ತುಮಕೂರು: ಬಹುಕಾಲ ಸಾರ್ವಜನಿಕ ಜೀವನದಲ್ಲಿದ್ದರೂ ನಾಯಕತ್ವದ ಪ್ರಭೆಯಲ್ಲಿ ಕೊಚ್ಚಿಹೋಗದ ರಾಜ್ಯದ ಕೆಲವೇ ರಾಜಕಾರಿಣಿಗಳಲ್ಲಿ ಬಿ.ಸಿ.ನಾಗೇಶ್ ಸಹ ಒಬ್ಬರು. ತಿಪಟೂರು ಕ್ಷೇತ್ರದ ಶಾಸಕ ಬಿ.ಸಿ.ನಾಗೇಶ್ ಜನರ ಕೈಗೆ ಸುಲಭವಾಗಿ ಸಿಗುವ ನಾಯಕ ಎಂದೇ ಹೆಸರು ಪಡೆದಿದ್ದಾರೆ. ಇದೀಗ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಬಿ.ಸಿ.ನಾಗೇಶ್ ಅವರಿಗೆ ಸಚಿವರಾಗುವ ಅವಕಾಶ ಸಿಕ್ಕಿದೆ.
ಜಾತಿ ರಾಜಕಾರಣವೇ ಮೇಲುಗೈ ಸಾಧಿಸಿರುವ ಈ ದಿನಮಾನದಲ್ಲಿ ಬ್ರಾಹ್ಮಣ ಜಾತಿಗೆ ಸೇರಿದ ನಾಗೇಶ್ ಲಿಂಗಾಯತ ಮತ್ತು ಒಕ್ಕಲಿಗರೇ ಮುಂಚೂಣಿಯಲ್ಲಿರುವ ತಿಪಟೂರು ಕ್ಷೇತ್ರದಲ್ಲಿ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಸಂಘ ಪರಿವಾರದ ಹಿನ್ನೆಲೆಯ ನಾಗೇಶ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ವಿಶ್ವಾಸಕ್ಕೂ ಪಾತ್ರರಾದವರು. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೂ ನಾಗೇಶ್ ಅವರಿಗೆ ಆಪ್ತ ಒಡನಾಟವಿತ್ತು.
ವಿದ್ಯಾರ್ಥಿ ದೆಸೆಯಲ್ಲಿ ಆರ್ಎಸ್ಎಸ್ ಚಾಲಿತ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನಲ್ಲಿ ಸಕ್ರಿಯರಾಗಿದ್ದರು. ಈವರೆಗೆ ಯಾವುದೇ ವಿವಾದಕ್ಕೆ ಸಿಲುಕಿಲ್ಲ. ತುಮಕೂರು ಜಿಲ್ಲೆಯಲ್ಲಿ ಮಾಧುಸ್ವಾಮಿ ಹೊರತುಪಡಿಸಿದರೆ ಬಿಜೆಪಿಗೆ ಶಕ್ತಿ ತುಂಬಬಲ್ಲ ಸಾಮರ್ಥ್ಯವಿರುವ ಶಾಸಕ ಎಂದು ಗುರುತಿಸಿಕೊಂಡಿದ್ದಾರೆ.
ಈವರೆಗೆ ನಾಗೇಶ್ ಅವರ ಮೇಲೆ ಯಾವುದೇ ಅವ್ಯವಹಾರದ ಆರೋಪಗಳು, ಕ್ರಿಮಿನಲ್ ಅಪರಾಧ ಪ್ರಕರಣಗಳು ಇಲ್ಲ. 1984ರಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಇಂದಿಗೂ ಸುಲಭವಾಗಿ ಜನಸಾಮಾನ್ಯರಿಗೆ ಸಿಗುತ್ತಾರೆ. ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಪಕ್ಷದ ನಿಯಮಗಳನ್ನು ಚಾಚು ತಪ್ಪದೆ ಪಾಲಿಸುವ ಅಪ್ಪಟ ಕಾರ್ಯಕರ್ತ, ಒಬ್ಬ ಕಾರ್ಯಕರ್ತನಾಗಿ ಪಕ್ಷಕ್ಕೆ ದುಡಿದು ನಾಯಕನಾಗಿ ಬೆಳೆದು ಶಾಸಕನಾಗಿ ವಿಧಾನಸಭೆ ಪ್ರವೇಶಿಸಿದರು.
ತಿಪಟೂರು ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ, ಜನರ ಕಷ್ಟ ಆಲಿಸಿದ್ದಾರೆ, ರೈತರ ಭವಣೆ ಕೇಳಿದ್ದಾರೆ, ಬೇಕಾದ ಸೌಲಭ್ಯ ಒದಗಿಸಿದ್ದಾರೆ, ಹೀಗೆ ತಮ್ಮ ನಿಸ್ವಾರ್ಥ ಸೇವೆ ಮೂಲಕ ಜನರಿಂದ ಸತತವಾಗಿ ಆಯ್ಕೆಯಾಗಿದ್ದಾರೆ, ಸೋಲಿನ ನಡುವೆಯೂ ಜಯದ ನಗೆ ಬೀರಿದ್ದೇ ಹೆಚ್ಚು, ಜನರು ಇವರ ಒಳ್ಳೆಯ ಗುಣ, ಸರಳ ಸ್ವಾಭಾವವನ್ನು ಮೆಚ್ಚಿಕೊಂಡಿದ್ದಾರೆ, ಎಲ್ಲಾ ವರ್ಗದವರ ಕಷ್ಟ ಕೇಳುವ ಗುಣ ಹೊಂದಿರುವ ನಾಗೇಶ್ ಸರ್ಕಾರದ ಸೌಲಭ್ಯವನ್ನು ನಿಜವಾದ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಿದ್ದಾರೆ, ಕೋಟಿ ಕೋಟಿ ಅನುದಾನ ತಂದು ತಿಪಟೂರು ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ, ಅನೇಕ ಯೋಜನೆ ತಂದು ಜನ ಸಾಮಾನ್ಯರಿಗೆ ಅನುಕೂಲ ಕಲ್ಪಿಸಿದ್ದಾರೆ.
Get real time updates directly on you device, subscribe now.
Prev Post
Next Post
Comments are closed.