ಕುಣಿಗಲ್: ಕೊವಿಡ್ ಅಲೆಯ ನಡುವೆಯೂ ಪತ್ರಕರ್ತರು ಸಮಾಜ ಸೇರಿದಂತೆ ಸರ್ಕಾರ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಸರ್ಕಾರ ಪತ್ರಕರ್ತರನ್ನು ಕೊವಿಡ್ ವಾರಿಯರ್ ಎಂದು ಗುರುತಿಸಿದರೆ ಸಾಲದು, ಅವರಿಗೆ ನೀಡಬೇಕಾದ ಸವಲತ್ತುಗಳನ್ನು ಪ್ರಾಮಾಣಿಕವಾಗಿ ನೀಡಬೇಕೆಂದು ಶಾಸಕ ಡಾ.ರಂಗನಾಥ ತಿಳಿಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಎಲೆಕ್ಟ್ರಾನಿಕ್ ಮಾಧ್ಯಮಗಳಿಗಿಂತ ಮುದ್ರಣ ಮಾಧ್ಯಮದ ಹೊಣೆಗಾರಿಕೆ ಹೆಚ್ಚಿದೆ, ಪತ್ರಕರ್ತರು ವೃತ್ತಿ ಬದ್ಧತೆ ಮೆರೆಯುವ ಜೊತೆಯಲ್ಲಿ ಸಮಾಜದ ಸಮಸ್ಯೆಗೆ ಧ್ವನಿಯಾಗಿ ಸಮಾಜದ ಅಂಕುಡೊಂಕುಗಳನ್ನು ಸರಿದಾರಿಗೆ ತರುವ ಮಹತ್ತರ ಕೆಲಸ ಮಾಡಬೇಕಿದೆ. ತಾಲೂಕಿನ ಪತ್ರಕರ್ತರ ಸಮಸ್ಯೆಗೆ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾಧ್ಯವಾದಷ್ಟು ಸ್ಪಂದಿಸಲಾಗುವುದು ಎಂದರು.
ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಇಂದಿನ ದಿನಗಳಲ್ಲಿ ಪೀತ ಪತ್ರಿಕೋದ್ಯಮ ಸೃಷ್ಟಿಸುತ್ತಿರುವ ಸವಾಲುಗಳ ನಡುವೆ ಪತ್ರಿಕಾರಂಗ ಪ್ರಾಮಾಣಿಕವಾಗಿ, ಪರಿಣಾಮಕಾರಿಯಾಗಿ, ಬದ್ಧತೆಯಿಂದ ಕೆಲಸ ಮಾಡುವಂತಾಗಿದೆ. ಪತ್ರಕರ್ತರು ತಮ್ಮ ಜವಾಬ್ದಾರಿ ಅರಿತು ವೃತ್ತಿಬದ್ಧತೆ ಕಾಪಾಡಿಕೊಂಡು ಸಮಾಜದಲ್ಲಿ ತಮ್ಮ ತನ ಉಳಿಸಿಕೊಂಡು ಕೆಲಸ ನಿರ್ವಹಿಸಿದಾಗ ಸಮಾಜವೂ ಗುರುತಿಸುತ್ತದೆ ಎಂದರು.
ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ಪತ್ರಿಕಾರಂಗದ ಹೆಸರಲ್ಲಿ ಬ್ಲಾಕ್ ಮೇಲ್ ಮಾಡುವ ಪ್ರವೃತ್ತಿ ಕೆಲವರಿಂದ ನಡೆಯುತ್ತಿದೆ. ಇಂತಹವರ ಗುರುತಿಸಿ ನಿಯಂತ್ರಿಸಿ ಬದ್ಧತೆಯ ಪತ್ರಿಕೋದ್ಯಮ ನಡೆಸುವ ನಿಟ್ಟಿನಲ್ಲಿ ಪತ್ರಕರ್ತರು ಕಾರ್ಯ ಪ್ರವೃತ್ತರಾಗಬೇಕು ಎಂದರು.
ಪಿಎಲ್‌ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್, ಪುರಸಭೆ ಅಧ್ಯಕ್ಷ ನಾಗೇಂದ್ರ, ತಹಶೀಲ್ದಾರ್ ಮಹಾಬಲೇಶ್, ತಾಪಂ ಇಒ ಜೋಸೆಫ್, ಡಿವೈಎಸ್ಪಿ ರಮೇಶ್, ಮುಖ್ಯಾಧಿಕಾರಿ ರವಿಕುಮಾರ್, ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ತಾಲೂಕು ಅಧ್ಯಕ್ಷ ರವೀಂದ್ರ ಸೇರಿದಂತೆ ಪದಾಧಿಕಾರಿಗಳು ಇತರರು ಇದ್ದರು. ಕೊರೊನ ವಾರಿಯರ್ ಗಳಿಗೆ ಸನ್ಮಾನಿಸಲಾಯಿತು.
ಸರ್ಕಾರ ಪತ್ರಕರ್ತರಿಗೆ ಸೌಲತ್ತು ನೀಡಲಿ: ಡಾ.ರಂಗನಾಥ್
Get real time updates directly on you device, subscribe now.
Comments are closed.