ಭ್ರಷ್ಟರು ರಾಜಕಾರಣ ಬಿಟ್ಟು ತೊಲಗಲಿ ಅಭಿಯಾನ

99

Get real time updates directly on you device, subscribe now.

ತುಮಕೂರು: ತ್ಯಾಗ ಮತ್ತು ಬಲಿದಾನದ ಪವಿತ್ರ ಭೂಮಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರಿನಲ್ಲಿ ಆ.8 ರಂದು ಬೆಳಗ್ಗೆ 10.30ಕ್ಕೆ ಭ್ರಷ್ಟರೇ ಪವಿತ್ರವಾದ ರಾಜಕಾರಣ ಬಿಟ್ಟು ತೊಲಗಿ ಅಭಿಯಾನಕ್ಕೆ ಸಾಮಾಜಿಕ ಪರಿವರ್ತನ ಸಮಿತಿ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಎಸ್‌.ಆರ್‌.ಹಿರೇಮಠ್‌ ಚಾಲನೆ ನೀಡುವರು ಎಂದು ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ತಿಳಿಸಿದರು.
ನಗರದ ಬಿ.ಹೆಚ್‌.ರಸ್ತೆಯ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಸೂರಿನಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ದೊರೆಯಲಿದ್ದು, ಈ ಅಭಿಯಾನಕ್ಕೆ ಶುಭ ಕೋರಲು ಹಿರಿಯ ಚಿಂತಕರು, ಗಾಂಧಿ ಕಥನ ಕೃತಿಯ ಲೇಖಕರು ಆದ ಡಿ.ಎಸ್‌.ನಾಗಭೂಷಣ ಆಗಮಿಸಲಿದ್ದಾರೆ ಎಂದರು.
ಕೋವಿಡ್‌ ಹಿನ್ನೆಲೆಯಲ್ಲಿ ಈ ಸಭೆ ಸರಳವಾಗಿ ಮತ್ತು ಸಾಂಕೇತಿಕವಾಗಿ ನಡೆಯಲಿದ್ದು, ಆ.8 ರಿಂದ ಸೆ.8ರ ವರೆಗೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳು ನಗರಗಳಲ್ಲಿ ಈ ಅಭಿಯಾನ ಹಮ್ಮಿಕೊಂಡಿದ್ದು, ಸೆ.8 ರಂದು ತುಮಕೂರು ನಗರದಲ್ಲಿ ಸಮಾರೋಪ ಸಮಾರಂಭ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಇಂದು ದೇಶದಲ್ಲಿ ಮತ್ತು ರಾಜ್ಯದಲ್ಲಿ ಭ್ರಷ್ಟಾಚಾರದ ಏಕೈಕ ಕಾರಣಕ್ಕಾಗಿ ಜನರ ಸಂಕಷ್ಟ ಹೇಳತೀರದಾಗಿದ್ದು, ಪ್ರಜೆಗಳ ಘನತೆಯನ್ನು ಕುಗ್ಗಿಸುವ ಕೆಲಸಗಳು ಹೆಚ್ಚುತ್ತಿವೆ. ಲಂಚ ಕೊಡದೆ ಯಾವುದೆ ಕೆಲಸಗಳು ಆಗುತ್ತಿಲ್ಲ, ಇಂತಹ ಸಂದರ್ಭದಲ್ಲಿ ಭ್ರಷ್ಟರು ಪವಿತ್ರ ರಾಜಕಾರಣ ಬಿಟ್ಟು ತೊಲಗುವುದು ಅನಿವಾರ್ಯವಾಗಿದ್ದು, ಈ ಉದ್ದೇಶಕ್ಕಾಗಿ ರಾಜ್ಯದಾದ್ಯಂತ ಅಭಿಯಾನಕ್ಕೆ ಚಾಲನೆ ನೀಡುತ್ತಿರುವುದಾಗಿ ತಿಳಿಸಿದರು.
ಆ.8, 1942 ಭಾರತ ಇತಿಹಾಸದಲ್ಲಿ ಚಾರಿತ್ರಿಕ ದಿನವಾಗಿದ್ದು, ಮಹಾತ್ಮಗಾಂಧೀಜಿ ಯವರ ಬ್ರಿಟೀಷರೆ ಭಾರತವನ್ನು ಬಿಟ್ಟು ತೊಲಗಿ ಎಂದು ಆದೇಶಿಸಿದ್ದು, ಆ ದಿನದ ಸ್ಪೂರ್ತಿ ಪಡೆದು ಇದೆ ಆ.8 ರಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಭ್ರಷ್ಟರೆ ಪವಿತ್ರ ರಾಜಕಾರಣವನ್ನೆ ಬಿಟ್ಟು ತೊಲಗಿ ಎಂಬ ಜನ ಜಾಗೃತಿ ಆಂದೋಲನ ಹಮ್ಮಿಕೊಂಡಿದೆ ಎಂದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಗಜೇಂದ್ರ ಕುಮಾರಗೌಡ, ಮುಖಂಡರಾದ ಬಷೀರ್‌ ಅಹಮದ್‌, ಜ್ಞಾನಸಿಂಧುಸ್ವಾಮಿ, ಕಿರಣ್‌ಕುಮಾರ್‌ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

Get real time updates directly on you device, subscribe now.

Comments are closed.

error: Content is protected !!