ಯುವ ಪೀಳಿಗೆಯಲ್ಲಿ ರಾಷ್ಟ್ರ ಪ್ರೇಮ ಬೆಳೆಸಿ: ನಿರ್ಮಲಾನಂದಶ್ರೀ

573

Get real time updates directly on you device, subscribe now.

ತುರುವೇಕೆರೆ: ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸಿದ ಮಹನೀಯರ ಬಗ್ಗೆ ಇಂದಿನ ಯುವ ಪೀಳಿಗೆಗೆ ಪರಿಚಯಿಸಿ ಕೊಡುವ ಮೂಲಕ ಅವರಲ್ಲಿ ರಾಷ್ಟ್ರ ಪ್ರೇಮ ಬಿತ್ತಬೇಕಿದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಚೌದ್ರಿಕನ್ವೆಂಷನಲ್‌ ಹಾಲ್‌ನಲ್ಲಿ ತಾಲ್ಲೂಕು ನಾಗರಿಕ ವೇದಿಕೆ ಹಾಗೂ ಹಲವು ಸಂಘ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ಪೊ.ಪುಟ್ಟರಂಗಪ್ಪ ಅವರ ವಿರಚಿತ ಸ್ವಾತಂತ್ರ್ಯ ಹೋರಾಟಗಾರರ ವೀರಪಥ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ, ದೇಶಕ್ಕಾಗಿ ಹೋರಾಟ ಮಾಡಿದ ಅನೇಕ ಮಹನೀಯರು ನಮ್ಮ ನಡುವೆ ಇದ್ದರು ಎಂಬುದನ್ನು ಅರಿಯಬೇಕಿದೆ. ಈ ನಿಟ್ಟಿನಲ್ಲಿ ಪ್ರೊ.ಪುಟ್ಟರಂಗಪ್ಪನವರು ವೀರಪಥ ಕೃತಿ ರಚಿಸುವ ಮೂಲಕ ತುರುವೇಕೆರೆ ತಾಲೂಕಿನ 89 ಮಂದಿ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸಿಕೊಡುವ ಕಾರ್ಯ ಅನನ್ಯವಾದುದು ಎಂದರು.
ವಿಶೇಷವಾಗಿ ಬ್ರಿಟೀಷರಿಂದ ಕಣ್ತಪ್ಪಿಸಿಕೊಳ್ಳಲು ಆದಿಚುಂಚನಗಿರಿ ಕ್ಷೇತ್ರದ ಗುಹೆಗಳಲ್ಲಿ ಅಡಗಿ ಕುಳಿತಿರುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ಆಹಾರ ನೀಡಿ ಶ್ರೀಮಠ ಸಲಹುತಿತ್ತು ಎಂಬುದನ್ನು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ. ಸ್ವತಂತ್ರ್ಯ ಹೋರಾಟದಲ್ಲಿ ಮಠ ಮಾನ್ಯಗಳು, ಸನ್ಯಾಸಿಗಳು, ಯೋಗಿಗಳ ಪಾತ್ರ ಮಹತ್ತರವಾದುದು ಎಂಬುದನ್ನು ಮನಗಾಣ ಬಹುದಾಗಿದೆ ಎಂದು ಹೇಳಿದರು.
ಪುಸ್ತಕ ಪರಿಚಯ ಮಾಡಿಕೊಟ್ಟ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ವಿಶ್ವವಿದ್ಯಾಲಯಗಳು ನೀಡುತ್ತಿರುವ ಜ್ಞಾನವೇ ಅನಂತವಲ್ಲ, ಇದಕ್ಕಿಂತ ಅನುಭವದಿಂದ ಅರಿವಾಗುವ ಜ್ಞಾನವೇ ದೊಡ್ಡದು, ಈ ದೇಶದ ಚಾರಿತ್ರಿಕ ಪರಂಪರೆ, ದಾಖಲೆಗಳು ಮತ್ತು ಗ್ರಂಥ ಸಂಪತ್ತನ್ನು ಸಂಗ್ರಹಿಸಿ ದಾಖಲಿಸುವ ಅಗತ್ಯವಿದೆ, ಪ್ರೊ.ಪುಟ್ಟರಂಗಪ್ಪವರು ತಮ್ಮ ಕೃತಿಯಲ್ಲಿ ಯಾವುದೇ ಉಪಮೇಯಗಳಿಗೆ ಒತ್ತು ನೀಡದೆ ವಾಸ್ತವತೆ ದಾಖಲಿಸುವ ಮೂಲಕ ನಿಜ ಇತಿಹಾಸಕಾರನ ಕರ್ತವ್ಯ ಶ್ರದ್ಧೆ ಮೆರೆದಿದ್ದಾರೆ ಎಂದರು.
ಕೃತಿ ರಚನೆಕಾರ ಪೊ.ಪುಟ್ಟರಂಗಪ್ಪ ಮಾತನಾಡಿ ಎರಡು ವರ್ಷಗಳ ಕಾಲ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಬದುಕು, ಹೋರಾಟದ ಬಗ್ಗೆ ಅಧ್ಯಯನ ನಡೆಸಿ ಸ್ವಾತಂತ್ರ್ಯ ಹೋರಾಟಗಾರ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಪ್ರಯತ್ನ ಮಾಡಿದ್ದೇನೆ. ನನ್ನ ಕೃತಿಯನ್ನು ಬಿಡುಗಡೆ ಮಾಡಲು ಆಸಕ್ತಿ ತೋರಿದ ತಾಲೂಕಿನ ನಾಗರಿಕರನ್ನು ಬಹುವಾಗಿ ಸ್ಮರಿಸುತ್ತೇನೆ. ಆದಿಚುಂಚನಗಿರಿ ಪೀಠಾಧ್ಯಕ್ಷರ ಕೃಪಾದೃಷ್ಟಿ ,ಹಿರಿಯ ಕಿರಿಯರು ನನಗೆ ತೋರಿದ ಗೌರವ ನನ್ನ ಜೀವನದ ಅವಿಸ್ಮರಣೀಯ ಘಳಿಗೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ 107 ವರ್ಷದ ಕೆಂಪಯ್ಯ ಮತ್ತು ನೂರರ ಆಜುಬಾಜಿನಲ್ಲಿರುವ ನಿಂಗಪ್ಪ ಹಾಗು ಕೃತಿ ರಚನೆಕಾರ ಪೊ.ಪುಟ್ಟರಂಗಪ್ಪ ದಂಪತಿಯನ್ನು ನಾಗರಿಕ ವೇದಿಕೆಯಿಂದ ಅಭಿನಂದಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ನಾಗರಿಕ ವೇದಿಕೆ ಅಧ್ಯಕ್ಷ ಧನಪಾಲ್‌ ವಹಿಸಿದ್ದರು. ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ತುಮುಲ್‌ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಂಜನ್‌ಕುಮರ್‌, ಕಸಾಪ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ, ಕಸಾಪ ತಾಲೂಕು ಅಧ್ಯಕ್ಷ ನಂ.ರಾಜು, ಕೊಂಡಜ್ಜಿ ವಿಶ್ವನಾಥ್, ಖ್ಯಾತ ಲೇಖಕ ತುರುವೇಕೆರೆ ಪ್ರಸಾದ್‌, ಡಾ.ಚೌದ್ರಿನಾಗೇಶ್‌ ಮತ್ತಿತರಿದ್ದರು.

Get real time updates directly on you device, subscribe now.

Comments are closed.

error: Content is protected !!