತೆ ಚಿಕ್ಕಣ್ಣ, ಮುಖಂಡರಾದ ರವೀಶ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ, ಗುಬ್ಬಿ ಲೋಕೇಶ್‌, ಕಾಳೇಗೌಡ, ವೆಂಕಟೇಗೌಡ, ಪಾವಗಡದ ಪೂಜಾರಪ್ಪ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.
ಈ ಸಂಬಂಧ ಮನವಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

Get real time updates directly on you device, subscribe now.

Comments are closed.

error: Content is protected !!