ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಿ: ಸಚಿವ

471

Get real time updates directly on you device, subscribe now.

ತುಮಕೂರು: ಸರಕಾರದ ಜನಪರ ಯೋಜನೆಗಳನ್ನು ಕಾರ್ಯಕರ್ತರು ಜನರಿಗೆ ತಿಳಿಸುವ ಮೂಲಕ ಸರಕಾರ ಮತ್ತು ಪಕ್ಷ ಎರಡು ಜೊತೆ ಜೊತೆಗೆ ಹೋಗಬೇಕಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾಪಾರ್ಟಿ ತುಮಕೂರು ನಗರ ಮಂಡಲದ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿ, ವಾಜಪೇಯಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದರೂ 2004ರ ಲೋಕಸಭಾ ಚುನಾವಣೆಯಲ್ಲಿ ಸೋಲಾಯಿತು. ಇದಕ್ಕೆ ಕಾರಣ ಸರಕಾರದ ಕಾರ್ಯಕ್ರಮ ಜನರ ನಡುವೆ ಪ್ರಚಾರವಾಗಲಿಲ್ಲ, ಇದನ್ನು ಸ್ವತಹಃ ವಾಜಪೇಯಿ ಅವರು ಒಪ್ಪಿಕೊಂಡಿದ್ದರು. ಹಾಗಾಗಿ ಪಕ್ಷದ ಕಾರ್ಯಕರ್ತರು ತಮಗೆ ವಹಿಸಿರುವ ಜವಾಬ್ದಾರಿಯನ್ನು ಚಾಚು ತಪ್ಪದೆ ಪಾಲಿಸಿದಾಗ ಮಾತ್ರ ಪಕ್ಷ ಮತ್ತೊಮ್ಮೆ ಜನ ಮನ್ನಣೆ ಗಳಿಸಲು ಸಾಧ್ಯವೆಂದರು.
ಸರಕಾರಗಳು ಎಲ್ಲರ ನಿರೀಕ್ಷೆ ಈಡೇರಿಸಲು ಸಾಧ್ಯವಿಲ್ಲ, ಒಂದಿಲ್ಲೊಂದು ಹೊಸ ಸಮಸ್ಯೆ ಉದ್ಬವವಾಗುತ್ತಲೇ ಇರುತ್ತವೆ. ಅವುಗಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕಿದೆ. ವಿರೋಧ ಪಕ್ಷಗಳ ಟೀಕೆಗೆ ಉತ್ತರ ನೀಡುವುದಕ್ಕೆ ಕಾರ್ಯಕರ್ತರು ಸಿಮಿತವಾಗದೆ, ಸಂಕಷ್ಟದಲ್ಲಿರುವ ಜನರಿಗೆ ತಮ್ಮ ಕೈಲಾದಷ್ಟು ನೆರವು ನೀಡುವ ಮೂಲಕ ಪಕ್ಷದ ಘನತೆ ಹೆಚ್ಚಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಕಿವಿಮಾತು ಹೇಳಿದರು.
ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್‌ ಮಾತನಾಡಿ, 1950ರಲ್ಲಿ ಜನಸಂಘ ಆರಂಭವಾದಾಗ ಇದ್ದ ಉದ್ದೇಶಗಳೇ ಇಂದಿಗೂ ಬಿಜೆಪಿ ಮುಂದುವರೆಸಿಕೊಂಡು ಬಂದಿದೆ. ಹಾಗಾಗಿಯೇ 2 ಸೀಟಿನಿಂದ ನಿರಂತರವಾಗಿ ಅಧಿಕಾರ ಹಿಡಿಯುವ ಮಟ್ಟಿಗೆ ಜನರು ನಮ್ಮನ್ನು ಬೆಳೆಸಿದ್ದಾರೆ. ಕೊರೊನದಿಂದಾಗಿ ಇಂದು ಜನರ ಹೊಟ್ಟೆಪಾಡಿನ ಸ್ಥಿತಿ ಗಂಭೀರವಾಗಿದೆ. ಕೊರೊನ ಎರಡನೇ ಅಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಜನರ ಸಂಕಷ್ಟಗಳಿಗೆ ಸ್ಪಂದಿಸಿದ ರೀತಿ ನಿಜಕ್ಕೂ ಮೆಚ್ಚುವಂತಹದ್ದು ಎಂದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಿವಪ್ರಸಾದ್‌ ಮಾತನಾಡಿ, ಪಕ್ಷವನ್ನು ಸದಾ ಜೀವಂತವಾಗಿಡಲು ಇಂತಹ ಕಾರ್ಯಕಾರಣಿ ಸಭೆಗಳು ಅನಿವಾರ್ಯ, ಪಕ್ಷ ವಹಿಸಿದ ಜವಾಬ್ದಾರಿಯನ್ನು ನೀವು ನಿರ್ಲಕ್ಷಿಸಿದರೆ, ಪಕ್ಷ ನಿಮ್ಮನ್ನು ನಿರ್ಲಕ್ಷಿಸುತ್ತದೆ ಎಂಬುದಕ್ಕೆ ನಮ್ಮ ನಡುವೆ ಹಲವಾರು ಉದಾಹರಣೆಗಳಿವೆ. ಕಾರ್ಯಕರ್ತರಿಂದ ಜನನಾಯಕನಾಗಬೇಕಾದರೆ ಪಕ್ಷದ ಕೆಲಸವನ್ನು ಚಾಚೂ ತಪ್ಪದೆ ಮಾಡಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!