ವಿದ್ಯುತ್‌ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ 10ಕ್ಕೆ

252

Get real time updates directly on you device, subscribe now.

ತುಮಕೂರು: ಕೇಂದ್ರ ಸರಕಾರ ರೈತರು, ಬಡವರಿಗೆ ಮಾರಕವಾಗಿರುವ ವಿದ್ಯುತ್‌ ಖಾಸಗೀಕರಣ ಬಿಲ್‌ನ್ನು ಪ್ರಸ್ತುತ ಲೋಕಸಭೆ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದ್ದು, ಜನ ವಿರೋಧಿಯಾಗಿರುವ ಸದರಿ ಬಿಲ್‌ನ್ನು ಮಂಡಿಸಬಾರದು ಎಂದು ಆಗ್ರಹಿಸಿ ಆಗಸ್ಟ್ 10ರ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸಂಘದ ಜಿಲ್ಲಾಧ್ಯಕ್ಷ ಆನಂದ ಪಟೇಲ್‌ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಇದೇ ರೀತಿಯ ಖಾಸಗೀಕರಣ ಕಾಯ್ದೆ ತರಲು ಮುಂದಾದಾಗ ರೈತರು ಮತ್ತು ಜನರ ವಿರೋಧಕ್ಕೆ ಹೆದರಿ ಹಿಂದೆ ಸರಿದಿದ್ದು ಇತಿಹಾಸ, ಮತ್ತೊಮ್ಮೆ ಆದೇ ರೀತಿಯ ಪ್ರತಿಭಟನೆಯನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಎದುರಿಸಬೇಕಾಗುತ್ತದೆ ಎಂದರು.
ವಿದ್ಯುತ್‌ ಖಾಸಗೀಕರಣ ಬಿಲ್‌ ಒಮ್ಮೆ ಪಾಸಾದರೆ ರೈತರ ನೀರಾವರಿ ಪಂಪ್‌ಸೆಟ್ಗಳಿಗೆ ಪ್ರಿಪೇಯ್ಡ್ ಸ್ಮಾರ್ಟ್‌ ಮೀಟರ್‌ಗಳು ಬೀಳಲಿವೆ. ಅಲ್ಲದೆ ಸರಕಾರದ ಯೋಜನೆಗಳಾದ ಭಾಗ್ಯ ಜೋತಿ, ಕುಟೀರ್‌ ಜೋತಿ, ಕುಡಿಯುವ ನೀರಿನ ಯೋಜನೆಗಳ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವುದರಿಂದ ಬಡವರಿಗೆ ಮತ್ತು ರೈತರಿಗೆ ತುಂಬ ನಷ್ಟ ಉಂಟಾಗಲಿದೆ. ಈಗಾಗಲೇ ಹಲವು ಕಾರಣಗಳಿಗೆ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರು, ತಿಂಗಳಿಗೆ 20-30 ಸಾವಿರ ವಿದ್ಯುತ್‌ ಬಿಲ್‌ ಕಟ್ಟಲಾಗದೆ, ವಿದ್ಯುತ್‌ ಕಂಪನಿಗಳ ಕಾಟಕ್ಕೆ ಹೆದರಿ ಸಾವಿನ ಹಾದಿ ತುಳಿಯುವುದರಲ್ಲಿ ಅನುಮಾನವಿಲ್ಲ, ಹಾಗಾಗಿ ಸರಕಾರ ವಿದ್ಯುತ್‌ ಖಾಸಗೀಕರಣ ಬಿಲ್‌ ಮಂಡಿಸಬಾರದು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಆನಂದ್‌ ಪಟೇಲ್‌ ನುಡಿದರು.
