ಸೌಲಭ್ಯ ನೀಡಲು ವಿಳಂಬ ಮಾಡಿದ್ರೆ ಸುಮ್ಮನಿರಲ್ಲ: ಮಾಧುಸ್ವಾಮಿ

351

Get real time updates directly on you device, subscribe now.

ತುಮಕೂರು: ಸರ್ಕಾರಿ ವಲಯದ ನಿಗಮ ಮಂಡಳಿ ಯೋಜನೆಯಡಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಲು ವಿಳಂಬ ಮಾಡಿದರೆ ಅಂತಹ ಬ್ಯಾಂಕ್‌ ವ್ಯವಸ್ಥಾಪಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕಾನೂನು ಸಂಸದೀಯ ವ್ಯವಹಾರ ಮತ್ತು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜರುಗಿದ ಬ್ಯಾಂಕ್‌ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕ್‌ ವ್ಯವಸ್ಥಾಪಕರು ವಿಳಂಬ ಮಾಡುತ್ತಿರುವುದರಿಂದ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಈ ನಿಟ್ಟಿನಲ್ಲಿ ಸೌಲಭ್ಯ ಒದಗಿಸದ ವ್ಯವಸ್ಥಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ನಿಗಮಗಳಿಂದ ಸೌಲಭ್ಯ ಪಡೆಯಲು ಆಯ್ಕೆಯಾದ ಫಲಾನುಭವಿಗಳಿಗೆ ಯೋಜನೆಯ ಫಲ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ದೂರು ಕೇಳಿಬರುತ್ತಿದ್ದು, ಬ್ಯಾಂಕ್‌ಗಳು ಫಲಾನುಭವಿಗಳನ್ನು ಅಲೆದಾಡಿಸದೇ ಸಾಲ ಸೌಲಭ್ಯ ಒದಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 49 ರಾಷ್ಟ್ರೀಕೃತ ಬ್ಯಾಂಕ್‌ಗಳ ಪೈಕಿ ವಾರ್ಷಿಕ ಗುರಿ ನಿಗದಿಯಾಗದಿರುವ ಬ್ಯಾಂಕ್‌ಗಳನ್ನು ಸಾಲ ಒದಗಿಸುವ ಬ್ಯಾಂಕ್‌ಗಳ ಪಟ್ಟಿಯಿಂದ ಕೈ ಬಿಡಬೇಕು, ವಿವಿಧ ಇಲಾಖೆಗಳಡಿ ನೀಡಲಾಗುವ ಸಾಲ ಸೌಲಭ್ಯಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಬೇಕು. ಫಲಾನುಭವಿಗಳಿಗೆ ನಿಯಮಾನುಸಾರ ಸಾಲ ನೀಡಬೇಕು ಎಂದು ಜಿಲ್ಲಾ ಲೀಡ್‌ ಮ್ಯಾನೇಜರ್‌ ಅವರಿಗೆ ಸೂಚಿಸಿದರು.
ತೆಂಗು ಪುನಶ್ಚೇತನಕ್ಕೆ ಒತ್ತು ನೀಡುವ ಉದ್ದೇಶದಿಂದ ತೆಂಗು ಆಧಾರಿತ ಉತ್ಪನ್ನಗಳ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು. ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಮುಂದಾಗಬೇಕು. ಬ್ಯಾಂಕ್‌ಗಳು ಇಂತಹ ಕೈಗಾರಿಕೆಗಳಿಗೆ ಸಾಲ ಸೌಲಭ್ಯ ಒದಗಿಸಬೇಕು. ಆರ್ಥಿಕ ಸಂಕಷ್ಟದಲ್ಲಿರುವ ಕೈಗಾರಿಕೆಗಳಿಗೆ ಅಗತ್ಯವಿರುವ ಸಾಲ ಸೌಲಭ್ಯ ನೆರವು ನೀಡಬೇಕು ಎಂದು ನಿರ್ದೇಶಿಸಿದರು.
ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಮಾತನಾಡಿ, ಪರಿಶಿಷ್ಟ ಜಾತಿ, ವರ್ಗಗಳ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಲು ವಿನಾ ಕಾರಣ ನಿರಾಕರಿಸಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ನಿಗದಿತ ಸಮಯದೊಳಗೆ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸಭೆಯಲ್ಲಿ ಶಾಸಕ ಡಾ.ಎಂ.ಆರ್‌.ರಾಜೇಶ್‌ ಗೌಡ, ವಿಧಾನ ಪರಿಷತ್‌ ಸದಸ್ಯ ಚಿದಾನಂದಗೌಡ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪುರವಾಡ್‌, ಜಿಲ್ಲಾ ಲೀಡ್‌ ಬ್ಯಾಂಕ್‌ನ ಭೈರವಿ ಯಲೂರ್‌ಕರ್‌, ನಬಾರ್ಡ್‌ ಮುಖ್ಯ ವ್ಯವಸ್ಥಾಪಕ ನೀರಜಾ ಕುಮಾರ್‌ ವರ್ಮಾ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ನಿಗಮ ಮಂಡಳಿಗಳ ಜಿಲ್ಲಾ ವ್ಯವಸ್ಥಾಪಕರು, ಜಿಲ್ಲಾ ಹಾಗೂ ತಾಲ್ಲೂಕು ಬ್ಯಾಂಕ್‌ಗಳ ವ್ಯವಸ್ಥಾಪಕರು ಇದ್ದರು.

Get real time updates directly on you device, subscribe now.

Comments are closed.

error: Content is protected !!