ಪಂಚಾಯತಿ ವ್ಯಾಪ್ತಿಯಲ್ಲಿ ಸಾಂಸ್ಕೃತಿಕ ನಿಧಿ ಮೀಸಲಿಡಿ

530

Get real time updates directly on you device, subscribe now.

ತುಮಕೂರು: ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಸಂಸ್ಕೃತಿ ಬೆಳೆಸಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಕನಿಷ್ಟ 5 ಲಕ್ಷ ರೂ. ತಾಲೂಕು ಪಂಚಾಯತ್‌ ವ್ಯಾಪ್ತಿಯಲ್ಲಿ 25 ಲಕ್ಷ ಹಾಗೂ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯಲ್ಲಿ 50 ಲಕ್ಷ ರೂ. ಸಾಂಸ್ಕೃತಿಕ ನಿಧಿಯನ್ನಾಗಿ ಮೀಸಲಿಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಡಿ ಅಧ್ಯಯನ ವರದಿಯ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಅಧಿನಿಯಮ 2010ರಲ್ಲಿ ಅಸ್ತಿತ್ವಕ್ಕೆ ಬಂದಿರುತ್ತದೆ. ರಾಜ್ಯದ 19 ಜಿಲ್ಲೆಯ 63 ತಾಲ್ಲೂಕುಗಳ ಭೌಗೋಳಿಕ ಪ್ರದೇಶಗಳನ್ನು ಗಡಿ ನಾಡೆಂದು ಹಾಗೂ 6 ನೆರೆ ರಾಜ್ಯಗಳಲ್ಲಿನ ಗಡಿಯಲ್ಲಿನ ಕನ್ನಡ ಪರಿಸರದ ಭಾಗಗಳನ್ನು ಸೇರಿಸಿಕೊಂಡು ಆ ಪ್ರದೇಶಗಳನ್ನು ಸಹಾ ಗಡಿ ಭಾಗ ಎಂದು ಗುರುತಿಸಿ ಗಡಿ ಪ್ರದೇಶಗಳನ್ನು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಗೊಳಿಸುವುದು ಪ್ರಾಧಿಕಾರದ ಮೂಲ ಆಶಯವಾಗಿರುತ್ತದೆ ಎಂದು ಹೇಳಿದರು.
ಅಲ್ಲದೆ, ಗಡಿ ಭಾಗದಲ್ಲಿರುವ ಸರ್ಕಾರಿ ಸಂಸ್ಥೆಗಳಲ್ಲದೆ, ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಕನ್ನಡಪರ ಸಂಸ್ಥೆಗಳ ಶಾಲೆಗಳಿಗೆ ಅಗತ್ಯವಾದ ಶಾಲಾ ಕೊಠಡಿ, ಗ್ರಂಥಾಲಯ, ರಸ್ತೆ ಸಂಪರ್ಕ, ಶುದ್ಧ ಕುಡಿಯುವ ಘಟಕ, ನೀರಿನ ಪೀಠೋಪಕರಣ, ಸಾಂಸ್ಕೃತಿಕ ಭವನ ಹಾಗೂ ಇನ್ನಿತರ ಪೂರಕವಾದ ಮೂಲಭೂತ ಸೌಲಭ್ಯ ಒದಗಿಸುವುದರ ಜೊತೆಗೆ ಈ ಭಾಗದಲ್ಲಿ ಕನ್ನಡಪರ ಸಾಂಸ್ಕೃತಿಕ ವಾತಾವರಣ ಉಂಟು ಮಾಡುವುದು, ಕನ್ನಡಪರ ಸಾಹಿತ್ಯ, ಸಂಸ್ಕೃತಿ, ಕಲೆಗಳ ಉತ್ಸವ ಏರ್ಪಡಿಸುವುದು ಪ್ರಾಧಿಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ಜಿಲ್ಲೆಯ ಮಧುಗಿರಿ, ಶಿರಾ ಹಾಗೂ ಪಾವಗಡ ಸೇರಿದಂತೆ ಮೂರು ತಾಲೂಕುಗಳು ಗಡಿ ಭಾಗದ ವ್ಯಾಪ್ತಿಗೆ ಒಳಪಡಲಿದ್ದು, ಈ ತಾಲೂಕುಗಳಲ್ಲಿನ ಗಡಿ ಪ್ರದೇಶಗಳ ಅಭಿವೃದ್ಧಿಗಾಗಿ ಅಲ್ಲಿನ ಆರ್ಥಿಕ, ಕೈಗಾರಿಕಾ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ವಿಶ್ವವಿದ್ಯಾನಿಲಯಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ತಿಂಗಳಿಗೊಮ್ಮೆ ಭೇಟಿ ನೀಡಿ
ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಗಡಿ ಭಾಗದ ಪ್ರದೇಶಗಳ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ, ಜಿಲ್ಲೆಯ ಗಡಿಭಾಗದ ಗ್ರಾಮಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ತಿಂಗಳಿಗೆ ಒಮ್ಮೆಯಾದರೂ ಭೇಟಿ ನೀಡಿ ಕುಂದು ಕೊರತೆಗಳನ್ನು ಆಲಿಸಿ ಜನಸ್ಪಂದನಾ ಸಭೆ ನಡೆಸಿ, ಗಡಿ ಭಾಗದ ಪ್ರದೇಶಗಳ ಅಭಿವೃದ್ಧಿಗೆ ಕ್ರಮವಹಿಸಬೇಕು ಎಂದು ಸೂಚಿಸಿದರು.
ಗಡಿಭಾಗದ ಗ್ರಾಮದ ನಾಮಫಲಕ ಕನ್ನಡದಲ್ಲಿರುವಂತೆ ನೋಡಿಕೊಳ್ಳುವುದರ ಜೊತೆಗೆ ಗಡಿಭಾಗದಲ್ಲಿ ಭಾಷೆ, ಜಾತಿ ಸೇರಿದಂತೆ ಸೂಕ್ಷ್ಮ ವಿಚಾರಗಳಲ್ಲಿ ಸಂಘರ್ಷ ನಡೆಯದಂತೆ ಅನ್ಯ ಭಾಷಿಕರಿಗೆ ಯಾವುದೇ ರೀತಿ ಧಕ್ಕೆಯಾಗದಂತೆ ಉತ್ತಮ ವಾತಾವರಣ ಕಲ್ಪಿಸಬೇಕು ಎಂದು ನಿರ್ದೇಶಿಸಿದರು.
ಗಡಿ ಗ್ರಾಮದ ಶಾಲೆಗಳ ಅಭಿವೃದ್ಧಿಗೆ ಒತ್ತು ಕೊಡಬೇಕು, ಮುಖ್ಯವಾಗಿ ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಬೇಕು. ಜಿಲ್ಲೆಯ ಗಡಿ ಭಾಗದ ಮೂರು ತಾಲೂಕಿನ ಗಡಿ ಗ್ರಾಮದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೆ ಗಮನಕ್ಕೆ ತಂದು ಶಿಕ್ಷಕರ ಹುದ್ದೆಗಳನ್ನು ತುಂಬಲು ಕ್ರಮ ವಹಿಸಬೇಕು. ಗಡಿಭಾಗದ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳ ಸಬಲೀಕರಣ, ಅಲ್ಲಿನ ಸಮಸ್ಯೆಗಳ ಪರಿಹಾರ ಹಾಗೂ ಪಠ್ಯಪುಸ್ತಕ ಸೇರಿ ಮೂಲ ಸೌಲಭ್ಯ ಒದಗಿಸಲು ಕ್ರಮವಹಿಸಬೇಕು ಎಂದು ನಿರ್ದೇಶಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶಹಪುರವಾಡ್‌, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!