ಸಾರ್ವಜನಿಕರಿಗೆ ಖಾತಾ ನಕಲು ನೀಡುವಲ್ಲಿ ನಿರ್ಲಕ್ಷ್ಯ

ಕಂದಾಯ ಶಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ

303

Get real time updates directly on you device, subscribe now.

ಕುಣಿಗಲ್‌: ಸಾರ್ವಜನಿಕರಿಗೆ ಖಾತಾ ನಕಲು ನೀಡುವಲ್ಲಿ ಪುರಸಭೆ ಕಂದಾಯ ಶಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆಂದು, ಕಾನೂನು ನೆಪ ಹೇಳಿಕೊಂಡು ಎಲ್ಲರ ಶೋಷಣೆ ಮಾಡುತ್ತಾ ದಂಧೆ ನಡೆಸುತ್ತಿದ್ದಾರೆಂದು ಪಕ್ಷಭೇದ ಮರೆತು ಸದಸ್ಯರು ಆರೋಪಿಸಿದ ಕಾರಣ ಕೆಲ ಕಾಲ ಸಾಮಾನ್ಯ ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾದ ಘಟನೆ ನಡೆಯಿತು.
ಪುರಸಭೆ ಅಧ್ಯಕ್ಷ ನಾಗೇಂದ್ರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯಸಭೆಯಲ್ಲಿ ಖಾತಾ ನಕಲು ನೀಡದಿರುವ ಬಗ್ಗೆ ಸದಸ್ಯರಾದ ರಂಗಸ್ವಾಮಿ, ಕೃಷ್ಣ, ರಾಮು, ಶ್ರೀನಿವಾಸ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಸದಸ್ಯ ರಂಗಸ್ವಾಮಿ, ಕೃಷ್ಣ, ಶ್ರೀನಿವಾಸ, ರಾಮು, ದೇವರಾಜು, ಮಲ್ಲಿಪಾಳ್ಯಶ್ರೀನಿವಾಸ್‌, ಸದಸ್ಯರು ಖಾತಾ ನಕಲು ಕೇಳಿದರೆ ಕೊಡೊಲ್ಲ, ಆದರೆ ಕೆಲ ದಲ್ಲಾಳಿಗಳು ಕೇಳಿದರೆ ಕೊಡುತ್ತಾರೆ, ಇದು ಹೇಗೆ, ದಲ್ಲಾಳಿಗಳ ಮೂಲಕ ಖಾತಾ ನಕಲು ಪಡೆಯುವ ಬಗ್ಗೆ ಸಾರ್ವಜನಿಕರು ಸದಸ್ಯರಿಗೆ ಛೀಮಾರಿ ಹಾಕುತ್ತಾರೆ. ದಲ್ಲಾಳಿಗಳಿಂದ ಖಾತಾ ನಕಲು ವಿತರಣೆ ಹಿಂದೆ ಅಧಿಕಾರಿಗಳು, ದಲ್ಲಾಳಿಗಳ ದಂಧೆ ವ್ಯವಹಾರ ಇದೆ, ಸದಸ್ಯರಿಗೆ ಬೆಲೆ ಇಲ್ಲವೆ ಎಂದು ತರಾಟೆಗೆ ತೆಗೆದುಕೊಂಡರು.
ಸದಸ್ಯ ಕೃಷ್ಣ ಅಧಿಕಾರಿಗಳು ಮನಬಂದಂತೆ ತೆರಿಗೆ ಹಾಕುತ್ತಾರೆ, ನಾಲ್ಕು ಮಳಿಗೆ ಕಟ್ಟಡಕ್ಕೆ ಅರವತ್ತು ಸಾವಿರ ತೆರಿಗೆ, ಅಲ್ಪಸಂಖ್ಯಾತ ವರ್ಗ ನಿರ್ಮಿಸಿರುವ 120 ಅಂಗಡಿಗೂ ಅರವತ್ತು ಸಾವಿರ, ಅಧಿಕಾರಿಗಳು ಜಾತಿ ಓಲೈಸಿ ತೆರಿಗೆ ಹಾಕಿದರೆ ಸಾಮಾಜಿಕ ನ್ಯಾಯ ಪಾಲನೆ ಆಗುತ್ತದಾ, ಒಬ್ಬರಿಗೆ ಒಂದು ರೀತಿ ತೆರಿಗೆ ಹಾಕಿ ತಾರತಮ್ಯ ಮಾಡಲಾಗುತ್ತಿದೆ, ಖಾತಾ ನಕಲು ನೀಡಲು ಕ್ರಮಕ್ಕೆ ಆಗ್ರಹಿಸಿದರು. ಈ ವೇಳೆ ಕಂದಾಯಾಧಿಕಾರಿ ಜಗರೆಡ್ಡಿ ನಿಯಮ ಪಾಲನೆ ಬಗ್ಗೆ ಹೇಳಿದಾಗ ಸದಸ್ಯರು, ಅಧಿಕಾರಿ ನಡುವೆ ವಾಗ್ವಾದ ನಡೆದು ಮುಖ್ಯಾಧಿಕಾರಿ ರವಿಕುಮಾರ್‌ ಸೂಕ್ತ ಕ್ರಮ ವಹಿಸುವ ಭರವಸೆ ನೀಡಿ ತಿಳಿಗೊಳಿಸಿದರು.
ಸಭೆಯಲ್ಲಿ ಅತ್ಯಧಿಕ ಆಸ್ತಿ ತೆರಿಗೆ ದರ ವಿಧಿಸಿರುವ ಬಗ್ಗೆ ಚರ್ಚೆ ನಡೆದು ಆಸ್ತಿ ತೆರಿಗೆ ಹೆಚ್ಚಳ ಕಡಿಮೆ ಮಾಡುವ ಬಗ್ಗೆ ಯಾವುದೆ ಒಮ್ಮತದ ನಿರ್ಧಾರವಾಗಲಿಲ್ಲ, ಪುರಸಭೆ ಸದಸ್ಯರ ಗಮನಕ್ಕೆ ತಾರದೆ ಪಂಪ್‌ ಮೋಟಾರು ರಿಪೇರಿ ಟೆಂಡರ್‌ ನಡೆಸಿದ್ದು ಸದಸ್ಯರಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ, ಪುರಸಭೆಯಲ್ಲಿ ಅಧಿಕಾರಿಗಳ ಅಂಧಾ ದರ್ಬಾರ್‌ ನಡೆಯುತ್ತಿದೆ, ಅಧ್ಯಕ್ಷರನ್ನು ಕಡೆಗಣಿಸಲಾಗಿದೆ ಎಂದು ಸದಸ್ಯ ರಂಗಸ್ವಾಮಿ, ಕೃಷ್ಣ ಇತರರು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಾಧಿಕಾರಿ ನಿಯಮ ಉಲ್ಲಂಘಿಸಿಲ್ಲ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಟೆಂಡರ್‌ ನಡೆಸಲಾಗುವುದು, ಯಾವುದೇ ಸದಸ್ಯರಿಗೆ ಅಗೌರವ ತೋರಿಲ್ಲ ಎಂದರು.
ಅಂತಿಮವಾಗಿ ಇ-ಖಾತೆ ಸರಿಹೋಗುವ ವರೆಗೂ ಕೈ ಬರಹದ ಖಾತಾ ನಕಲು ನೀಡಲು ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ವಿಷಯಗಳ ಮೇಲೆ ಚರ್ಚೆ ನಡೆದು ನಿರ್ಣಯ ಅಂಗಿಕರಿಸಿದರು.
ಪಟ್ಟಣದಲ್ಲಿ ಪೂರೈಕೆ ಮಾಡಲಾಗುತ್ತಿರುವ ಕುಡಿಯುವ ನೀರು ಶುದ್ಧೀಕರಿಸುತ್ತಿಲ್ಲ, ಹುಳು ಮಿಶ್ರಿತ ನೀರು ಪೂರೈಕೆ ಆಗುತ್ತಿದೆ, ತಪಾಸಣೆ ಮಾಡದ ಕ್ರಮ ಖಂಡಿಸಿದ ಸದಸ್ಯ ಕೋಟೆನಾಗಣ್ಣ, ಇದುವರೆಗೂ ಕುಡಿಯುವ ನೀರು ಪೂರೈಕೆ ಮಾಡಿದ ವರದಿ ನೀಡುವಂತೆ ಒತ್ತಾಯಿಸಿದಾಗ ಅಧಿಕಾರಿಗಳು ವರದಿ ನೀಡದೆ ಇರುವುದನ್ನು ಖಂಡಿಸಿದ ಸದಸ್ಯ ಕೋಟೆ ನಾಗಣ್ಣ ಸಭೆ ಬಹಿಷ್ಕರಿಸಿ ಹೊರನಡೆದರು.
ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಸಮೀವುಲ್ಲಾ, ಅಭಿಯಂತರರಾದ ಸುಮ, ಚಂದ್ರಶೇಖರ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!