ವರದಿಗಾರರಿಗೆ ಹೊಸ ಸವಾಲುಗಳಿವೆ: ರಾಜೇಶ್‌ ಗೌಡ

123

Get real time updates directly on you device, subscribe now.

ಶಿರಾ: ಡಿಜಿಟಲ್‌ ಮಾಧ್ಯಮ ಯುಗದಲ್ಲಿ ಪತ್ರಿಕಾ ಮಾಧ್ಯಮದ ಸುದ್ದಿಗಾರರಿಗೆ ಹೆಚ್ಚು ಸವಾಲುಗಳು ಎದುರಾಗುತ್ತಿದ್ದು, ಹೊಸ ದೃಷ್ಟಿ ಕೋನದಲ್ಲಿ ವರದಿ ಮಾಡುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಅನಿವಾರ್ಯತೆ ಎದುರಾಗಿದೆ ಎಂದು ಶಾಸಕ ಡಾ. ಸಿ.ಎಂ.ರಾಜೇಶ್‌ ಗೌಡ ನುಡಿದರು.
ಇಲ್ಲಿನ ಕೆಇಬಿ ಶ್ರೀರಾಮ ಸಮುದಾಯ ಭವನದಲ್ಲಿ ಶುಕ್ರವಾರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸ್ವತಂತ್ರಪೂರ್ವದಿಂದಲೂ ಪತ್ರಿಕೆಗಳು ಜನ ಸಾಮಾನ್ಯರ ನಡುವಿನ ಸಂಪರ್ಕ ಕೊಂಡಿಗಳಾಗಿದ್ದು, ಸ್ಥಳೀಯ, ರಾಜ್ಯ, ದೇಶ ವಿದೇಶಗಳ ಸುದ್ದಿ ನೀಡುವಲ್ಲಿ ದುಡಿಯುತ್ತಿವೆ. ಆಧುನಿಕತೆ ಹೆಚ್ಚಿದಂತೆ ಸುದ್ದಿ ರವಾನೆ, ಮುದ್ರಣ ಎಲ್ಲದರಲ್ಲೂ ಹೊಸತನ ಕಂಡು ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ದೃಶ್ಯಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿಗಳು ಆಗಿಂದಾಗೆಯೇ ಜನರಿಗೆ ತಲುಪುತ್ತಿದ್ದು, ಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸುದ್ದಿಗಾರರಿಗೆ ತಮ್ಮ ಓದುಗರನ್ನು ಹಿಡಿದಿಟ್ಟುಕೊಳ್ಳುವ ಸವಾಲು ಒಡ್ದಿದೆ. ಲೈನೇಜ್‌, ಜಾಹಿರಾತು ಎನ್ನುವ ಅಲ್ಪ ವರಮಾನದಲ್ಲಿ ಜೀವನ ನಡೆಸುವ ಅನಿವಾರ್ಯತೆ ವರದಿಗಾರರಿಗಿದ್ದು, ಆರ್ಥಿಕ ಕೊರತೆ ನಡುವೆಯೂ ಸಾಹಸ ಪ್ರವೃತ್ತಿ ಮೂಲಕ ವರದಿ ಮಾಡುವ ಸುದ್ದಿಗಾರರನ್ನು ಶ್ಲಾಘಿಸಬೇಕಿದೆ ಎಂದರು.
ವಿಧಾನ ಪರಿಷತ್‌ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಮಾತನಾಡಿ ಪತ್ರಕರ್ತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸುವ ಅವಶ್ಯಕತೆ ಇದೆ ಎಂದರು.
