ತಿಪಟೂರು: 15ನೇ ಹಣಕಾಸು ಯೋಜನೆಯಡಿ 226 ಲಕ್ಷ ರೂ. ಹಂಚಿಕೆ ವಿಚಾರದಲ್ಲಿ ಕರೆದಿದ್ದ ವಿಶೇಷ ಸಭೆಯಲ್ಲಿ ಪೌರಾಯುಕ್ತ ಉಮಾಕಾಂತ್ ಉರುಳು ಸೇವೆ ಪ್ರಧಾನ ವಿಚಾರವಾಗಿ ಚರ್ಚೆಯಾದ ಪ್ರಸಂಗ ನಗರಸಭಾ ಕಚೇರಿಯಲ್ಲಿ ನಡೆಯಿತು.
ನಗರಸಭೆ ಅಧ್ಯಕ್ಷ ಪಿ.ಜೆ.ರಾಮ್ಮೋಹನ್ ಅಧ್ಯಕ್ಷತೆಯಲ್ಲಿ 2021-22ನೇ ಸಾಲಿನ ಅಭಿವೃದ್ಧಿ ವಿಚಾರಗಳ ಬಗ್ಗೆ ನಡೆಯಬೇಕಿದ್ದ ಚರ್ಚೆ ಪೌರಾಯುಕ್ತರ ಧಾರ್ಮಿಕ ವಿಚಾರದ ಬಗ್ಗೆ ಹೆಚ್ಚು ಚರ್ಚೆಯಾಗಿದ್ದು ವಿಶೇಷ.
14ನೇ ವಾರ್ಡ್ ಯೋಗೇಶ್ ಈ ವಿಚಾರವನ್ನು ಚರ್ಚೆಗೆ ತಂದು, ಸರ್ಕಾರಿ ಅಧಿಕಾರಿಯಾದ ನೀವು ನಗರಸಭೆ ಸೇವಾ ಅವಧಿಯಲ್ಲಿ ಉರುಳು ಸೇವೆ ಮಾಡಿ ಪ್ರೋಟೋಕಾಲ್ ಉಲ್ಲಂಘನೆ ಮಾಡಿದ್ದೀರಿ ಎಂದು ಆರೋಪಿಸಿದರು.
ಪೌರಾಯುಕ್ತರು ಉತ್ತರಿಸಿ, ಸಂವಿಧಾನದ ಹಕ್ಕಿನ ಬಳಕೆಯೊಂದಿಗೆ 51 ವರ್ಷ ವಯೋಮಿತಿಯಲ್ಲಿ 34 ವರ್ಷ ಸೇವೆಯೊಂದಿಗೆ ಕಾರ್ಯ ನಿರ್ವಹಿಸಿದ್ದೇನೆ. ನನಗೂ ಕೆಲಸದ ಅವಧಿ ಮತ್ತು ತುರ್ತು ನಿರ್ವಹಣೆ ಬಗ್ಗೆ ಜ್ಞಾನವಿದೆ. ಉತ್ತಮ ಸಂಸ್ಕಾರದಿಂದ ಬಂದ ನಾನು ಎಲ್ಲೇ ಕರ್ತವ್ಯ ನಿರ್ವಹಿಸಿದರೂ ಅಲ್ಲಿನ ಅಭಿವೃದ್ಧಿಗೆ ಹಾಗೂ ಧಾರ್ಮಿಕ ವಿಚಾರಗಳಿಗೆ ಒತ್ತು ಕೊಡುತ್ತೇನೆ. ತಿಪಟೂರಿಗೆ ಒಳ್ಳೇದಾಗಲಿ ಎಂದು ನನ್ನ ಧಾರ್ಮಿಕ ವಿಚಾರಗಳನ್ನು ಪಾಲಿಸುವುದು ತಪ್ಪಾ? ನಿಮ್ಮ ನಗರಕ್ಕೆ ಒಳ್ಳೇದಾಗೋದು ಬೇಡ್ವಾ? ಬಿಡುವಿನ ಸಮಯ ದೇವರ ಕೆಲಸಕ್ಕೆ ಬಳಸಿದರೆ ಏನು ತಪ್ಪು? ಎಂದು ಹೇಳಿದರು.
ಅಷ್ಟೇಅಲ್ಲ, ಇದನ್ನು ಪ್ರಶ್ನಿಸುವ ನೀವು ಕೊರೂನಾ ಸಂದರ್ಭದಲ್ಲಿ 61 ಮಂದಿ ಶವಸಂಸ್ಕಾರ ಮಾಡಿದ್ದೇನೆ, ಪ್ರಾತಃ ಕೋವಿಡ್ ಸೆಂಟರ್ಗಳಲ್ಲಿ ಯೋಗ ಹೇಳಿಕೊಟ್ಟಿದ್ದೇನೆ. ಬಾತ್ರೂಂ ಗಳನ್ನು ಸ್ವಚ್ಛಗೊಳಿಸಿದ್ದೇನೆ, ಇದನ್ನೆಲ್ಲಾ ಏಕೆ ಎಂದು ಪ್ರಶ್ನೆ ಮಾಡಿಲ್ಲ ಎಂದು ಪೌರಾಯುಕ್ತರು ಗರಂ ಆದರು.
ಇಷ್ಟಕ್ಕೂ ಸುಮ್ಮನಾಗ ಸದಸ್ಯ ಯೋಗೇಶ್, ನೀವು ನಗರಸಭೆಗೆ ಆಯುಕ್ತರಾಗಿ ಬಂದಿದ್ದೀರಿ, ಹೆಣ ಸುಡುವ ಕೆಲಸ ನಿಮಗೇಕೆ, ಸಂವಿಧಾನ ಬದ್ಧವಾಗಿ ಕೆಲಸ ಮಾಡಿ ಎಂದು ಹೇಳಿದರು, ಎರಡನೇ ವಾರ್ಡ್ನ ನಗರಸಭಾ ಸದಸ್ಯೆ, ಓಹಿಲಾ ಗಂಗಾಧರ್ ಮಾತನಾಡಿ, ಈಚನೂರು ಕೆರೆ ಪೂಜೆಗೆ ನಗರಸಭಾ ಸದಸ್ಯರು ಬಂದರೆ ನಿಮಗೆ ಆಹ್ವಾನ ಇಲ್ಲ ಎಂದು ಹೇಳುತ್ತೀರಿ, ನಾವು ಜನಪ್ರತಿನಿಧಿಗಳೇ ಎಂದು ಪ್ರಶ್ನಿಸಿದರು, ಯೋಗೀಶ್ ಟಾಂಗ್ ನೀಡಿ, ಆಯುಕ್ತರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದೀರಿ, ಇಂಜಿನಿಯರ್ ಮುನಿಸ್ವಾಮಿ ಫೋನಿಗೆ ಸಿಗುವುದಿಲ್ಲ, ದಾರಿದೀಪ ರಿಪೇರಿಗೆ ಕರೆದರೆ ಬೆಸ್ಕಾಂಗೆ ವಿಚಾರಿಸಿ ಎಂದು ಸಿಬ್ಬಂದಿ ಹೇಳುತ್ತಾರಲ್ಲಾ ಏನಿದು ವರ್ತನೆ ಎಂದರು. ಮತ್ತೊಬ್ಬ ಸದಸ್ಯ ಶ್ರೀನಿವಾಸ್ ಮಾತನಾಡಿ, ನಮ್ಮ ವಾರ್ಡ್ಗಳಲ್ಲಿ ಕಂಟ್ರಾಕ್ಟರ್ಗಳು ಮನಸೋ ಇಚ್ಛೆ ಕೆಲಸ ಮಾಡುತ್ತಾರೆ, ಕೇಳಿದರೆ ನೀವು ಮಾತನಾಡಬೇಡಿ.. ಏನು ಕೇಳಬೇಡಿ.. ಎನ್ನುತ್ತಾರೆ ನಂತರ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸುತ್ತಾರೆ ಸದಸ್ಯರಿಗೆ ರಕ್ಷಣೆ ಯಾರು ಕೊಡುತ್ತೀರಿ? ನಗರಸಭಾ ಆಳ್ವಿಕೆ, ಅಧಿಕಾರಿಗಳ ಕೈಯಲ್ಲಿದೆ ಜನಪ್ರತಿನಿಧಿಗಳ ಕೈಯಲ್ಲಿಲ್ಲ ಸರ್ಕಾರ ಇನ್ನು ಟೇಕ್ಆಫ್ ಆಗಿಲ್ಲವಾ ಎಂದರು.
