ಶಾಸಕರು ಫೋಟೊ ಶೂಟ್‌ ರಾಜಕಾರಣ ಬಿಡಲಿ

284

Get real time updates directly on you device, subscribe now.

ಕುಣಿಗಲ್‌: ಶಾಸಕರು ಫೋಟೊ ಶೂಟ್‌ ರಾಜಕಾರಣ ಬಿಟ್ಟು ತಾಲೂಕಿನ ಹೇಮಾವತಿ ಕಾಮಗಾರಿ ಅನುಷ್ಠಾನಕ್ಕೆ ಒತ್ತು ನೀಡಿ, ದೊಡ್ಡಕೆರೆ, ಮಾರ್ಕೋನಹಳ್ಳಿ ಅಚ್ಚುಕಟ್ಟುದಾರರ ಹಿತ ಕಾಪಾಡಲು ಬದ್ಧತೆ ತೋರಬೇಕೆಂದು ರೈತಸಂಘದ ಜಿಲ್ಲಾಧ್ಯಕ್ಷ ಆನಂದ್‌ಪಟೇಲ್‌ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದ ದೊಡ್ಡಕೆರೆ ನೀರು ಕೊಳೆತು ನಾರುತ್ತಿದೆ. ಪಟ್ಟಣದ ಜನತೆಗೆ ಕುಡಿಯಲು ಅದನ್ನೆ ನೀಡುತ್ತಿದ್ದಾರೆ. ಇಷ್ಟಬಂದ ಹಾಗೆ ನೀರಿನ ಫಿಟ್‌ನೆಸ್‌ ಪ್ರಮಾಣಪತ್ರ ಪಡೆಯಲಾಗುತ್ತಿದೆ. 14 ವರ್ಷದಿಂದ ದೊಡ್ಡಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುಗಡೆ ಮಾಡಿಲ್ಲ. ಅಚ್ಚುಕಟ್ಟು ಪ್ರದೇಶಕ್ಕೆಂದು ದೊಡ್ಡಕೆರೆಗೆ ಮೂಲ ಯೋಜನೆಯಂತೆ ನೀರು ಹರಿಸಬೇಕು. ಆದರೆ ಶಾಸಕರ ನಿರ್ಲಕ್ಷ್ಯದಿಂದ ದೊಡ್ಡಕೆರೆಗೆ ನೀರು ಹರಿಸುತ್ತಿಲ್ಲ. ಜವಾಬ್ದಾರಿಯುತ ಜನಪ್ರತಿನಿಧಿಯಾದ ಶಾಸಕರು, ಮೂಲ ಯೋಜನೆಯಂತೆ ದೊಡ್ಡಕೆರೆಗೆ ಹೇಮೆ ನೀರು ಹರಿಸಿ ಅಚ್ಚುಕಟ್ಟು ಪ್ರದೇಶಕ್ಕೆ ಬಿಟ್ಟು ಅಚ್ಚುಕಟ್ಟುದಾರರ ಹಿತ ಕಾಪಾಡಬೇಕು. ಅದು ಬಿಟ್ಟು ಬರುವ ನೀರನ್ನೆಲ್ಲಾ ಕುಡಿಯಲು ಮೀಸಲು ಮಾಡಿದರೆ ಅಚ್ಚುಕಟ್ಟುದಾರ ರೈತರ ಗತಿ ಎನೆಂದು ಯೋಚಿಸಬೇಕು.
ಸೂಕ್ತ ಮಾಹಿತಿ ಇಲ್ಲದ ರೀತಿ ಶಾಸಕರು ವರ್ತಿಸುವುದು ತಪ್ಪು, ಶ್ರೀರಂಗ ಏತ ನೀರಾವರಿ ಹೆಸರಲ್ಲಿ ಹುತ್ರಿದುರ್ಗ ಹೋಬಳಿ ಜನತೆಗೆ ನಾಮ ಹಾಕಲಾಗಿದೆ. ಈಗ ಬೇರೆ ಬೇರೆ ಯೋಜನೆ ಹೆಸರಲ್ಲಿ ತಾಲೂಕಿನ ಜನತೆಗೆ ನಾಮ ಹಾಕುವುದು ಬಿಟ್ಟು ಮೂಲ ಯೋಜನೆಯಂತೆ ಟಿಬಿಸಿ ಮುಖ್ಯನಾಲೆಯ 228 ಕಿ.ಮೀ ಹಾಗೂ ವಿತರಣೆ ನಾಲಾ 26 ಕಿ.ಮೀ ಕಾಮಗಾರಿ ಚುರುಕುಗೊಳಿಸಲು ಶ್ರಮಿಸಬೇಕು. ನಾಲಾ ಕಾಮಗಾರಿಗೆ ವಶಪಡಿಸಿಕೊಂಡಿರುವ ರೈತರ ಜಮೀನಿಗೆ ಪರಿಹಾರ ನೀಡುವತ್ತ ಗಮನ ಹರಿಸಬೇಕು. ದೊಡ್ಡಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ಹಾಲಿ ಇರುವ 264 ಎಂಸಿಎಫ್‌ಟಿ ನೀರು ಬೆಳೆ ಬೆಳೆಯಲು ಹರಿಸಿ, ಕೆರೆಯ ನಿಗದಿತ ಪ್ರಮಾಣ ನೀರು ಹರಿಸಿ ಕೆರೆ ತುಂಬಿಸಬೇಕು, ಇಲ್ಲವಾದಲ್ಲಿ ರೈತರ ಹಿತರಕ್ಷಣೆಗೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಅನಿಲ್ ಕುಮಾರ್‌, ಪದಾಧಿಕಾರಿಗಳಾದ ತಿಮ್ಮೇಗೌಡ, ಕುಮಾರ, ದಿಲೀಪ್‌, ವೆಂಕಟೇಶ್‌, ರಾಜೇಶ್‌, ರಂಗಸ್ವಾಮಿ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!