ರೇಷ್ಮೆ ಉದ್ಯಮಗಳ ಅಭಿವೃದ್ಧಿ ಮಂಡಲಿ ಅಧ್ಯಕ್ಷ ಎಸ್‌.ಆರ್‌.ಗೌಡ ಮಾತನಾಡಿ, ಶಾಸಕರು ಸದನದಲ್ಲಿ ಅಥವಾ ಸರ್ಕಾರ ಮಟ್ಟದಲ್ಲಿ ಚರ್ಚಿಸಿ, ಹೊಸ ನಿಯಮಾವಳಿ ರೂಪಿಸುವ ಮೂಲಕ ಪತ್ರಕರ್ತರ ಆರ್ಥಿಕ ಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತೆಂಗಿನ ನಾರು ಅಭಿವೃದ್ಧಿ ಮಂಡಲಿ ಅಧ್ಯಕ್ಷ ಬಿ.ಕೆ.ಮಂಜುನಾಥ್‌ ಮಾತನಾಡಿ, ಮಾಧ್ಯಮಗಳನ್ನು ಸರ್ಕಾರದ ನಾಲ್ಕನೇ ಅಂಗ ಎಂದು ಸುಮ್ಮನೆ ಹೇಳಿದರೆ ಸರಿಯಲ್ಲ. ಉಳಿದ ಅಂಗಗಳಲ್ಲಿ ಸಿಗುವಂತಹ ಆರ್ಥಿಕ ಭದ್ರತೆ ಪತ್ರಕರ್ತರಿಗೂ ಸಿಗುವಂತಾಗಬೇಕು ಎಂದರು.
ಸಂಘದ ತಾಲ್ಲೂಕು ಅಧ್ಯಕ್ಷ ಎಸ್‌.ಎನ್‌.ಜಯಪಾಲ್‌ ಮಾತನಾಡಿ, ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಪತ್ರಕರ್ತರಿಗೆ ಆರೋಗ್ಯ, ಸಂಚಾರ ಮತ್ತು ನಿವೇಶನ ಒದಗಿಸುವ ಮೂಲಕ ಪತ್ರಕರ್ತರ ನೆರವಿಗೆ ಸರ್ಕಾರ ಬರಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ ಮಾತನಾಡಿ, ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆಸಲಾಗುತ್ತಿರುವ ಕಾರ್ಯಕ್ರಮಗಳು ಮತ್ತು ಸರ್ಕಾರದಿಂದ ಪತ್ರಕರ್ತರಿಗೆ ಸದ್ಯ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಜಿಲ್ಲಾ ವರದಿಗಾರ ಜಿ.ಇಂದ್ರಕುಮಾರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಹದಿನೈದು ಮಂದಿ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ತಹಸೀಲ್ದಾರ್‌ ಎಂ. ಮಮತಾ, ಕಕಾನಿಪ ಸಂಘದ ರಾಜ್ಯಸಮಿತಿ ಸದಸ್ಯ ನಾಗರಾಜು, ಗ್ರಾಮಾಂತರ ಕಾರ್ಯದರ್ಶಿ ಬರಗೂರು ವಿರೂಪಾಕ್ಷ, ನಿರ್ದೇಶಕ ದಶರಥ, ಮುಖಂಡ ಚಂಗಾವರ ಮಾರಣ್ಣ, ಪ್ರಕಾಶ್‌ ಗೌಡ, ವಿನೋದ್‌ ಕುಮಾರ್‌, ಮಹಮದ್‌ ಫಕೃದ್ದೀನ್‌, ದೇವರಾಜು, ಶಿವಕುಮಾರ್‌, ಕೆ.ಕುಮಾರ್‌, ಬುಕ್ಕಾಪಟ್ಟಣ ಚಂದ್ರಶೇಖರ್‌, ವೀರಭದ್ರಪ್ಪ, ಪಿ.ಡಿ.ಮಹೇಶ್‌, ಹನುಮಂತರಾಜು, ಬಾಲಕೃಷ್ಣೇಗೌಡ, ಲಕ್ಷ್ಮೀಕಾಂತ, ಸೂಫಿಯಾನ್‌ ಅಹಮದ್‌, ವಿಜಯಕುಮಾರ್‌, ಓಂಕಾರಪ್ಪ, ವಲಿಸಾಬ್‌, ನಟರಾಜು, ತಂಗವೇಲು ಮೊದಲಾದವರು ಇದ್ದರು.

Get real time updates directly on you device, subscribe now.

Comments are closed.

error: Content is protected !!