ಹುಳಿಯಾರು: ಸರ್ಕಾರಿ ಶಾಲೆಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕರೆ ಉತ್ತಮ ಸಾಧನೆ ಮಾಡಬಲ್ಲರು ಎಂಬುದನ್ನು ಹುಳಿಯಾರು- ಕೆಂಕೆರೆ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರಾದ ಡಿ.ಧನುಶ್ರೀ ಹಾಗೂ ಡಿ.ಧನ್ಯಶ್ರೀ ಅವಳಿಗಳಿಬ್ಬರೂ ಎಸ್‌ಎಸ್‌ಎಲ್‌ಸಿಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮುವ ಮೂಲಕ ಉತ್ತಮ ಸಾಧನೆಗೈದಿದ್ದಾರೆ.
ಸರ್ಕಾರಿ ಶಾಲೆಗಳಿಗೆ ಸೇರುವವರು ಡಲ್ ಸ್ಟೂಡೆಂಟ್ಸ್, ಸರ್ಕಾರಿ ಶಾಲೆಯ ವಿದ್ಯಾಭ್ಯಾಸವೂ ಅಷ್ಟಕಷ್ಟೆ ಎಂದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಅದರಲ್ಲೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೆಂದರೆ ಮೂಗು ಮುರಿಯುವವವರೇ ಹೆಚ್ಚು. ಆದರೆ ಹುಳಿಯಾರು ಹೋಬಳಿಯ ಯಳನಾಡು ಗ್ರಾಮದ ಜೆಸಿಬಿ ದಯಾನಂದ್ ಹಾಗೂ ಎಸ್.ಸುಜಾತ ದಂಪತಿಯ ಅವಳಿ ಮಕ್ಕಳು ಈ ಸಾಧನೆ ಮಾಡಿ ಟೀಕಾಕಾರರ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ.
ಉತ್ತಮ ಕಲಿಕಾ ವಾತವರಣ ಇದ್ದರೆ ಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೂ ನಗರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆಗೆ ಇಳಿಯುತ್ತಾರೆ. ಅಷ್ಟೆ ಏಕೆ ಅವರನ್ನೂ ಮೀರಿಸಿ ಸಾಧನೆಗೈಯುತ್ತಾರೆ ಎಂಬುದನ್ನು ಇತ್ತಿಚಿನ ದಿನಗಳಲ್ಲಿ ರುಜುವಾತು ಆಗುತ್ತಿದೆ. ಇದಕ್ಕೆ 2019ರಲ್ಲಿ ವಿದ್ಯಾವಾರಿಧಿ ಶಾಲೆಯ ಯಶಸ್ ಸಿಬಿಎಸ್‌ಸಿ ರಾಜ್ಯ ಟಾಪರ್ ಆಗಿದ್ದರು, ಈಗ ಡಿ.ಧನುಶ್ರೀ ಹಾಗೂ ಡಿ.ಧನ್ಯಶ್ರೀ ಅವಳಿಗಳಿಬ್ಬರೂ ಟಾಪರ್ ಆಗಿದ್ದಾರೆ. ಅಲ್ಲದೆ ಅವಳಿಗಳಿಬ್ಬರೂ ಸಮ ಅಂಕಗಳನ್ನು ಪಡೆದು ಟಾಪರ್ ಆಗಿ ವಿಶೇಷ ಸಾಧನೆ ಮಾಡಿದ್ದಾರೆ.
