ಟಿ.ಹೆಚ್.ಆನಂದ್ ಸಿಂಗ್
ಕುಣಿಗಲ್: ರಾಗಿ ತಿಂದವ ನಿರೋಗಿ ಆದರೆ ರಾಗಿ ಬೆಳೆದವ ರೋಗಿಯಾಗುವ ಕಾಲ ಬಂದಿದೆ ಎಂದು ಕೆಲ ರೈತರು ಕೃಷಿ ಚಟುವಟಿಕೆಯ ವಸ್ತುಗಳ ಬೆಲೆ ಏರಿಕೆಯಿಂದ ಹೈರಾಣಾಗಿ ಅಳಲು ತೋಡಿಕೊಳ್ಳುವಂತಾಗಿದೆ.
ಒಂದು ಎಕರೆ ರಾಗಿ ಕೃಷಿ ಕೈಗೊಳ್ಳಲು ಆಗುವ ಖರ್ಚು, ಬೆಳೆ ಕೈಗೆ ಬಂದ ನಂತರ ಬರುವ ಹಣ, ರಾಗಿ ಉತ್ಪಾದಕ ರೈತನ ಚಿಂತೆಗೆ ಕಾರಣವಾಗಿ ರೋಗಿಯಾಗುವಂತೆ ಮಾಡಿದೆ. 90 ರಿಂದ 120 ದಿನ ರಾಗಿ ಬೆಳೆಯುವ ಕೃಷಿ ಕಾಯಕ ಹವಮಾನ ಚೆಲ್ಲಾಟದ ಜೊತೆ ರೈತ ನಸೀಬು ಪರೀಕ್ಷೆ ಮಾಡುವ ಕೆಲಸವಾಗಿದೆ. ಒಂದು ಎಕರೆಯಲ್ಲಿ ರಾಗಿ ಬೆಳೆ ಕೈಗೊಳ್ಳಲು ಮೊದಲು ಭೂಮಿ ಸಿದ್ಧತೆಗೆ ಸೀಳು ಉಕ್ಕೆ ಮಾಡಬೇಕು, ಇದಕ್ಕೆ ಟ್ರಾಕ್ಟರ್ ನಲ್ಲಿ ಒಂದು ಸಾವಿರ ಖರ್ಚು, ನಂತರ ಮುಗುಚು ಉಕ್ಕೆ ಮೂರು ತರಹ ಮಾಡಬೇಕು, ಇದಕ್ಕೆ ಮೂರು ಸಾವಿರ ನಂತರ ಸಾಲು ಹೊಡೆಯಲು ಒಂದು ಸಾವಿರ, ಒಂದುವರೆ ಮೂಟೆ ಗೊಬ್ಬರ, ಬಿತ್ತನೆ ಬೀಜ ಐದು ಕೆಜಿ, ಹಾಕಲು ಆಳುಗಳ ವೆಚ್ಚ ಎಲ್ಲಾ ಸೇರಿ ನಾಲ್ಕುವರೆ ಸಾವಿರ, ಬಿತ್ತನೆ ನಂತರ ದನ ಬಳಸಿ ಸಾಲು ಹಲುಬೆ ಹೊಡೆಯಲು ಒಂದು ಸಾವಿರ, ಹದಿನೈದು ದಿನ ನಂತರ ದನಗಳ ಬಳಸಿ ಅಡ್ಡ ಸಾಲು ಹಲುಬೆ ಹೊಡೀಬೇಕು, ಇದಕ್ಕೆ ಒಂದು ಸಾವಿರ, ಇನ್ನು 25 ರಿಂದ 30 ದಿನ ಕಳೆದ ಮೇಲೆ ಅಡ್ಡ ಸಾಲು ಹಲುಬೆ ದನ ಬಳಸಿ ಮಾಡಲು ಒಂದು ಸಾವಿರ ಖರ್ಚು, ಇಷ್ಟು ಮಾಡಿದ ನಂತರ ಅಗತ್ಯ ಇದ್ದರೆ ಮತ್ತೆ ಸ್ವಲ್ಪ ಗೊಬ್ಬರ ಹಾಕಲು ಒಂದು ಸಾವಿರ ಇಷ್ಟು ಮಾಡಲು 45 ದಿನ ಕಳೆದಿರುತ್ತೆ.