ಮತ್ತೊಬ್ಬ ಸದಸ್ಯ ನದೀಮ್ ಮಾತನಾಡಿ, ಗಾಂಧಿನಗರದ ರಸ್ತೆಗಳು ಗುಂಡಿ ಬಿದ್ದು ಮೂರು ಜನ ಕಾಲು ಮುರಿದುಕೊಂಡಿದ್ದಾರೆ, ಜೀವತೆತ್ತರೆ ನಗರಸಭೆಯಲ್ಲಿ ಎಷ್ಟು ಪರಿಹಾರ ಕೊಡುತ್ತೀರಿ ಎಂದು ಕೇಳಿದರು.
ಸದಸ್ಯ ಮಹೇಶ್ ಮಾತನಾಡಿ, ಶಾಸಕರು, ಅಧ್ಯಕ್ಷರು ಗುದ್ದಲಿ ಪೂಜೆಗೆ ಬಂದಾಗ ಸ್ಥಳೀಯ ಸದಸ್ಯರನ್ನು ಕರೆಯುವುದಿಲ್ಲ ಎಂದು ದೂರಿದರು, ಸದಸ್ಯ ಪ್ರಭು ಮಾತನಾಡಿ, ನಗರದಲ್ಲಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸ್ಥಾಯಿ ಸಮಿತಿ ರಚಿಸಬೇಕು ಎಂದು ಸಲಹೆ ನೀಡಿದರು.
ನೂತನ ನಗರಸಭಾ ಕಟ್ಟಡದ ಆವರಣದಲ್ಲಿ ಗಣಪತಿ ಹೋಮ ಮಾಡಿದ್ದೀರಿ ನಮ್ಮನ್ನು ಕರೆದಿಲ್ಲ ಎಂದು ಓಹಿಲಾ ಗಂಗಾಧರ್ ಕೇಳಿದಾಗ, ಮತ್ತೊಬ್ಬ ಸದಸ್ಯೆ ಪದ್ಮಾ ತಿಮ್ಮೇಗೌಡ ನಮ್ಮನ್ನು ಕರೆದಿದ್ದರು, ನಾವೆಲ್ಲ ಬಂದಿದ್ದೆವು ಎಂದಾಗ ಸುಮ್ಮನೆ ಕೂತ್ಕೊಳ್ಳಿ ಎಂದಾಗ ಸಭೆಯಲ್ಲಿ ಕೆಲ ಸಮಯ ಜಡೆ ಜಗಳ ಶುರುವಾಯಿತು. 19ನೇ ವಾರ್ಡ್ನ ಸದಸ್ಯ ಸಂಗಮೇಶ್ ಮಧ್ಯ ಪ್ರವೇಶಿಸಿ ಸಮಾಧಾನಪಡಿಸಿದರು.
ಪದೇ ಪದೆ ಈಚನೂರು ಕೆರೆ ವಿಚಾರ ಪ್ರಸ್ತಾಪಿಸಬೇಡಿ, ಕೋವಿಡ್ ನಿಯಮವಿದ್ದು ನಿಯಮ ಪಾಲಿಸಿ ಪೂಜೆ ನಡೆದಿದೆ ದಯವಿಟ್ಟು ಸುಮ್ಮನಿರಿ ಎಂದು ಉಪಾಧ್ಯಕ್ಷ ಸೊಪ್ಪು ಗಣೇಶ್ ಮನವಿ ಮಾಡಿದಾಗ ಎಲ್ಲಾ ಸದಸ್ಯರು ಸುಮ್ಮನಾದರು.
ಮಹಿಳಾ ಸದಸ್ಯ ಮೇಘಾ ಭೂಷಣ್ ಮಾತನಾಡಿ, ಸಿಎಂ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಗರಸಭಾ ಸದಸ್ಯರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು. 17ನೇ ವಾರ್ಡ್ನ ಸದಸ್ಯೆ ಟಿ.ಎನ್.ಗಂಗಾ ಆರ್. ಡಿ.ಬಾಬು ಮಾತನಾಡಿ, ಯಾವುದೇ ಸಮಸ್ಯೆ ಹೇಳಿದರೆ ಅರ್ಜಿ ಸಲ್ಲಿಸಿ ಎಂದು ಅಧಿಕಾರಿಗಳು ಹೇಳುತ್ತಾರೆ, ಜನಪ್ರತಿನಿಧಿಗಳಿಗೆ ಈ ರೀತಿ ಹೇಳಿದರೆ ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ಅಧ್ಯಕ್ಷರು ಮುಖ್ಯಮಂತ್ರಿ ಕಾರ್ಯಕ್ರಮ ನಗರಸಭೆಯಲ್ಲಿ ತಿರ್ಮಾನವಾಗುವುದಿಲ್ಲ ಎಂದು ಹೇಳಿ, ನಂತರ ಶಾಸಕರ ಅನುದಾನದಿಂದ ಗುದ್ದಲಿ ಪೂಜೆ ಕಾಮಗಾರಿಗೆ ಸಮಯದ ಅಭಾವದಿಂದ ಕಡೆಗಣಿಸಿರಬಹುದು, ಮುಂದಿನ ಕಾರ್ಯಕ್ರಮದಲ್ಲಿ ಈ ರೀತಿ ಆಗುವುದಿಲ್ಲ ಎಂದರು.
