ಸಾರ್ವಜನಿಕ ಜೀವನ ನನಗೆ ತೃಪ್ತಿ ನೀಡಿದೆ

ಹುಟ್ಟುಹಬ್ಬದ ಸಂಭ್ರಮದಲ್ಲಿ ಡಾ.ಪರಮೇಶ್ವರ್‌ ಹೇಳಿಕೆ

178

Get real time updates directly on you device, subscribe now.

ತುಮಕೂರು: ವೈಯಕ್ತಿಕ ಮತ್ತು ಸಾರ್ವಜನಿಕ ಜೀವನ ಎರಡರಲ್ಲಿಯೂ ಸಣ್ಣಪುಟ್ಟ ಬೇಸರದ ನಡುವೆ ಒಟ್ಟಾರೆ ಜೀವನ ತೃಪ್ತಿ ತಂದಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.
ನಗರದ ಗೊಲ್ಲಹಳ್ಳಿಯ ಸಿದ್ದಾರ್ಥ ನಗರದಲ್ಲಿ ಸರಳವಾಗಿ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ತಮ್ಮ 70ನೇ ಹುಟ್ಟು ಹಬ್ಬ ಆಚರಣೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವೊಮ್ಮೆ ರಾಜಕಾರಣದಲ್ಲಿ ಬೇಸರಗಳು ಆಗುತ್ತವೆ, ಅವುಗಳಿಗೆ ತಲೆ ಕೆಡಿಸಿಕೊಂಡಿಲ್ಲ, ಡಾಕ್ಟರೇಟ್‌ ಮಾಡಬೇಕೆಂಬುದು ನನ್ನ ಕನಸಾಗಿತ್ತು, ಅದು ಈಡೇರಿದೆ, ರಾಜಕಾರಣದಲ್ಲಿಯೂ ಡಿಸಿಎಂ ನಂತಹ ಉನ್ನತ ಹುದ್ದೆಗಳನ್ನು ಪಕ್ಷ ನೀಡಿದೆ ಎಂದರು.
ಕಳೆದ ನಾಲ್ಕೈದು ವರ್ಷಗಳಿಂದ ನೆರೆ, ಬರ, ಕೋವಿಡ್‌ನಿಂದಾಗಿ ನನ್ನ ಹುಟ್ಟುಹಬ್ಬ ಆಚರಿಸಿರಲಿಲ್ಲ, ಆದರೆ ಈ ಬಾರಿ ಕಾರ್ಯಕರ್ತರು ತೀವ್ರ ಒತ್ತಡ ತಂದು, ಊರಿನಲ್ಲಿಯೇ ಆಚರಿಸುವಂತೆ ಕೋರಿದ ಹಿನ್ನೆಲೆಯಲ್ಲಿ ಗೊಲ್ಲಹಳ್ಳಿಯಲ್ಲಿಯೇ ಇದ್ದೇನೆ, ಬೆಳಗ್ಗೆ ಪಕ್ಷದ ಕಾರ್ಯಕರ್ತರು, ಹಿರಿಯರು, ಹಿತೈಷಿಗಳು ಬಂದು ಶುಭ ಹಾರೈಸಿದ್ದಾರೆ. ಅವರೆಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎಂದು ಡಾ.ಜಿ.ಪರಮೇಶ್ವರ್‌ ನುಡಿದರು.
ಜಮೀರ್‌ ಅಹಮದ್‌ ಖಾನ್‌ ಅವರ ಮನೆಯ ಮೇಲಿನ ಇಡಿ ದಾಳಿ ಯಾವ ಕಾರಣಕ್ಕೆ ಎಂಬುದು ಸರಿಯಾಗಿ ತಿಳಿದಿಲ್ಲ, ಅದು ಹೊರಬರಬೇಕು, ಇಡಿ, ಐಟಿಗಳು ಈಗಾಗಲೇ ದುರ್ಬಳಕೆಯಾಗುತ್ತಿರುವ ಬಗ್ಗೆ ಹಲವಾರು ಬಾರಿ ಪಕ್ಷ ಹೇಳಿದೆ, ವಿರೋಧ ಪಕ್ಷಗಳ ಮುಖಂಡರು ಹಲವಾರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದರು.
ಪ್ರಸ್ತುತ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ದೂರದೃಷ್ಟಿ ಉಳ್ಳ ನಾಯಕರಿಲ್ಲ, ಅನುಭವವುಳ್ಳ, ಮೇಧಾವಿತನದ ನಾಯಕರ ಕೊರತೆ ಇದೆ, ಮುಖ್ಯಮಂತ್ರಿಗಳು ತಪ್ಪು ಮಾಡಿದಾಗ ತಿದ್ದುವ, ಒಳ್ಳೆಯದನ್ನು ಮಾಡಿದಾಗ ಸಮರ್ಥಿಸುವ ಮಂತ್ರಿಗಳು ಕಾಣುತ್ತಿಲ್ಲ, ಈ ಸರಕಾರದಿಂದ ಹೆಚ್ಚಿನದೇನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರು.
ಮೇಕೆದಾಟು ಯೋಜನೆಯ ಪರ ಕಾಂಗ್ರೆಸ್‌ ಪಕ್ಷವಿದೆ, ಬೆಂಗಳೂರು ನಗರಕ್ಕೆ ಕುಡಿಯುವ ನೀರು ಬೇಕೆಂದರೆ ಮೇಕೆದಾಟು ಯೋಜನೆ ಆಗಲೇಬೇಕು, ಹಾಗಾಗಿ ಪಕ್ಷ ಯೋಜನೆಯ ಪರವಾಗಿದೆ, ಈಗಾಗಲೇ ಕಾವೇರಿ 5ನೇ ಹಂತ ಮುಗಿದರೂ ಬೆಂಗಳೂರಿಗೆ ಸಾಕಾಗುವಷ್ಟು ನೀರು ಲಭ್ಯವಾಗುತ್ತಿಲ್ಲ, ಹಾಗಾಗಿ ಮೇಕೆದಾಟು ಯೋಜನೆಯ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ಡಾ.ಜಿ.ಪರಮೇಶ್ವರ್‌ ತಿಳಿಸಿದರು.
ಡಾ.ಜಿ.ಪರಮೇಶ್ವರ್‌ ಅವರ ಹುಟ್ಟುಹಬ್ಬದ ಅಂಗವಾಗಿ ಶುಭ ಹಾರೈಸಲು ಬಂದ ಕಾರ್ಯಕರ್ತರಿಗೆ ಹೋಳಿಗೆ ಊಟ ಆಯೋಜಿಸಲಾಗಿತ್ತು, ಹಲವಾರು ಗಣ್ಯರು ಶುಭಕೋರಿದರು.

Get real time updates directly on you device, subscribe now.

Comments are closed.

error: Content is protected !!