ದೇಶಕ್ಕೆ ಸ್ವಾತಂತ್ರ್ಯ ಬರುವಲ್ಲಿ ಕಾಂಗ್ರೆಸ್‌ ಕೊಡುಗೆ ಇದೆ: ರಫಿಕ್

503

Get real time updates directly on you device, subscribe now.

ತುಮಕೂರು: ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಕಾಂಗ್ರೆಸ್‌ ಪಕ್ಷದ ಪಾತ್ರ ಮಹತ್ವದ್ದಾಗಿದೆ ಎಂದು ಮಾಜಿ ಶಾಸಕ ಡಾ. ರಫೀಕ್‌ ಅಹಮದ್‌ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಅಂದಿನ ಕಾಂಗ್ರೆಸ್‌ ನಾಯಕರೊಂದಿಗೆ ಸೇರಿ ಮಹಾತ್ಮ ಗಾಂಧೀಜಿಯವರು ಪ್ರಾರಂಭಿಸಿದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯ ಇಡೀ ಸ್ವಾತಂತ್ರ ಹೋರಾಟದಲ್ಲಿಯೇ ಮಾಡು ಇಲ್ಲವೇ ಮಡಿ ಚಳವಳಿಯಾಗಿತ್ತು ಎಂದರು.
1885ರ ಡಿಸೆಂಬರ್‌ 25 ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಅಖಿಲ ಭಾರತ ಕಾಂಗ್ರೆಸ್‌ ಪಕ್ಷ ಸಂಸ್ಥಾಪನೆಯಾಯಿತು. ಅಂದಿನಿಂದ 1947ರ ಆ. 15ರ ವರೆಗೆ ಸತತವಾಗಿ ಚಳವಳಿಗಳನ್ನು ಮಾಡಿಕೊಂಡು ಬ್ರಿಟಿಷರನ್ನು ಎದುರಿಸುತ್ತಾ ಅನೇಕರು ತಮ್ಮ ಪ್ರಾಣ ಕಳೆದುಕೊಂಡು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿರಿ ಎಂಬ ಘೋಷಣೆಯೊಂದಿಗೆ ಆರಂಭಿಸಿದ ಕ್ವಿಟ್‌ ಇಂಡಿಯಾ ಚಳವಳಿ ಬ್ರಿಟಿಷರಿಗೆ ಭಾರೀ ತಲೆನೋವಾಗಿ ಪರಿಣಮಿಸಿದ್ದರಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು ಎಂದರು.
ನಮಗೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಲ್ಲಿ ದೇಶದಲ್ಲಿ ಬಹುಪಾಲು ಅಧಿಕಾರ ನಡೆಸಿದ್ದು ಕಾಂಗ್ರೆಸ್‌ ಪಕ್ಷ, ದೇಶದ ಜನರ ಆಗು ಹೋಗುಗಳಿಗೆ ಸ್ಪಂದಿಸುತ್ತಾ ಸುಮಾರು 65 ವರ್ಷಗಳ ಕಾಲ ಆಡಳಿತ ನಡೆಸಿ ದೇಶದ ಅಭಿವೃದ್ಧಿ ತನ್ನದೆ ಆದ ಕೊಡುಗೆ ನೀಡಿದೆ, ಕಾಂಗ್ರೆಸ್‌ ಪಕ್ಷದ ಸಿದ್ಧಾಂತಗಳನ್ನು ಜನರ ಮುಂದೆ ಇಟ್ಟು ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.
ಮುಂದಿನ ನಾಲ್ಕೈದು ತಿಂಗಳಲ್ಲಿ ಜಿಪಂ ಮತ್ತು ತಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದ್ದು, ಈ ಚುನಾವಣೆಗಳಲ್ಲೂ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು. ಈ ಹಿಂದೆ ಕಾಂಗ್ರೆಸ್‌ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿದ್ದಾಗ ಜಾರಿಗೆ ತಂದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಾಗಿದೆ ಎಂದು ಡಾ.ರಫೀಕ್‌ ಅಹಮದ್‌ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ ಮಾತನಾಡಿ, 1885 ರಲ್ಲಿ ಕಾಂಗ್ರೆಸ್‌ ಪಕ್ಷ ಸ್ಥಾಪನೆಯಾಗಿ ಅಂದಿನಿಂದ ಪಕ್ಷದ ಅನೇಕ ಮಂದಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ್ದಾರೆ. ಮಹಾತ್ಮ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ, ಕ್ವಿಟ್‌ ಇಂಡಿಯಾ ಚಳವಳಿ ಹೊರ ದೇಶದಿಂದ ಬಂದಿದ್ದ ಬ್ರಿಟಿಷರನ್ನು ಓಡಿಸಲು ತುಂಬಾ ಪರಿಣಾಮಕಾರಿಯಾಗಿತ್ತು ಎಂದರು.
ಮುಖಂಡರಾದ ಹೆಚ್‌.ಸಿ.ಹನುಮಂತಯ್ಯ, ರೇವಣಸಿದ್ದಯ್ಯ, ಪಾಲಿಕೆ ಸದಸ್ಯ ನಯಾಜ್‌ ಅಹಮದ್‌, ಆಟೋರಾಜು, ಮೆಹಬೂಬ್‌ ಪಾಷ, ಅಬ್ದುಲ್‌ ರಹೀಂ, ಮಂಜುನಾಥ್‌, ವಕ್ತಾರರಾದ ಸುಜಾತ, ನಾಗಮಣಿ, ಗೀತಮ್ಮ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!