ಅರ್ಜಿ ಇಲ್ಲದೆ ವಿತರಿಸಿದರೆ ಲೆಕ್ಕ ಸರಿಯಾಗಿ ಸಿಗುವುದಿಲ್ಲ , ಆದ್ದರಿಂದ ಅರ್ಜಿ ಮುಖಾಂತರ ವಿತರಿಸುತ್ತೇವೆ ಎಂದು ಉತ್ತರಿಸಿದರು.
ವಿಶೇಷ ಸಭೆಯಲ್ಲಿ, ಸಹಾಯಕ ಕಾರ್ಯಪಾಲಕ ಅಭಿಯಂತಕ ನಾಗೇಶ್, ಪರಿಸರ ವಿಭಾಗದ ರಾಘವೇಂದ್ರ, ವ್ಯವಸ್ಥಾಪಕ ವೆಂಕಟೇಶ್ ಸಹಾಯಕ ಶಾಖೆ ನಿರ್ವಾಹಕ, ಮುರುಳಿ ಹಾಗೂ ನಗರಸಭೆ ಅಧಿಕಾರಿಗಳು ಮತ್ತು ಸಹಾಯಕರು ಇದ್ದರು.
ಕಳಪೆ ರಸ್ತೆಗೆ ಕಿಡಿ..
ನಮ್ಮ ವಾರ್ಡಿನ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ ಮತದಾರರಿಗೆ ಮುಖ ತೋರಿಸಲಾಗದೆ ಮುಖ ಮುಚ್ಚಿಕೊಂಡು ನಡೆದಾಡುತ್ತೇವೆ ಎಂದು ಸದಸ್ಯೆ ನೂರ್ಭಾನು ಹೇಳಿದ ತಕ್ಷಣ ಎದ್ದು ನಿಂತ ಸದಸ್ಯ ಯೋಗೀಶ್, ನೀವು ಬುರ್ಕಾ ಹಾಕಿಕೊಂಡು ಓಡಾಡುತ್ತಿರಿ.. ನಾವುಗಳು ಏನು ಮಾಡಬೇಕು ಎಂದಾಗ ಎಲ್ಲಾ ಸದಸ್ಯರು ನಕ್ಕರು.
ಕೆರಳಿ ಕೆಂಡವಾದ ಅಧ್ಯಕ್ಷ..
14 ನೇ ವಾರ್ಡ್ನ ಸದಸ್ಯಯೋಗೇಶ್ ಮಾತನಾಡುವಾಗ ಅಧ್ಯಕ್ಷರು ಅಧಿಕಾರಿಗಳ ಕೈಗೊಂಬೆಯಾಗಿದ್ದಾರೆ ಎಂದಾಗ ಸಿಟ್ಟಿಗೆದ್ದು ಮಾತನಾಡಿದ ಅಧ್ಯಕ್ಷ ರಾಮ್ ಮೋಹನ್, ನಾನು ಸ್ವಾಭಿಮಾನದಿಂದ ಇದ್ದೇನೆ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ, 31 ವಾರ್ಡ್ಗಳಿಗೂ ಹಾಗೂ ತಿಪಟೂರು ನಗರಸಭೆಗೆ ಅಧ್ಯಕ್ಷ ನಾಗಿದ್ದೇನೆ, ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ, ಸ್ವಲ್ಪ ಯೋಚಿಸಿ ಮಾತನಾಡ್ರಿ ಎಂದು ಆಕ್ರೋಶದಿಂದ ನುಡಿದರು.
Comments are closed.