ಆನಂತರ ಕಾಳು ಕಟ್ಟುವ ಸಮಯದಲ್ಲಿ ಎಳೆಬಿಸಿಲು, ವಾತಾವರಣ ತೇವಾಂಶ ಪ್ರಮುಖವಾಗಿರುತ್ತದೆ, ಎಲ್ಲವೂ ರೈತನ ಶ್ರಮಕ್ಕೆ ಸಾಥ್ ನೀಡಿದರೆ ರೈತ ಕೈಗೊಳ್ಳುವ ಬಿತ್ತನೆ ರಾಗಿಯ ತಳಿಯ ಮೇಲೆ 90 ರಿಂದ 120 ದಿನದೊಳಗೆ ಫಸಲು ಕೈಗೆ ಬರುತ್ತದೆ. ಕಟಾವು ಮಾಡಿ ಹೊಲದಲ್ಲೆ ಹರಿಬಿಡಬೇಕು, ಕಟಾವು ಮಾಡಲು ಎಕರೆಗೆ ಸುಮಾರು 15 ಸಾವಿರ ಖರ್ಚು ಬರುತ್ತದೆ. (ಇಬ್ಬರು ಆಳು ಒಂದು ಸಾಲು ಕೊಯ್ಯಲು ಊಟ, ತಿಂಡಿ, ವಗೈರೆ ನೀಡುವ ಜೊತೆ 800 ರೂ.ನೀಡಬೇಕು, ಹತ್ತುದಿನದ ಲೆಕ್ಕದಲ್ಲಿ ಕೊಯ್ದು ಹರಿಬಿಡುತ್ತಾರೆ). ಫಸಲು ಕೊಯ್ದು ತೆನೆ ಹರಿಬಿಟ್ಟಿರುವ ವೇಳೆ ಕನಿಷ್ಟ ಪ್ರಮಾಣದ ಬಿಸಿಲು ಬರಬೇಕು, ಮಳೆ ಬಂದರೆ ಇಲ್ಲಿಯವರೆಗೂ ಮಾಡಿದ ಶ್ರಮ ಮಳೆ ನೀರಿನಲ್ಲಿ ತೊಳೆದು ಹೋಗುತ್ತೆ, ಹರಿಬಿಟ್ಟ ತೆನೆ ಒಣಗಿದ ನಂತರ ಅವನ್ನು ಕಟ್ಟಿ ಕಂತೆ ಮಾಡಿ ಕಣದಲ್ಲಿ ಮೆದೆ ಹಾಕಲು ಮೂರು ಸಾವಿರ ಖರ್ಚು ಬರುತ್ತೆ.
ಕಣ ಸಾರಿಸಲು ಮುಯ್ಯಾಳುಗಳ ರೀತಿ ಬಳಕೆ ಆಗುವ ಕಾರಣ ಕಣ ಸಾರಿಸುವ ಖರ್ಚು ಉಳಿಯುತ್ತೆ, ಆದರೆ ಕಣದಲ್ಲಿ ಒಂದು ಎಕರೆಯಲ್ಲಿ ಬೆಳೆದ ಫಸಲು ತೆನೆ ಬಡಿದು ಅಚ್ಚುಕಟ್ಟು ಮಾಡಲು ಎರಡು ದಿನಕ್ಕೆ ಆರು ಸಾವಿರ ಖರ್ಚು ಬರುತ್ತದೆ. ಇಲ್ಲಿಯವರೆಗೂ ರೈತನಿಗೆ 36,500 ರಿಂದ 40,000 ಸಾವಿರ ಖರ್ಚು ಬರುತ್ತದೆ. ಒಂದು ಎಕರೆಗೆ ಕನಿಷ್ಟ 12 ರಿಂದ ಗರಿಷ್ಟ 16 ಕ್ವಿಂಟಾಲ್ ರಾಗಿ ಬರುತ್ತದೆ. ಹೇಗೆ ಹಾಕಿದರೂ 14 ಕ್ವಿಂಟಾಲ್ ರಾಗಿ ಅಂದರೂ ಸರ್ಕಾರದ ಬೆಂಬಲಬೆಲೆ ಯೋಜನೆ ಮೂಲಕ ರಾಗಿ ಕ್ವಿಂಟಾಲ್ ಗೆ ಮೂರು ಸಾವಿರ ನಿಗದಿ ಮಾಡಿದ್ದು 52 ಸಾವಿರ ಸಿಗುತ್ತದೆ. ಬರೀ ಕೂಲಿ ಖರ್ಚು ಲೆಕ್ಕ ಹಾಕಿದ್ದು ರೈತ ನೂರು ದಿನಗಳ ಕಾಲ ಕೃಷಿ ಚಟುವಟಕೆಯಲ್ಲಿ ನಿಗಾ ವಹಿಸುವ ಅವನ ಕೂಲಿ ನರೇಗಾ ಲೆಕ್ಕಾಚಾರದಂತೆ ಲೆಕ್ಕ ಹಾಕಿದರೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ಹಾಕಿದರೂ ಒಟ್ಟಾರೆ 60,000ರೂ ವೆಚ್ಚವಾಗಿರುತ್ತೆ. ಅದೂ ಹವಮಾನ ಸಹಕರಿಸಿದರೆ ಮಾತ್ರ, ಇಂತಹ ಸ್ಥಿತಿಯಲ್ಲಿ ರೈತ ಲೆಕ್ಕಾಚಾರ ಹಾಕಿದರೆ ರಾಗಿ ಬೆಳದ ರೈತ ಲಾಭಾಂಶ ಸಿಗದೆ ಆರ್ಥಿಕ ಸ್ಥಿತಿ, ದೈಹಿಕ ಸ್ಥಿತಿ ಹದಗೆಟ್ಟು ರೋಗಿಯಾಗದೆ ಇನ್ನೇನು ಎಂಬ ಪ್ರಶ್ನೆ ಕಾಡುತ್ತದೆ.
ರಾಗಿಬೆಳೆ ಬೆಳೆಯಲು ಖರ್ಚು-ಲಾಭ ಲೆಕ್ಕ ಹಾಕಿದರೆ ಬೆಳೆಯೊದಕ್ಕೆ ಆಗಲ್ಲ ಹಾಗಂತ ಸುಮ್ಮನಿರಲು ಆಗಲ್ಲ, ಸರ್ಕಾರದ ಬೆಂಬಲ ಬೆಲೆ 3 ಸಾವಿರ, ಆದರೆ ಮಾಡಿರುವ ಸಾಲ ತೀರಿಸಲು ಮನೆ ಬಾಗಿಲಲ್ಲೆ ಎರಡು ಸಾವಿರಕ್ಕೆ ಕೊಟ್ಟು ಸುಮ್ಮನಾಗಿ ಮತ್ತಷ್ಟು ನಷ್ಟ ಮಾಡಿಕೊಳ್ಳೋ ರೈತರ ಸಂಖ್ಯೆ ಕಡಿಮೆ ಇಲ್ಲ ಸರ್, ಏನು ಮಾಡಲಾಗದು.
-ಗಂಗಾಧರ, ರೈತ
ಸ್ವಾಮಿನಾಥನ್ ವರದಿ ಯಥಾವತ್ತು ಜಾರಿಗೆ ತರುವ ಜೊತೆಯಲ್ಲಿ ಡೀಸೆಲ್ ಬೆಲೆ ಇಳಿಕೆ ಮಾಡಿದಲ್ಲಿ ರೈತರು ಬೆಳೆದ ಬೆಳೆಯಲ್ಲಿ ಲಾಭ ನೋಡಲು ಸಾಧ್ಯ, ಆದರೆ ಆಳುವವರಿಗೆ ಅಳುವ ರೈತರ ಕಷ್ಟ ತಿಳಿಯುತ್ತಿಲ್ಲ.
-ಅನಿಲ್‌ಕುಮಾರ್, ರೈತ ಸಂಘದ ತಾಲೂಕು ಅಧ್ಯಕ್ಷ.
Comments are closed.