ಸರಕಾರಿ ನೌಕರರ ಮಕ್ಕಳು ಸ್ವಾಭಿಮಾನಿಗಳಾಗಲಿ: ಷಡಕ್ಷರಿ

ರಾಜ್ಯ ಸರ್ಕಾರ ಸರಕಾರಿ ನೌಕರರ ಪರವಾಗಿದೆ

148

Get real time updates directly on you device, subscribe now.

ತುಮಕೂರು: ಸರಕಾರಿ ನೌಕರರ ಮಕ್ಕಳು, ಪ್ರತಿಭಾವಂತರಾಗಿ ತಮ್ಮ ಕಾಲ ಮೇಲೆ ನಿಂತು ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಕ್ಷರಿ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತುಮಕೂರು ಜಿಲ್ಲಾ ಶಾಖೆಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿ, ಸರಕಾರಿ ನೌಕರರ ಮಕ್ಕಳಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ, ಬೇರೆ ಜಿಲ್ಲೆಗಳಿಗೆ ಹೊಲಿಕೆ ಮಾಡಿದರೆ ತುಮಕೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೇ.95 ಕ್ಕಿಂತಲೂ ಹೆಚ್ಚು ಅಂಕ ಪಡೆದ ನೌಕರರ ಮಕ್ಕಳಿರುವುದು ಸಂತೋಷದ ವಿಚಾರ. ಇದೇ ಸಾಧನೆಯನ್ನು ಮುಂದಿನ ಶೈಕ್ಷಣಿಕ ತರಗತಿಗಳಲ್ಲಿಯೂ ಮಾಡಿ, ಸರಕಾರಿ, ಖಾಸಗಿ ಕ್ಷೇತ್ರದಲ್ಲಿ ನೌಕರಿಯ ಜೊತೆಗೆ, ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿದು ಆರ್ಥಿಕವಾಗಿ ಸಬಲರಾಗುವ ಮೂಲಕ ತಂದೆ, ತಾಯಿಗಳಿಗೆ ಹೆಸರು ತರುವಂತೆ ಸಲಹೆ ನೀಡಿದರು.
ಶತಮಾನದ ಹೊಸ್ತಿಲಿನಲ್ಲಿರುವ ಸರಕಾರಿ ನೌಕರರ ಸಂಘದ ಇತಿಹಾಸದಲ್ಲಿಯೇ ಹೋರಾಟವಿಲ್ಲದೆ ಡಿಎ, ಶಿಶುಪಾಲನೆ ರಜೆ, ಇನ್ನಿತರ ಸೌಲಭ್ಯ ಪಡೆದಿರುವುದು ಇದೇ ಮೊದಲು. ಪ್ರಸ್ತುತ ರಾಜ್ಯ ಸರಕಾರ ನೌಕರರ ಪರವಾಗಿದೆ. ಕೇಂದ್ರ ಸರಕಾರಿ ನೌಕರರಿಗೆ ತುಟ್ಟಿ ಭತ್ಯೆ ಘೋಷಣೆಯಾದ ಕೇವಲ ಒಂದು ಗಂಟೆಯಲ್ಲಿಯೇ ರಾಜ್ಯ ಸರಕಾರದ ನೌಕರರಿಗೂ ತುಟಿಭತ್ಯೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನೀಡಿದ್ದಾರೆ. ಅಲ್ಲದೆ ಶೇ.60 ರಷ್ಟು ಸಂಖ್ಯೆಯಲ್ಲಿರುವ ಮಹಿಳಾ ನೌಕರರು ತಮ್ಮ ಮಕ್ಕಳ ಪಾಲನೆಗಾಗಿ ವರ್ಷದಲ್ಲಿ 180 ದಿನಗಳ ಶಿಶುಪಾಲನಾ ರಜೆ ಮಂಜೂರು ಮಾಡಿದ್ದಾರೆ. ಆದರೆ ಈ ರಜೆಯನ್ನು ಮಹಿಳಾ ನೌಕರರು ವಿವೇಚನೆಯಿಂದ ಬಳಕೆ ಮಾಡಬೇಕು. ಅನಗತ್ಯವಾಗಿ ರಜೆ ಹಾಕಿ, ಸರಕಾರಿ ಕೆಲಸದಲ್ಲಿ ಏರುಪೇರಾದರೆ, ಸರಕಾರ ಸದರಿ ಸೌಲಭ್ಯ ಹಿಂಪಡೆಯುವ ಸಾಧ್ಯತೆ ಇದೆ ಎಂದು ಸಿ.ಎಸ್‌.