ರೈತರಿಗೆ ಉಚಿತವಾಗಿ ವಿದ್ಯುತ್‌ ನೀಡುತ್ತಿದ್ದೇವೆ ಎಂಬುದು ಹಸಿ ಸುಳ್ಳು, ಸರಕಾರ ವಿದ್ಯುತ್‌ ತಯಾರಿಸಿದರೂ ಅದನ್ನು ತಮ್ಮ ಪಂಪ್‌ಸೆಟ್‌ಗಳಿಗೆ ತರಲು ಅಗತ್ಯವಾದ ಕಂಬ ಮತ್ತು ವೈರ್‌ನ್ನು ರೈತರು ತಮ್ಮ ಹಣದಲ್ಲಿಯೇ ಭರಿಸಿರುತ್ತಾರೆ, ಒಂದು ವೇಳೆ ಖಾಸಗೀಕರಣವಾದರು ರೈತರು ಮತ್ತು ಸರಕಾರದ ನಡುವೆ ಸಂಪರ್ಕವೇ ಇಲ್ಲದಂತಾಗುತ್ತದೆ. ಹಾಗಾಗಿ ಸರಕಾರ ರೈತರು ಮತ್ತು ಬಡವರಿಗೆ ಮಾರಕವಾಗಿರುವ ವಿದ್ಯುತ್‌ ಖಾಸಗೀಕರಣ ಬಿಲ್‌ನ್ನು ಸಂಸತ್ತಿನಲ್ಲಿ ಮಂಡಿಸಬಾರದು ಎಂಬುದು ನಮ್ಮ ಪ್ರಬಲ ವಿರೋಧವಾಗಿದೆ ಎಂದರು.
ಕೇಂದ್ರ ಸರಕಾರ ಈಗಾಗಲೇ ಬಿಎಸ್‌ಎನ್‌ಎಲ್‌, ರೈಲ್ವೆ, ಏರ್‌ ಇಂಡಿಯಾ ಸೇರಿದಂತೆ ಹಲವಾರು ಸರಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಯವರಿಗೆ ಮಾರಾಟ ಮಾಡಿದೆ. ಈಗ ವಿದ್ಯುತ್‌ ಇಲಾಖೆಯನ್ನು ಮಾರಾಟ ಮಾಡಲು ಹೊರಟಿದೆ. ಇದಕ್ಕೆ ವಿರೋಧ ಪಕ್ಷಗಳು ಅವಕಾಶ ನೀಡಬಾರದು. ಹಾಗಾಗಿ ಇದರ ವಿರುದ್ಧ ಆಗಸ್ಟ್ 10 ರಂದು ನಗರ ಟೌನ್‌ಹಾಲ್‌ ವೃತ್ತದಿಂದ ರೈತರು ಜಿಲ್ಲಾಧಿಕಾರಿಗಳ ಕಚೇರಿವರಗೆ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿದ್ಯುತ್‌ ಮೀಟರ್‌ಗಳನ್ನು ಸುಡುವ ಮೂಲಕ ಪ್ರತಿಭಟನೆ ನಡೆಸಲಿದ್ದು, ಈ ಹೋರಾಟದಲ್ಲಿ ಎಲ್ಲಾ ಸಮುದಾಯದ ಜನರು ಭಾಗವಹಿಸುವ ಮೂಲಕ ಸರಕಾರಕ್ಕೆ ತಮ್ಮ ಪ್ರಬಲ ವಿರೋಧ ವ್ಯಕ್ತಪಡಿಸಬೇಕೆಂದು ಆನಂದ ಪಟೇಲ್‌ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ವಿವಿಧ ತಾಲೂಕು ಅಧ್ಯಕ್ಷರಾದ ಕೋಡ್ಲಹಳ್ಳಿ ಸಿದ್ದರಾಜು, ಕುಣಿಗಲ್‌ ಅನಿಲ್ ಕುಮಾರ್‌, ಪುಟ್ಟರಾಜು, ಕೀರ್ತಿ, ಬಸ್ತಿಹಳ್ಳಿ ರಾಜಣ್ಣ, ರುದ್ರೇಶಗೌಡ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!