ಪಶುಸಂಗೋಪನಾ ಖಾತೆ ಬೇಕು: ಪ್ರಭು ಚೌವ್ಹಾಣ್

155

Get real time updates directly on you device, subscribe now.

ತುಮಕೂರು: ನನಗೆ ಮತ್ತೆ ಪಶುಸಂಗೋಪನಾ ಖಾತೆಯೇ ಸಿಗಬೇಕು ಎಂಬ ಬಯಕೆಯನ್ನು ನೂತನ ಸಚಿವ ಪ್ರಭು ಚೌವ್ಹಾಣ್‌ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಂಪುಟದಲ್ಲಿ 2 ವರ್ಷ ಪಶುಸಂಗೋಪನಾ ಸಚಿವನಾಗಿ ಕೆಲಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ಕೈಗೊಂಡಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿವೆ, ಹಾಗಾಗಿ ಅರ್ಧಕ್ಕೆ ನಿಂತಿರುವ ಕೆಲಸ ಕಾರ್ಯವನ್ನು ಪೂರ್ಣಗೊಳಿಸುವ ಸಲುವಾಗಿ ಮತ್ತೆ ನನಗೆ ಅದೇ ಖಾತೆ ನೀಡಬೇಕು ಎಂಬ ಬಯಕೆ ನನ್ನದಾಗಿದೆ ಎಂದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ವೇಳೆ ಪಶುಸಂಗೋಪನೆ ಖಾತೆ ಸಿಗದಿದ್ದರೂ ಬೇರೆ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.
ನಾನು ಪಶುಸಂಗೋಪನಾ ಖಾತೆ ಸಚಿವನಾಗಿದ್ದಾಗ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ, ಪ್ರತಿ ಜಿಲ್ಲೆಗೆ ಗೋಶಾಲೆ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಕೆಲಸ ಪೂರ್ಣಗೊಳಿಸಬೇಕು ಎಂಬುದು ನನ್ನ ಮಹದಾಸೆ ಎಂದರು.
ಸರ್ಕಾರದ ಯೋಜನೆ ರಾಜ್ಯದ ಆರೂವರೆ ಕೋಟಿ ಜನರಿಗೆ ತಲುಪಬೇಕು, ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇನೆ, ಉತ್ತರ ಕರ್ನಾಟಕ ಭಾಗದಲ್ಲಿ ಕೆಲಸರಿಗೆ ಸಚಿವ ಸ್ಥಾನ ಕೈ ತಪ್ಪಿರುವುದರಿಂದ ಅಸಮಾಧಾ ಭುಗಿಲೆದ್ದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷದ ಹೈಕಮಾಂಡ್‌ ಸಮರ್ಥರಿದ್ದಾರೆ. ಅದನ್ನೆಲ್ಲ ಅವರು ನೋಡಿಕೊಳ್ಳುತ್ತಾರೆ ಎಂದರು.
ನಮ್ಮ ಪಕ್ಷದಲ್ಲಿ ಎಲ್ಲ ವರ್ಗದವರಿಗೂ ಸಚಿವ ಸ್ಥಾನ ನೀಡಲಾಗಿದೆ. ಯಾವ ವರ್ಗದವರನ್ನು ಕಡೆಗಣಿಸಲಾಗಿಲ್ಲ, ಹಾಗೊಂದು ಒಂದು ವೇಳೆ ಅಸಮಾಧಾನ ಇದ್ದರೆ ಅದನ್ನು ಮುಂದಿನ ದಿನಗಳಲ್ಲಿ ಪಕ್ಷದ ಹೈಕಮಾಂಡ್‌ ಸರಿಪಡಿಸುತ್ತಾರೆ ಎಂದು ಹೇಳಿದರು.
ರಾಜ್ಯದಲ್ಲಿ ಪ್ರವಾಹ ಇರುವ ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಭಾಯಿಸಲು ಹಾಗೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಈಗಾಗಲೇ ತಮಗೆಲ್ಲ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ನೂತನ ಸಚಿವರುಗಳಿಗೆ ಒಂದೊಂದು ಜಿಲ್ಲೆಯ ಜವಾಬ್ದಾರಿ ನೀಡಿದ್ದಾರೆ. ನನಗೂ ಬೀದರ್‌ ಜಿಲ್ಲೆಯ ಹೊಣೆ ಹೊರಿಸಿದ್ದು, ನಾಳೆ ಆ ಜಿಲ್ಲೆಗೆ ತೆರಳುತ್ತಿದ್ದೇನೆ ಎಂದರು.

Get real time updates directly on you device, subscribe now.

Comments are closed.

error: Content is protected !!