ಸಿದ್ದಗಂಗಾ ಮಠಕ್ಕೆ ನೂತನ ಸಚಿವರ ಭೇಟಿ- ಶ್ರೀಗಳ ಆಶೀರ್ವಾದ ಪಡೆದ ಮಿನಿಸ್ಟರ್ಸ್

ಯಾವ ಖಾತೆ ಕೊಟ್ರು ನಿಭಾಯಿಸುವೆ: ನಾಗೇಶ್

152

Get real time updates directly on you device, subscribe now.

ತುಮಕೂರು: ಪಕ್ಷದ ವರಿಷ್ಠರು ನನಗೆ ಯಾವುದೇ ಖಾತೆ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ನೂತನ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.
ನಾನು ಮಂತ್ರಿಗಿರಿಯನ್ನೆ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ, ಹಾಗಾಗಿ ಇಂತಹದ್ದೇ ಖಾತೆ ಬೇಕು ಎಂಬ ಅಪೇಕ್ಷೆ ಹೊಂದಿಲ್ಲ, ವರಿಷ್ಠರು, ಮುಖ್ಯಮಂತ್ರಿಗಳು ನನ್ನ ಮೇಲೆ ವಿಶ್ವಾಸ ಇಟ್ಟು ಯಾವುದೇ ಖಾತೆ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಜತೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಶ್ರಮದಿಂದ ಬೆಳೆದಿರುವ ಪಕ್ಷದ ಕಾರ್ಯಕರ್ತನಿಗೆ ಈಗ ಹೊಸ ಜವಾಬ್ದಾರಿ ಕೊಟ್ಟಿದ್ದಾರೆ, ಈ ಜವಾಬ್ದಾರಿ ನೀಡಿರುವ ಪಕ್ಷದ ವರಿಷ್ಠರು, ಮುಖ್ಯಮಂತ್ರಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳ ಅಪೇಕ್ಷೆ ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಭಾರತೀಯ ಜನತಾ ಪಾರ್ಟಿಯಲ್ಲಿ ಯಾವುದೇ ಜಾತಿ ಕೋಟಾ ಇಲ್ಲ, ಮಾಧ್ಯಮದವರು ಅದಕ್ಕೆ ಹೊಸ ಬಣ್ಣ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ, ನಮ್ಮ ಪಕ್ಷದಲ್ಲಂತೂ ಯಾವುದೇ ರೀತಿಯ ಜಾತಿ ಕೋಟಾ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬ್ರಾಹ್ಮಣ ಕೋಟಾದಡಿ ಮಾಜಿ ಸಚಿವ ಸುರೇಶ್‌ಕುಮಾರ್‌ ಅವರನ್ನು ಕೈಬಿಟ್ಟು ನಿಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸುರೇಶ್‌ಕುಮಾರ್‌ ಅವರಷ್ಟು ಅನುಭವ, ಸಾಮರ್ಥ್ಯ, ಹೋರಾಟ ಶಕ್ತಿ ನನಗಿಲ್ಲ, ನನ್ನನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಅವರನ್ನು ಕೈಬಿಟ್ಟಿದ್ದಾರೆ ಎಂಬುದು ಸರಿಯಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.
ಕೋವಿಡ್‌ 3ನೇ ಅಲೆ ಬರಲಿದೆ ಎಂಬ ಬಗ್ಗೆ ತಜ್ಞರು ನೀಡಿರುವ ವರದಿ ಹಿನ್ನೆಲೆಯಲ್ಲಿ ಕೋವಿಡ್‌ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಮುಖ್ಯಮಂತ್ರಿಗಳು ನನಗೆ ಯಾದಗಿರಿ ಜಿಲ್ಲೆಯ ಹೊಣೆ ನೀಡಿದ್ದಾರೆ, ನಾಳೆ ಅಥವಾ ನಾಡಿದ್ದು ಅಲ್ಲಿನ ಶಾಸಕರು, ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜತೆ ಅಲ್ಲಿನ ಪರಿಸ್ಥಿತಿ, ತಯಾರಿ ಬಗ್ಗೆ ಚರ್ಚಿಸುತ್ತೇನೆ. ಶೀಘ್ರದಲ್ಲೇ ಯಾದಗಿರಿಗೆ ತೆರಳುತ್ತೇನೆ ಎಂದರು.
ಯಾವ ಜಿಲ್ಲೆಯ ಉಸ್ತುವಾರಿ ಬಯಸುತ್ತೀರಾ ಎಂಬ ಪ್ರಶ್ನೆಗೆ, ಇನ್ನು ಆ ಬಗ್ಗೆ ಚರ್ಚೆಯಾಗಿಲ್ಲ, ಸದ್ಯಕ್ಕೆ ಕೋವಿಡ್‌ ಪರಿಸ್ಥಿತಿ ನಿಭಾಯಿಸುವ ಹೊಣೆ ಮಾತ್ರ ವರಿಷ್ಠರು ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಮಾಜಿ ಸಚಿವ ಸೊಗಡು ಶಿವಣ್ಣ, ಮೇಯರ್‌ ಬಿ.ಜಿ.ಕೃಷ್ಣಪ್ಪ, ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ಮುಖಂಡರಾದ ರವಿ ಹೆಬ್ಬಾಕ, ಎಂ.ಬಿ.ನಂದೀಶ್‌, ಕೊಪ್ಪಲ್‌ ನಾಗರಾಜು, ದಿಲೀಪ್‌ಕುಮಾರ್‌, ಮಲ್ಲಸಂದ್ರ ಶಿವಣ್ಣ, ವೇದಮೂರ್ತಿ, ರುದ್ರೇಶ್‌ ಹಾಗೂ ಬಿಜೆಪಿಯ ಪಾಲಿಕೆ ಸದಸ್ಯರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!