ತುಮಕೂರು: ಬ್ಲೂ ಬೇಬಿ ಸಿಂಡ್ರೋಮ್ ಹೊಂದಿದ ಆರೂವರೆ ವರ್ಷದ ಬಾಲಕಿಗೆ ಸಿದ್ಧಾರ್ಥ ಹಾರ್ಟ್ ಸೆಂಟರ್ ನಲ್ಲಿ ನಡೆಸಲಾದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಇದೊಂದು ಐತಿಹಾಸಿಕ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಮೈಲಿಗಲ್ಲು ಎಂದು ಸಾಹೇ ಕುಲಾಧಿಪತಿ ಡಾ.ಜಿ.ಪರಮೇಶ್ವರ ತಿಳಿಸಿದರು.
ನಗರದ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಟ್ಟಿನಿಂದಲೇ ಬ್ಲೂ ಬೇಬಿ ಸಿಂಡ್ರೋಮ್ ಹೊಂದಿದ ಬಾಲಕಿಗೆ ಉಚಿತವಾಗಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಮೂಲತಃ ಈ ಮಗು ತುಮಕೂರು ಜಿಲ್ಲೆಯವರಾಗಿದ್ದು, ಶಸ್ತ್ರ ಚಿಕಿತ್ಸೆಯು ಸುದೀರ್ಘವಾಗಿ 5 ಗಂಟೆ ಕಾಲ ನಡೆಸಲಾಯಿತು. ಮಗುವು ಸಂಪೂರ್ಣವಾಗಿ ಆರೋಗ್ಯವಾಗಿದೆ ಎಂದರು.
ತುಮಕೂರಿನಿಂದ ಶಿವಮೊಗ್ಗ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಯಾವುದೇ ಹಾರ್ಟ್ ಸೆಂಟರ್ ಇಲ್ಲದೆ ಇರುವುದು ಬೇಸರ ಸಂಗತಿಯಾಗಿತ್ತು, ಆದರೆ ಕಳೆದ ಒಂದು ವರ್ಷದಿಂದ ತುಮಕೂರು ಜಿಲ್ಲೆಯ ಹಾಗೂ ಸುತ್ತಮುತ್ತ ಜನಸಾಮಾನ್ಯರಿಗೆ ಹಾರ್ಟ್ ಸೆಂಟರ್ ತೆರೆದು ಆಸ್ಪತ್ರೆಯಲ್ಲಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿರುವುದಕ್ಕೆ ರೋಗಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿರುವುದನ್ನು ನೋಡಿದರೆ ಆಸ್ಪತ್ರೆಯ ನಿರ್ಮಾಣಕ್ಕೆ ಸಾರ್ಥಕತೆ ಬಂದಂತಾಗಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಮುನ್ನೆಚ್ಚೆರಿಕೆ ಕ್ರಮವಾಗಿ ಕಾರ್ಡಿಯಾಕ್ ಪೊಂಟಿಟ್ ವಿಭಾಗದಲ್ಲಿ 60 ಐಸಿಯು ಬೆಡ್‌ಗಳನ್ನು ತೆರೆಯಲಾಗಿದೆ, ಅತಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳ ಸೇವೆ ಆಸ್ಪತ್ರೆಯಲ್ಲಿ ದೊರೆಯಲಿದೆ. ವಿಮಾ ಯೋಜನೆಗಳನ್ನೂ ಅಳವಡಿಸಿಕೊಳ್ಳಲಾಗಿದೆ, ಇದನ್ನು ಜನ ಸಾಮಾನ್ಯರು ಬಳಸಿಕೊಳ್ಳಬಹುದು ಎಂದು ಡಾ.ಜಿ.ಪರಮೇಶ್ವರ ಮನವಿ ಮಾಡಿದರು.
ಸಮಾಜದ ಕಟ್ಟಕಡೆಯ ಬಡಜನರಿಗೆ ಸಂಕಷ್ಟ ಕಾಲದಲ್ಲಿ ಆರೋಗ್ಯ ಸೇವೆ ಸಕಾಲದಲ್ಲಿ ದೊರೆಯಲಿ ಎಂಬ ಗುರಿಯನ್ನು ಆಸ್ಪತ್ರೆ ಹೊಂದಿದೆ, ಗ್ರಾಮಾಂತರ ಪ್ರದೇಶದ ಜನ ದೂರದ ಮಹಾ ನಗರಗಳಿಗೆ ತೆರಳಿ ದುಬಾರಿ ಖರ್ಚು ವೆಚ್ಚಗಳಿಗೆ ಸಿಲುಕಿಕೊಳ್ಳಬಾರದು ಎಂಬ ಉದ್ದೇಶದಿಂದ ಜನ ಸಾಮಾನ್ಯರಿಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡುವ ಗುರಿಯಿಂದ ಆರಂಭಿಸಲಾದ ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಚಿಕಿತ್ಸೆ ಕೈಕೆಟುವ ಮಟ್ಟದಲ್ಲಿ ನೀಡುತ್ತಿರುವುದು ಹರ್ಷ ತಂದಿದೆ ಎಂದರು.
ಕಾರ್ಡಿಯಾಕ್ ಫೊಂಟಿಟ್ ಸಂಸ್ಥೆಯ ನಿರ್ದೇಶಕ ತಮೀಮ್ ಅಹಮದ್ ಮಾತನಾಡಿ, ಇದೇ ಆಗಸ್ಟ್ 6 ರಂದು ಬ್ಲೂ ಬೇಬಿ ಸಿಂಡ್ರೋಮ್ ಹೊಂದಿದ ಬಾಲಕಿಗೆ ಉಚಿತವಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ವಿಪರ್ಯಾಸವೆಂದರೆ ಈ ಮಗುವಿಗೆ ತಾಯಿ ಇಲ್ಲ, ಅದರ ಆರೈಕೆ ಸಂಬಂಧಿಕರು ವಯಿಸಿದ್ದು, ಮಗುವು ಸಂಪೂರ್ಣವಾಗಿ ಆರೋಗ್ಯಕರವಾಗಿದೆ ಎಂದರು.
ಹಾರ್ಟ್ ಸೆಂಟರ್ ನಲ್ಲಿ ಈವರೆಗೂ ಸುಮಾರು 27ಕ್ಕೂ ಹೆಚ್ಚು ತೆರೆದ ಹೃದಯ ಶಸ್ತ್ರಚಿಕಿತ್ಸೆ, 50ಕ್ಕೂ ಹೆಚ್ಚು ಆಂಜಿಯೋಪ್ಲಾಸ್ಟಿ, ಆಂಜಿಯೋಗ್ರಾಮ್ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಾರ್ಟ್ ಸೆಂಟರ್ ನ ಸಿಇಓ ಡಾ.ಪ್ರಭಾಕರ್, ವೈದ್ಯಕೀಯ ಮಹಾವಿದ್ಯಾಲಯದ ಸಿಇಓ ಡಾ.ದೇವದಾಸ್, ಪ್ರಾಂಶುಪಾಲ ಡಾ.ಎ.ಜಿ.ಶ್ರೀನಿವಾಸಮೂರ್ತಿ ಭಾಗವಹಿಸಿದ್ದರು.
ಸಿದ್ದಾರ್ಥ ಆಸ್ಪತ್ರೆಯಲ್ಲಿ ಬಾಲಕಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ
ಅಪರೂಪದ ಚಿಕಿತ್ಸೆಗೆ ಡಾ.ಪರಮೇಶ್ವರ್ ಮೆಚ್ಚುಗೆ
Get real time updates directly on you device, subscribe now.
Comments are closed.