ಷಡಕ್ಷರಿ ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳನ್ನು ಅಭಿನಂದಿಸಿ ಮಾತನಾಡಿದ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್‌, ಬಿಜೆಪಿ ಸರಕಾರದಲ್ಲಿ ಸರಕಾರಿ ನೌಕರರಿಗೆ ಹೆಚ್ಚಿನ ಅನುಕೂಲವಾಗಿದೆ, ಅವರ ಎಲ್ಲಾ ಬೇಡಿಕೆಗಳನ್ನು ಯಾವುದೇ ಪ್ರತಿಭಟನೆಯಿಲ್ಲದೆ ಈಡೇರಿಸಲಾಗಿದೆ. ಸರಕಾರಿ ನೌಕರರು ಜನರು ಮತ್ತು ಸರಕಾರದ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಸಲಹೆ ನೀಡಿದರು.
ಸರಕಾರಿ ನೌಕರರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಎನ್‌.ನರಸಿಂಹರಾಜು ಮಾತನಾಡಿ, ಕೋವಿಡ್‌ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಸರಕಾರಿ ನೌಕರರ ಮಕ್ಕಳಿಗೆ ಸ್ಪೂರ್ತಿ ನೀಡುವ ನಿಟ್ಟಿನಲ್ಲಿ ಈ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಸ್ತುತ ರಾಜ್ಯ ಸರಕಾರ ನಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸುತ್ತಿದೆ. ಹೊಸ ಪಿಂಚಿಣಿ ವ್ಯವಸ್ಥೆ ಬದಲು ಹಳೆ ಪಿಂಚಿಣಿ ಜಾರಿ ಹಾಗೂ ಕೇಂದ್ರ ಸರಕಾರಿ ನೌಕರರಿಗೆ ಸಮಾನವಾದ ವೇತನವನ್ನು ರಾಜ್ಯ ಸರಕಾರಿ ನೌಕರರಿಗೆ ನೀಡಬೇಕೆಂಬ ಬೇಡಿಕೆಗಳು ಬಾಕಿ ಇವೆ. ಶೀಘ್ರದಲ್ಲಿಯೇ ಇತ್ಯರ್ಥವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳನ್ನು ಅಭಿನಂದಿಸಲಾಯಿತು.
ಇದೇ ವೇಳೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ವತಿಯಿಂದ ಶಿಕ್ಷಕರ ಸಂಘದಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಿರುವ ರೀತಿ, ಸರಕಾರಿ ನೌಕರರ ಸಂಘದಲ್ಲಿಯೂ ಮಹಿಳೆಯರಿಗೆ ಶೇ.33 ರಷ್ಟು ಸ್ಥಾನಮಾನವನ್ನು ಪದಾಧಿಕಾರಿಗಳು ಮತ್ತು ನಿರ್ದೇಶಕರ ಹುದ್ದೆಗಳಲ್ಲಿ ನೀಡುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಕ್ಷರಿ ಅವರಿಗೆ ಸಲ್ಲಿಸಿದರು.
ಸರಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್‌ ಗೌಡಪ್ಪ ಪಾಟೀಲ್‌, ಖಜಾಂಚಿ ಶ್ರೀನಿವಾಸ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್‌, ನಿರ್ದೇಶಕ ರೇಣುಕಾರಾಧ್ಯ, ತಾಲೂಕು ಅಧ್ಯಕ್ಷರಾದ ಆರ್‌.ಪರಶಿವಮೂರ್ತಿ, ಹೆಚ್‌.ವಿ.ವೆಂಕಟೇಶಯ್ಯ, ಡಾ.ಕಿರಣ್‌, ಹೆಚ್‌.ಇ.ರಮೇಶ್‌, ಜಿ.ಪಿ.ಪರಮೇಶ್‌, ಜಿ.ಆರ್‌.ವೆಂಕಟೇಶಯ್ಯ, ಬಿ.ಎಂ.ಲಕ್ಷ್ಮಿಶ್‌, ಕೆ.ವಿ.ನಾರಾಯಣ್‌, ಹೆಚ್‌.ಎಂ.ರುದ್ರೇಶ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!