ಕೋವಿಡ್‌ನಿಂದಾಗುತ್ತಿದ್ದ ಸಾವು ನೋವು ನೋಡಿದ ಇವರಿಬ್ಬರೂ ಡಾಕ್ಟರ್ ಆದ್ರೆ ಮಾತ್ರ ಜನರ ಜೀವ ಉಳಿಸಲು ಸಾಧ್ಯ ಎಂದು ನಿರ್ಧರಿಸಿದರು. ತಮ್ಮ ಮುಂದಿನ ಗುರಿ ಡಾಕ್ಟರ್ ಎಂದು ಸಂಕಲ್ಪ ಮಾಡಿ ಪೋಷಕರು, ಶಿಕ್ಷಕರು ಹಾಗೂ ವೈದ್ಯ ಸೋದರನಿಂದ ಗುರಿ ಮುಟ್ಟುವ ಸೂಕ್ತ ಸಲಹೆ ಸೂಚನೆ ಪಡೆದುಕೊಂಡರು. ಅದರಂತೆ ಕಷ್ಟ ಮತ್ತು ಇಷ್ಟದಿಂದ ಓದಿದ ಪರಿಣಾಮ ನಿಬ್ಬೆರಗಾಗುವ ಫಲಿತಾಂಶ ಪಡೆದಿದ್ದಾರೆ. ಒಟ್ಟಾರೆ ಹುಳಿಯಾರು ಇತಿಹಾಸದಲ್ಲೇ ಅತ್ಯುತ್ತಮ ಸಾಧನೆ ಮಾಡಿದ ಇವರಿಬ್ಬರೂ ಅಭಿನಂದನಾರ್ಹರು.
ಸುರೇಶ್ ಕುಮಾರ್ ಗೆ ಅಭಿನಂದನೆ
ಕೋವಿಡ್ ಕಾರಣವೊಡ್ಡಿ ಪರೀಕ್ಷೆ ರದ್ದು ಮಾಡುವ ಒತ್ತಡ ಹೆಚ್ಚಾಗಿತ್ತು. ಹೀಗೆ ರದ್ದು ಮಾಡಿ ಎಲ್ಲರನ್ನೂ ಪರೀಕ್ಷೆಯಿಲ್ಲದೆ ಪಾಸ್ ಮಾಡಿದ್ದರೆ ನೈಜ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗುತ್ತಿರಲಿಲ್ಲ, ಸುರೇಶ್ ಕುಮಾರ್ ಅವರು 40 ಅಂಕಗಳಿಗಾಗಲಿ ಪರೀಕ್ಷೆ ಮಾಡಿಯೇ ಸಿದ್ದವೆಂದು ಪರೀಕ್ಷೆ ನಡೆಸಿದರ ಪರಿಣಾಮ ನಮ್ಮ ಪ್ರತಿಭೆ ಇಂದು ಬೆಳಕಿಗೆ ಬಂದಿದೆ. ಹಾಗಾಗಿ ಸುರೇಶ್ ಕುಮಾರ್ ಅವರಿಗೆ ನಾವಿಬ್ಬರೂ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ಶಿಕ್ಷಕರು ಕಾಳಜಿಯಿಂದ ಸಾಧನೆ
ಕೋವಿಡ್‌ನಿಂದ ಕಲಿಕೆಗೆ ತೊಂದರೆಯಾಗಿತ್ತು, ಶಾಲೆಯ ಶಿಕ್ಷಕರು ಹಾಗೂ ಟೂಷನ್ ಶಿಕ್ಷಕರು ಪ್ರೋತ್ಸಾಹ ನೀಡಿದರು. ಆನ್‌ಲೈನ್ ತರಗತಿ ಮಾಡುವ ಜೊತೆಗೆ ನಿತ್ಯ ಫೋನ್ ಮಾಡಿ ಕಲಿಕೆಯ ಬಗ್ಗೆ ವಿಚಾರಿಸುತ್ತಿದ್ದರು. ಅಲ್ಲದೆ ದೂರವಾಣಿ ಮೂಲಕವೇ ಅನುಮಾನ ಬಗೆಹರಿಸುತ್ತಿದ್ದರು. ಪರೀಕ್ಷೆಗೆ ಸಿದ್ಧತೆ ಆಗುವ ಬಗ್ಗೆ ಉಪಯುಕ್ತ ಸಲಹೆ ನೀಡುತ್ತಿದ್ದರು. ತಂದೆ ತಾಯಿ ಕೂಡ ಬೆಳಗ್ಗೆ ಬೇಗ ಏಳಿಸಿ ಕಲಿಕೆಗೆ ಉತ್ತೇಜನ ನೀಡುತ್ತಿದ್ದರು ಎಂದು ಸಾಧಕ ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
Comments are closed.